ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಒಂದು ರಾಷ್ಟ್ರ ಒಂದು ಚುನಾವಣೆ’ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರೊಂದಿಗೆ ಸದ್ಯ ನಡೆಯುತ್ತಿರುವ ಸಂಸತ್ನ ಚಳಿಗಾಲದ ಅಧಿವೇಶನದಲ್ಲೇ ಸರ್ಕಾರ ಸಮಗ್ರ ಮಸೂದೆಯೊಂದನ್ನು ಮಂಡಿಸುವ ಸಾಧ್ಯತೆ ದಟ್ಟೆ ೖಸಿದೆ.
ಒಂದು ದೇಶ ಒಂದು ಚುನಾವಣೆ ಜಾರಿಗೆ ಪಣತೊಟ್ಟಿರುವ ಬಿಜೆಪಿ ಉದ್ದೇಶಿತ ಮಸೂದೆ ಮಂಡನೆಗಾಗಿ ಸಿದ್ಧತೆ ನಡೆಸಿದೆ. ಈ ಸಂಬಂಧ ತನ್ನೆಲ್ಲಾ ಸಂಸದರಿಗೆ ಮೂರು ಸಾಲಿನ ವಿಪ್ ಕೂಡ ಜಾರಿ ಮಾಡಿದೆ. ಮಸೂದೆಗೆ ಸಂಬಂಧಿಸಿದ ಕೆಲ ಪ್ರಮುಖ ಶಾಸಕಾಂಗ ವ್ಯವಹಾರಗಳ ಚರ್ಚೆಗಾಗಿ ಡಿ.13 ಮತ್ತು 14ರಂದು ಸದನಕ್ಕೆ ಹಾಜರಾಗುವಂತೆ ಸೂಚನೆ ನೀಡಿರುವುದಾಗಿ ಮೂಲಗಳು ತಿಳಿಸಿವೆ. ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಬುಧವಾರವಷ್ಟೇ ಒಂದು ರಾಷ್ಟ್ರ ಒಂದು ಚುನಾವಣೆ ಕುರಿತು ಪ್ರಬಲ ಪ್ರತಿಪಾದನೆ ಮಾಡಿ, ದೇಶದಲ್ಲಿ ಆಗಾಗ್ಗೆ ಚುನಾವಣೆಗಳು ನಡೆಯುವುದು ಒಟ್ಟಾರೆ ಪ್ರಗತಿಗೆ ಅಡೆತಡೆಗಳನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದರು. ಆ ಮೂಲಕ ಮಸೂದೆ ಜಾರಿಯ ಸುಳಿವು ನೀಡಿದ್ದರು. ಭಾರತದ ಪ್ರಗತಿ ಮತ್ತು ಅಭಿವೃದ್ಧಿಗೆ ಆಗಾಗ್ಗೆ ಚುನಾವಣೆಗಳು ನಡೆಯುವುದು ಅಡಚಣೆಯಾಗಿ ಕಾಡುತ್ತಿದೆ. ದೇಶದಲ್ಲಿ ಬೇರೆ ಯಾವುದೇ ವಿಷಯ ನಡೆಯುತ್ತಿರಬಹುದು ಅಥವಾ ನಡೆಯದೇ ಇರಬಹುದು. ಆದರೆ ಚುನಾವಣಾ ತಯಾರಿ ವರ್ಷದ ಹನ್ನೆರಡು ತಿಂಗಳಲ್ಲೂ ಮುಂದುವರಿಯುತ್ತಿರುತ್ತದೆ.
ಲೋಕಸಭಾ ಚುನಾವಣೆ ಮುಗಿದರೆ ವಿಧಾನಸಭೆ ಚುನಾವಣೆ... ಈಗ ಹರಿಯಾಣ, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎಲೆಕ್ಷನ್ ಮುಗಿದಿದೆ. ದೆಹಲಿ ವಿಧಾನಸಭಾ ಚುನಾವಣೆ ಸದ್ಯದಲ್ಲೇ ನಡೆಯಲಿದೆ ಎಂದು ಚೌಹಾಣ್ ವಿವರಿಸಿದರು. ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂಧಿಸಿ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಸಮಿತಿಯ ಲೋಕಸಭೆ ಮತ್ತು ರಾಜ್ಯ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯಬೇಕು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಹಂತಹಂತವಾಗಿ ಚುನಾವಣೆ ನಡೆಸಬೇಕು ಎಂಬ ಬಗೆಗಿನ ಶಿಫಾರಸುಗಳನ್ನು ಕೇಂದ್ರ ಸರ್ಕಾರ ಕಳೆದ ಸೆಪ್ಟೆಂಬರ್ನಲ್ಲಿ ಅಂಗೀಕರಿಸಿತ್ತು.
