ನ್ಯೂಸ್

ಸಚಿವಾಕಾಂಕ್ಷಿಗಳಿಗೆ ಶಾಕ್ ಕೊಟ್ಟ ಸಿಎಂ: ದೆಹಲಿ ಭೇಟಿ ಇನ್ನೂ ನಿರ್ಧಾರವಿಲ್ಲ

ಅಧಿವೇಶನಕ್ಕೆ ಸಜ್ಜು ಅಧಿವೇಶನ ತಯಾರಿ ಕುರಿತು ಸಚಿವ ಸಹೋದ್ಯೋಗಿಗಳ ಜತೆ ರ್ಚಚಿಸಿರುವೆ. ಸದನದ ಮೂಲಕ ವಾಸ್ತವಾಂಶ ಜನರ ಮುಂದಿಡಲು ಸಜ್ಜಾಗಿದ್ದೇವೆ. ಆಯಾ ಇಲಾಖೆಗಳ ಸಚಿವರಿಗೆ ಏನೆಲ್ಲ ತಯಾರಿ ಮಾಡಿಕೊಳ್ಳಬೇಕೆಂಬ ಮಾರ್ಗದರ್ಶನ ನೀಡಿರುವೆ. ಕರೊನಾ ನಿಯಂತ್ರಣ, ಅತಿವೃಷ್ಟಿ ಹಾಗೂ ನೆರೆ ಪರಿಹಾರ ಕಾರ್ಯಕ್ಕೆ ಕೈಗೊಂಡ ಕ್ರಮಗಳ ಕುರಿತು ಅಂಕಿ-ಅಂಶಗಳ ಸಹಿತ ವಿವರಿಸುತ್ತೇವೆ ಎಂದು ಬಿಎಸ್​ವೈ ಹೇಳಿದರು.

ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಸದ್ಯಕ್ಕಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳುವ ಮೂಲಕ ಸಚಿವ ಪದವಿ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದ್ದಾರೆ. ಮುಂದಿನ ವಾರ ಬಿಎಸ್​ವೈ ನವದೆಹಲಿಗೆ ತೆರಳಿ, ವರಿಷ್ಠರ ಒಪ್ಪಿಗೆ ಪಡೆಯುತ್ತಾರೆ. ವಿಧಾನಮಂಡಲ ಮಳೆಗಾಲದ ಅಧಿವೇಶನಕ್ಕೆ ಮುನ್ನವೇ ಸಂಪುಟ ವಿಸ್ತರಿಸುವರು ಎಂದು ನಿರೀಕ್ಷಿಸಿದವರಿಗೆ ತಣ್ಣೀರು ಎರಚಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ದೆಹಲಿ ಭೇಟಿ ಇನ್ನೂ ನಿರ್ಧಾರವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅತಿವೃಷ್ಟಿ, ನೆರೆ ಹಾನಿ ಸಮೀಕ್ಷೆಗೆ ಕೇಂದ್ರ ಅಧ್ಯಯನ ತಂಡ 2 ದಿನಗಳ ರಾಜ್ಯ ಪ್ರವಾಸ ಕೈಗೊಂಡಿದ್ದು, ರಾಜ್ಯದ ಅಧಿಕಾರಿಗಳು ಜತೆಗಿದ್ದಾರೆ. ವಸ್ತುಸ್ಥಿತಿ ಪರಿಶೀಲನೆಗೆ ತೆರಳುವ ಮುನ್ನ ಈ ತಂಡಕ್ಕೆ ಕಳೆದ ವರ್ಷ ಏನಾಗಿತ್ತು, ಈ ವರ್ಷ ಏನಾಗಿದೆ ಎಂಬುದರ ಕುರಿತು ಸಮಗ್ರ ಮಾಹಿತಿ ನೀಡಲಾಗಿದೆ. ಕೇಂದ್ರ ಸರ್ಕಾರಕ್ಕೆ ಈ ತಂಡ ಏನು ವರದಿ ಸಲ್ಲಿಸುತ್ತದೋ ನೋಡೋಣ. ನಂತರ ದೆಹಲಿಗೆ ತೆರಳಿ ವಾಸ್ತವಾಂಶ ಮನವರಿಕೆ ಮಾಡಿಕೊಡುವ ಚಿಂತನೆಯಿದೆ. ಆದರೆ ದಿನಾಂಕ ನಿಗದಿಯಾಗಿಲ್ಲ ಎಂದರು.