ನ್ಯೂಸ್

ಮತ್ತೆ ಮೂರು ವಿಮಾನ ನಿಲ್ದಾಣಗಳು ಅದಾನಿ ಕಂಪನಿ ತೆಕ್ಕೆಗೆ; ಕೇಂದ್ರ ಸಂಪುಟದಿಂದ ಸಹಮತಿ

ನವದೆಹಲಿ: ಖಾಸಗಿ ಕ್ಷೇತ್ರಕ್ಕೆ ಹೆಚ್ಚು ಅವಕಾಶಗಳನ್ನು ನೀಡುವ ನಿಟ್ಟಿನಲ್ಲಿ ಕೇಂದ್ರ ಸಚಿವ ಸಂಪುಟ ಬುಧವಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಧೀನದಲ್ಲಿರುವ ತಿರುವನಂತಪುರ, ಜೈಪುರ ಹಾಗೂ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಇನ್ನು ಮುಂದೆ ಖಾಸಗಿ ಸಹಭಾಗಿತ್ವದೊಂದಿಗೆ ಮಾಡಲು ನಿರ್ಧರಿಸಿದೆ.

ಇದು ಶಾಶ್ವತ ಕ್ರಮವೇನು ಅಲ್ಲ, 50 ವರ್ಷಗಳ ಅವಧಿಗೆ ನಿಲ್ದಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಲಿದೆ. ಇದರಿಂದ ದೊರೆಯುವ ಮೊತ್ತವನ್ನು ದೇಶದ ಸಣ್ಣ ನಗರಗಳಲ್ಲಿ ವಿಮಾನ ನಿಲ್ದಾಣಗಳ ಸ್ಥಾಪನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ಕೇಂದ್ರ ಸಚಿವ ಪ್ರಕಾಶ್​ ಜಾವಡೇಕರ್​ ಹೇಳಿದ್ದಾರೆ.

ಒಂದು ವರ್ಷದ ಹಿಂದಷ್ಟೇ ಮಂಗಳೂರು, ಅಹ್ಮದಾಬಾದ್​, ಲಖನೌ ವಿಮಾನ ನಿಲ್ದಾಣಗಳನ್ನು ಅದಾನಿ ಸಮೂಹಕ್ಕೆ ವಹಿಸಿಕೊಡಲಾಗಿತ್ತು. ಇದೀಗ ಮತ್ತೆ ಮೂರು ವಿಮಾನ ನಿಲ್ದಾಣಗಳ ನಿರ್ವಹಣೆ ಅದಾನಿ ಸಮೂಹಕ್ಕೆ ಸಿಕ್ಕಂತಾಗಿದೆ. ಇದಕ್ಕೂ ಮುನ್ನ ಮುಂಬೈ ಹಾಗೂ ದೆಹಲಿ ವಿಮಾನ ನಿಲ್ದಾಣಗಳ ನಿರ್ವಹಣೆಯನ್ನು ಜಿಎಂಆರ್​ ಹಾಗೂ ಜಿವಿಕೆ ಕಂಪನಿಗೆ ನೀಡಲಾಗಿತ್ತು. ಅಲ್ಲಿಗೆ ದೇಶದ ಬಹುತೇಕ ಪ್ರಮುಖ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವಕ್ಕೆ ನೀಡಿದಂತಾಗಲಿದೆ.

ಈ ಹಿಂದೆ ಆದಾಯ ಹಂಚಿಕೆ ಸೂತ್ರವನ್ನು ಅನುಸರಿಸಲಾಗಿತ್ತು. ಆದರೆ, ಈ ಬಾರಿ ಪ್ರತಿ ಪ್ರಯಾಣಿಕನಿಗೆ ವಿಧಿಸಲಾಗುವ ಶುಲ್ಕ ವಿಧಾನ ಅನುಸರಿಸಲಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಹೆಚ್ಚಾದಂತೆ ಸರ್ಕಾರಕ್ಕೆ ದೊರೆಯುವ ಆದಾಯವೂ ಹೆಚ್ಚಾಗಲಿದೆ. ವಿಮಾನ ನಿಲ್ದಾಣದ ಎಲ್ಲ ಆಸ್ತಿಗಳ ನಿರ್ವಹಣೆ, ಅಭಿವೃದ್ಧಿ, ವಿನ್ಯಾಸ ಮೊದಲಾದವುಗಳು ಸಂಸ್ಥೆಯ ಹೊಣೆಯಾಗಿರಲಿದೆ.