ಲೋಕಸಭೆ ಮತ ಲೆಕ್ಕಾಚಾರ: ಒಟ್ಟು 543 ಸದಸ್ಯ ಬಲದ ಲೋಕಸಭೆಯಲ್ಲಿ, ಒಂದು ದೇಶ ಒಂದು ಚುನಾವಣೆ ಮಸೂದೆ ಪಾಸಾಗಲು ಎರಡನೇ ಮೂರರಷ್ಟು ಸದಸ್ಯರ ಬೆಂಬಲ ಬೇಕು ಅಂದರೆ 362 ಮತಗಳು. ಆದರೆ ಎನ್ಡಿಎ ಸದಸ್ಯರಿರುವುದು 293 ಮಾತ್ರ. ಹೀಗಾಗಿ ಸದನದಲ್ಲಿ 439 ಸದಸ್ಯರು ಉಪಸ್ಥಿತರಿದ್ದು ಉಳಿದ 100ಕ್ಕೂ ಹೆಚ್ಚು ಸದಸ್ಯರು ಗೈರು ಹಾಜರಾದರೆ ಮಾತ್ರ ಮಸೂದೆಗೆ ಬೆಂಬಲ ಸಿಗುತ್ತದೆ. ಹೀಗಾಗಿ ಎನ್ಡಿಎಯೇತರ ಪಕ್ಷಗಳ ಬೆಂಬಲ ಸರ್ಕಾರಕ್ಕೆ ಅನಿವಾರ್ಯ.
ರಾಜ್ಯಸಭೆಯಲ್ಲೂ ಕಷ್ಟ: ರಾಜ್ಯಸಭೆಯಲ್ಲಿ ಎನ್ಡಿಎ 113 ಸದಸ್ಯರನ್ನು ಹೊಂದಿದೆ. ಇದರ ಜತೆಗೆ ಆರು ನಾಮನಿರ್ದೇಶಿತ ಸಂಸದರು, ಇಬ್ಬರು ಸ್ವತಂತ್ರರೂ ಸೇರಿ ಆಡಳಿತ ಮೈತ್ರಿಕೂಟದ ಸದಸ್ಯರ ಸಂಖ್ಯೆ 121ಕ್ಕೆ ತಲುಪಲಿದೆ. ವಿಪಕ್ಷಗಳ ಐಎನ್ಡಿಎಐ ಒಕ್ಕೂಟ 85 ಸಂಸದರನ್ನು ಹೊಂದಿದೆ. ಎಲ್ಲ 231 ರಾಜ್ಯಸಭೆ ಸದಸ್ಯರು ಮಸೂದೆಗೆ ಮತ ಚಲಾಯಿಸುವ ವೇಳೆ ಹಾಜರಿದ್ದಲ್ಲಿ ಮಸೂದೆ ಅಂಗೀಕಾರಕ್ಕೆ ಎನ್ಡಿಎಗೆ 154 ಮತ ಸಿಗಬೇಕು.
ಏನಿದು ಏಕ ಚುನಾವಣೆ?: ಭಾರತದ ಸಂಸತ್ನ ಕೆಳಮನೆಯಾದ ಲೋಕಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದೇ ಒಂದು ದೇಶ, ಒಂದು ಚುನಾವಣೆ.
3 ಶಾಸನಗಳ ಪರಿಚಯ?: ಉದ್ದೇಶಿತ ಮಸೂದೆಯ ಭಾಗವಾಗಿ ಮೂರು ಶಾಸನಗಳನ್ನು ಪರಿಚಯಿಸಬಹುದೆಂದು ಕೋವಿಂದ ಸಮಿತಿ ಶಿಫಾರಸು ಮಾಡಿದೆ. ಇದು ಸಂವಿಧಾನ ತಿದ್ದುಪಡಿ ಮಸೂದೆ ಆಗಿರಲಿದೆಯೇ ಅಥವಾ ಸಮಗ್ರವಾದ ಒಂದು ಮಸೂದೆ ಇರಬಹುದೇ ಎಂಬ ಬಗ್ಗೆ ಕೇಂದ್ರದಿಂದ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಈ ರೀತಿಯ ಮಸೂದೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ವಿವಿಧ ಹಂತಗಳನ್ನು ಒಳಗೊಂಡಿರಲಿದೆ.
ಬೆಂಬಲದ ಕುತೂಹಲ: ಒಂದು ದೇಶ ಒಂದು ಚುನಾವಣೆ ಮಸೂದೆಗೆ ಸಂಸತ್ತಿನ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದ ಅಗತ್ಯವಿದೆ. ಎನ್ಡಿಎ ಮೈತ್ರಿಕೂಟಕ್ಕೆ ಬಹುಮತವಿದ್ದರೂ ಮಿತ್ರಪಕ್ಷಗಳಾದ ಜೆಡಿಯು, ಟಿಡಿಪಿ ಈ ಬಗ್ಗೆ ಯಾವ ಅಭಿಪ್ರಾಯ ಹೊಂದಿವೆ ಎನ್ನುವುದು ಕುತೂಹಲ ಮೂಡಿಸಿದೆ.
ಕೋವಿಂದ ಸಮಿತಿ ಶಿಫಾರಸು
ಮಸೂದೆ ಬಳಿಕ ಮುಂದೇನು?
ಅನುಕೂಲಗಳು
ವಿರೋಧ ಏಕೆ?
ಈ ಮಸೂದೆ ಸಂಸದೀಯ ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಜತೆಗೆ ರಾಜ್ಯಗಳ ಹಕ್ಕುಗಳನ್ನು ಮೊಟಕುಗೊಳಿಸುವ ದುರಾಲೋಚನೆ ಕೂಡಾ ಅಡಗಿದೆ.
| ಸಿದ್ದರಾಮಯ್ಯ ಮುಖ್ಯಮಂತ್ರಿ