ನ್ಯೂಸ್

ಮುನಿಸು ಮರೆತು ಒಂದಾದ್ರ ವಿಜಯೇಂದ್ರ-ಯತ್ನಾಳ್; ದೆಹಲಿಯಲ್ಲಿ ಒಟ್ಟಾಗಿ ಕಾಣಿಸಿಕೊಂಡ ರೆಬೆಲ್​ ನಾಯಕರು

ನವದೆಹಲಿ: ರಾಜ್ಯ ಬಿಜೆಪಿ ಘಟಕದ ಬದ್ಧ ವೈರಿಗಳೆಂದೆ ಬಿಂಬಿತರಾಗಿರುವ ವಿಜಯಪುರ ಶಾಸಕ ಬಸನ್​ಗೌಡ ಪಾಟೀಲ್​ ಯತ್ನಾಳ್​ ಹಾಗೂ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಇಂದು ನವದೆಹಲಿಯಲ್ಲಿ ಮುಖಾಮುಖಿಯಾಗಿದ್ದು, ಒಂದೇ ಫ್ರೇಮಿನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿದ ಬಿ.ವೈ. ವಿಜಯೇಂದ್ರ ಬಳಿಕ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಅವರನ್ನು ಸಂಸತ್​ ಆವರಣದಲ್ಲಿ ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ಘಟಕದ ರೆಬೆಲ್​ ನಾಯಕರಾದ ಬಸನ್​ಗೌಡ ಪಾಟೀಲ್​ ಯತ್ನಾಳ್​, ರಮೇಶ್​ ಜಾರಕಿಹೊಳಿ, ಸಂಸದರಾದ ಪಿ.ಸಿ. ಮೋಹನ್​, ಪಿ.ಸಿ. ಗದ್ದಿಗೌಡರ್, ಮಾಜಿ ಸಂಸದ ಬಿ.ವಿ. ನಾಯಕ್​ ಉಪಸ್ಥಿತರಿರುವುದನ್ನು ನೋಡಬಹುದಾಗಿದೆ.

ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಯತ್ನಾಳ್​ ಪಕ್ಷದ ಕಾರ್ಯಕ್ರಮಗಳಲ್ಲಿ ಅಷ್ಟಾಗಿ ಕಾಣಿಸಿಕೊಂಡಿರಲಿಲ್ಲ. ಪಕ್ಷದ ರಾಜ್ಯಮಟ್ಟದ ಕಾರ್ಯಕ್ರಮಗಳಲ್ಲೂ ಯತ್ನಾಳ್ ದೂರ ಉಳಿದಿದ್ದರು. ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಯತ್ನಾಳ್ ಜೊತೆ ಮೊದಲ‌ ಬಾರಿಗೆ ಮುಖಾಮುಖಿ ಭೇಟಿಯಾಗಿದ್ದಾರೆ.

ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಜೊತೆ ಮಾತುಕತೆ ವೇಳೆ ಇದು ಆಕಸ್ಮಿಕ ಭೇಟಿಯೋ ಅಥವಾ ಇಬ್ಬರು ನಾಯಕರ ಮಧ್ಯೆ ನಡೆದ ಸಂಧಾನವೋ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.