ನ್ಯೂಸ್

ಖಾತೆ ಹಂಚಿಕೆ ಕಗ್ಗಂಟು: ದೆಹಲಿಯಿಂದ ಇನ್ನೂ ಬಾರದ ಸಂದೇಶ, ವರಿಷ್ಠರ ಸೂಚನೆ ನಿರೀಕ್ಷೆಯಲ್ಲಿ ಸಿಎಂ

ಬೆಂಗಳೂರು: ರಾಜ್ಯ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ಬಳಿಕ ಇದೀಗ ಮಹತ್ವದ ಖಾತೆಗಳಿಗಾಗಿ ಹಗ್ಗಜಗ್ಗಾಟ ನಡೆದಿದೆ. ಇದರಿಂದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ವರಿಷ್ಠರತ್ತ ಮುಖಮಾಡಿರುವುದರಿಂದ ನೂತನ ಮಂತ್ರಿಗಳ ಖಾತೆಗಳ ಹಂಚಿಕೆ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆಗಳಿವೆ.

ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ ಪ್ರಕಾರ ಶುಕ್ರವಾರವೇ ಖಾತೆಗಳ ಹಂಚಿಕೆಯಾಗಬೇಕಾಗಿತ್ತು. ಆದರೆ ವರಿಷ್ಠರು ಗ್ರೀನ್ ಸಿಗ್ನಲ್ ನೀಡದ ಕಾರಣ ಖಾತೆಗಳ ಹಂಚಿಕೆ ತಡವಾಗುತ್ತಿದೆ ಎನ್ನಲಾಗುತ್ತಿದೆ. ಕೇಂದ್ರ ಸಚಿವ ಸಂಪುಟ ಪುನಾರಚನೆಯಾದ ದಿನವೇ ಸಂಜೆಯೊಳಗೆ ಖಾತೆಗಳು ಹಂಚಿಕೆಯಾದವು. ಬಿ.ಎಸ್.ಯಡಿಯೂರಪ್ಪ ಆಡಳಿತಾವಧಿಯಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಮರುದಿನವೇ ಖಾತೆಗಳು ಹಂಚಿಕೆಯಾಗಿದ್ದವು. ಆದರೆ ಈಗ ಮೂರು ದಿನವಾದರೂ ಹಂಚಿಕೆಯಾಗಿಲ್ಲ.

ಪಟ್ಟು ಹಿಡಿದ ಸಚಿವರು: ಬೊಮ್ಮಾಯಿ ಸಂಪುಟ ವಿಸ್ತರಣೆಯಾಗಿ ಮೂರು ದಿನಗಳು ಕಳೆದರೂ ಯಾವ ಸಚಿವರಿಗೆ ಯಾವ ಖಾತೆ ಎನ್ನುವುದು ಇತ್ಯರ್ಥವಾಗಿಲ್ಲ. ಸಚಿವರಿಗೆ ವಿಧಾನಸೌಧ, ವಿಕಾಸ ಸೌಧ ಕೊಠಡಿಗಳನ್ನು ಹಂಚಿದ ರೀತಿಯಲ್ಲಿ ಸರಾಗವಾಗಿ ಖಾತೆಗಳು ಹಂಚಿಕೆಯಾಗುವ ನಿರೀಕ್ಷೆಯಿತ್ತು. ಈ ನಡುವೆ ಹಲವು ಸಚಿವರು ನಿರ್ದಿಷ್ಟ ಖಾತೆಗೆ ಪಟ್ಟು ಹಿಡಿದಿದ್ದರೆ, ಸಿಎಂ ಕೊಡಲು ಮುಂದಾಗಿರುವ ಖಾತೆಗಳು ಕೆಲವರಿಗೆ ಇಷ್ಟವಿಲ್ಲವೆಂದು ಮೂಲಗಳು ತಿಳಿಸಿವೆ.

ಪಟ್ಟಿ ಬದಲಾವಣೆ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗುರುವಾರ ರಾತ್ರಿ ಖಾತೆಗಳ ಯಾದಿ ಸಿದ್ಧಪಡಿಸಿ ಅದನ್ನು ವರಿಷ್ಠರಿಗೆ ಕಳುಹಿಸಿದ್ದಾರೆ. ಅದರಲ್ಲಿ ಕೆಲವು ಬದಲಾವಣೆಗಳಾಗುವ ಸಾಧ್ಯತೆಗಳಿರುವುದು ತಡವಾಗಲು ಕಾರಣವಾಗಿದೆ.

ಜಟಿಲತೆಗೆ ಕಾರಣ?

  • ಸಿಎಂ ಸಲ್ಲಿಸಿದ ಖಾತೆಗಳ ಪಟ್ಟಿಗೆ ಗ್ರೀನ್ ಸಿಗ್ನಲ್ ನೀಡದ ವರಿಷ್ಠರು
  • ಹಳಬರಿಗೆ ಹಿಂದಿನ ಖಾತೆಗಳನ್ನೇ ಮುಂದುವರಿಸಬೇಕೆಂಬ ಸಲಹೆ
  • ಪ್ರಮುಖ ಖಾತೆಗೆ ಹಿರಿಯರ ಒತ್ತಡ
  • ಸಂಘ-ಪರಿವಾರ ಮೂಲದವರಿಗೆ ಪ್ರಮುಖ ಖಾತೆ ಹಂಚಲು ಸೂಚನೆ
  • ಬೆಂಗಳೂರು ನಗರಾಭಿವೃದ್ಧಿ, ಇಂಧನ, ಜಲ ಸಂಪನ್ಮೂಲ, ಲೋಕೋಪಯೋಗಿ ಖಾತೆಗೆ ಹಿರಿಯರ ಪಟ್ಟು
  • ಗೃಹ, ಮುಜರಾಯಿ ಸೇರಿದಂತೆ ಕೆಲವು ಖಾತೆಗಳನ್ನು ಒಪ್ಪಿಕೊಳ್ಳಲು ಹಿಂದೇಟು
  • ಇಂಧನ, ಜಲ ಸಂಪನ್ಮೂಲ ತಮ್ಮ ಬಳಿಯೇ ಇಟ್ಟುಕೊಳ್ಳಲು ಸಿಎಂ ಒಲವು