ನ್ಯೂಸ್

2ನೇ ಬಾರಿಗೆ ಭಾರತದ ಅತ್ಯಂತ ಕಲುಷಿತ ನಗರ ಪಟ್ಟಿಗೆ ಸೇರಿದ ಬೈರ್ನಿಹತ್! ತುರ್ತು ಕ್ರಮಕ್ಕೆ ನಿವಾಸಿಗಳ ಆಗ್ರಹ | Byrnihat

Byrnihat: ಅಸ್ಸಾಂ-ಮೇಘಾಲಯ ಗಡಿಯಲ್ಲಿರುವ ಬೈರ್ನಿಹತ್ ನಗರವು ಸತತ ಎರಡನೇ ವರ್ಷವೂ ಭಾರತದ ಅತ್ಯಂತ ಕಲುಷಿತ ನಗರವೆಂದು ಘೋಷಣೆಯಾಗಿದೆ. ಸದ್ಯ ಈ ಸಂಗತಿ ಸ್ಥಳೀಯ ನಿವಾಸಿಗಳನ್ನು ಮತ್ತಷ್ಟು ಕೆರಳಿಸಿದೆ. ಗಾಳಿಯ ಗುಣಮಟ್ಟದ ಮಟ್ಟ ತೀವ್ರ ಹದಗೆಟ್ಟಿದ್ದು, ಮಾಲಿನ್ಯವು ಈ ಪ್ರದೇಶದಲ್ಲಿ ವಾಸಿಸುವ ಜನರ ಜೀವನ, ಆರೋಗ್ಯ ಮತ್ತು ಜೀವನೋಪಾಯದ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ವಿಷಯವನ್ನು ಎಷ್ಟು ಬಾರಿ ಒತ್ತಿ ಹೇಳಿದರೂ ಅಧಿಕಾರಿಗಳು ಮಾತ್ರ ಇತ್ತ ಗಮನಹರಿಸುತ್ತಿಲ್ಲ ಎಂದು ಜನರು ಕಿಡಿಕಾರಿದ್ದಾರೆ.

"ಸ್ಥಳೀಯ ಕಾರ್ಖಾನೆಗಳ ಅನಿಯಂತ್ರಿತ ಕಾರ್ಯಾಚರಣೆಯೇ ಈ ಪರಿಸ್ಥಿತಿಗೆ ಕಾರಣ ಎಂದು ನಿವಾಸಿಗಳು ಆರೋಪಿಸಿದ್ದಾರೆ. ಇಲ್ಲಿನ ಕಾರ್ಖಾನೆಗಳಿಂದ ವಿಪರೀತ ಮಾಲಿನ್ಯ, ತುಂಬಾ ಧೂಳು ಉಂಟಾಗುತ್ತಿದೆ. ನೀವು ಸುತ್ತಲೂ ನೋಡಿದರೆ, ಇಲ್ಲಿ ಹಸಿರಿನ ಗಿಡ-ಮರಗಳು ಕಾಣಿಸುವುದೇ ಇಲ್ಲ. ಯಾವುಧೊ ಮರಳುಗಾಡಿಗೆ ಬಂದಿದ್ದೇವೆ ಎಂದು ಭಾಸವಾಗುತ್ತದೆ" ಎಂದು ಡಾನ್ ಬಾಸ್ಕೋ ಹೈಯರ್ ಸೆಕೆಂಡರಿ ಶಾಲೆಯ ಫಾದರ್ ಕೆಜೆ ಪೀಟರ್ ನಗರದ ಪರಿಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

"ಹಸಿರು ಸಸ್ಯಗಳಿಲ್ಲ, ಕಂದು ಎಲೆಗಳು ಮಾತ್ರ ಕಾಣ ಸಿಗುತ್ತವೆ. ಅನೇಕ ಜನರು ಉಸಿರಾಟದ ತೊಂದರೆಗಳು, ಹೃದಯ ಮತ್ತು ಕ್ಷಯರೋಗದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಬೆಳಗ್ಗೆ ಹೊತ್ತಿಗೆ ತರಗತಿ ಕೊಠಡಿಗಳು ಸಹ ಧೂಳಿನಿಂದ ತುಂಬಿರುತ್ತವೆ. ವಿದ್ಯಾರ್ಥಿಗಳು ಅದೇ ವಾತಾವರಣದಲ್ಲಿ ಉಸಿರಾಡುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಬೈರ್ನಿಹತ್‌ನಲ್ಲಿರುವ ವಾಯು ಗುಣಮಟ್ಟ ಸೂಚ್ಯಂಕ (AQI) ನಿರಂತರವಾಗಿ ಅಪಾಯಕಾರಿ ಎಂದೇ ವರ್ಗೀಕರಿಸಲಾಗಿದೆ" ಎಂದು ಪೀಟರ್ ಹೇಳಿದ್ದಾರೆ.

"ನಾವು ಉಸಿರಾಡುವ ಗಾಳಿಯೂ ಮದ್ಯ, ಧೂಮಪಾನಕ್ಕಿಂತ ಹೆಚ್ಚು ವಿಷಕಾರಿಯಾಗಿದೆ. ಅಧಿಕಾರಿಗಳ ಕ್ರಮಕ್ಕಾಗಿ ಬಹಳ ದಿನಗಳಿಂದ ಕಾದಿದ್ದೇವೆ. ಆದರೆ, ಇನ್ನೂ ಕಾಯಲು ನಮ್ಮಿಂದ ಸಾಧ್ಯವಿಲ್ಲ. ಈಗ ನಾವು ನಮ್ಮ ಉಳಿವಿಗಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಪ್ರತಿಭಟನಾನಿರತ ನಿವಾಸಿಗಳು ಇಲ್ಲಿನ ಕಾರ್ಖಾನೆಗಳನ್ನು ಮುಚ್ಚುವಂತೆ ಒತ್ತಾಯಿಸುತ್ತಿಲ್ಲ. ಬದಲಿಗೆ ನಗರದಲ್ಲಿ ಕಠಿಣ ಮಾಲಿನ್ಯ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವುದು ಅಗತ್ಯ ಎಂದು ಆಗ್ರಹಿಸುತ್ತಿದ್ದಾರೆ" ಎಂದು ಹೇಳಿದರು,(ಏಜೆನ್ಸೀಸ್).