ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ದೆಹಲಿಯ ಮೌಜ್ಪುರ್ ಏರಿಯಾದಲ್ಲಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವುದಾಗಿ ಭಾನುವಾರ ಸಂಜೆ ವರದಿಯಾಗಿದೆ.
ಸಿಎಎ ವಿರೋಧಿಸಿ ಸಾಕಷ್ಟು ಸಂಖ್ಯೆಯಲ್ಲಿ ಧರಣಿ ಕುಳಿತಿರುವ ಜಫರಾಬಾದ್ ಬಳಿಯೇ ಮೌಜ್ಪುರ ಇದೆ. ಏಕಕಾಲದಲ್ಲಿ ಎರಡು ಗುಂಪುಗಳು ಒಂದೆಡೆ ಸೇರಿದಾಗ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ.
ಹೀಗಾಗಿ ಜಫರಾಬಾದ್ಗೆ ಹಾಗೂ ಮೌಜ್ಪುರ್ ಸಂಧಿಸುವ ಸ್ಥಳದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದೆಹಲಿ ಪೂರ್ವ ಜಿಲ್ಲೆ ಸೇರಿದಂತೆ ಇತರೆ ಪ್ರದೇಶದ ಡಿಸಿಪಿಗಳಿಗೂ ಸ್ಥಳಕ್ಕೆ ಬುಲಾವ್ ನೀಡಲಾಗಿದೆ. ಅಲ್ಲದೆ, ಅರೆಸೇನಾ ಪಡೆಯನ್ನು ಸ್ಥಳಕ್ಕೆ ನಿಯೋಜಿಸಲಾಗಿದೆ.
ಇದನ್ನೂ ಓದಿ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಜಾಫ್ರಾಬಾದ್ ಪ್ರದೇಶಕ್ಕೂ ವಿಸ್ತರಣೆ
ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿತ ಮತ್ತು ಸಿಎಎ ವಿರೋಧಿಗಳ ನಡುವೆ ಕಲ್ಲು ತೂರಾಟ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪೊಲೀಸರು ಸಾಕಷ್ಟು ಸಂಖ್ಯೆಯಲ್ಲಿ ಇರದಿದ್ದ ಕಾರಣ ಪರಿಸ್ಥಿತಿ ನಿಯಂತ್ರಣಯನ್ನು ಮೀರಿತ್ತು. ಹೀಗಾಗಿ ಪರಿಸ್ಥಿತಿಯನ್ನು ತಹಬದಿಗೆ ತರಲು ಪೊಲೀಸ್ ಸಿಬ್ಬಂದಿ ಅಶ್ರುವಾಯು ಪ್ರಯೋಗ ಮಾಡಿದ್ದಾರೆ.
ಈ ಘಟನೆಯಲ್ಲಿ ಅನೇಕ ಪ್ರತಿಭಟನಾಕಾರರು ಕಲ್ಲು ತೂರಾಟದಿಂದ ಗಾಯಗೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ಜೈ ಶ್ರೀರಾಮ ಎಂಬ ಘೋಷಣೆಯು ಮೊಳಗಿತ್ತು ಎಂದು ಹೇಳಲಾಗಿದೆ.
ಇದಕ್ಕೂ ಮುನ್ನ ಬಿಜೆಪಿಯ ವಿವಾದಿತ ನಾಯಕ ಕಪಿಲ್ ಮಿಶ್ರಾ ಮತ್ತು ಇತರರು ಮಧ್ಯಾಹ್ನ 3 ಗಂಟೆ ಸಮಯಕ್ಕೆ ಜಫರಾಬಾದ್ ಮೆಟ್ರೋ ನಿಲ್ದಾಣ ಬಳಿ ಬಂದು ರಸ್ತೆಯನ್ನು ಖಾಲಿ ಮಾಡುವಂತೆ ಪ್ರತಿಭಟನಾಕಾರರನ್ನು ಕೋರಿದ್ದಾರೆ. ಈ ವೇಳೆ ಮಾತಿನ ಚಕಮಕಿ ಉಂಟಾಗಿ 4 ಗಂಟೆ ಸುಮಾರಿಗೆ ರಸ್ತೆಗೆ ಇಳಿದ ಜನರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ತಿಳಿದುಬಂದಿದೆ. (ಏಜೆನ್ಸೀಸ್)