ಬೆಂಗಳೂರು: ಇಂದು ಬಿಜೆಪಿ ಶಾಸಕ ಹಾಗೂ ನಾಯಕ ಬಿವೈ ವಿಜಯೇಂದ್ರ ಸುದ್ದಿಗೋಷ್ಟಿಯನ್ನು ಆಯೋಜಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಬರ, ರೈತರ ಸಮಸ್ಯೆ, ರೈತರ ಆತ್ಮಹತ್ಯೆ, ಲೋಡ್ ಶೆಡ್ಡಿಂಗ್ ಮೇಕೆದಾಟು ಮುಂತಾದ ವಿಚಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿಸ ಬಿ.ವೈ. ವಿಜಯೇಂದ್ರ, ಮೊದಲಿಗೆ ರೈತರ ಸಮಸ್ಯೆ, ಮುಂಗಾರು, ಬರ ಮುಂತಾದ ವಿಚಾರಗಳ ಕುರಿತಾಗಿ ಮಾತನಾಡಿದರು. “ನುಡಿದಂತೆ ನಡೆಯದ ಸರ್ಕಾರವನ್ನ ಈಗ ಎಚ್ಚರಿಸಬೇಕು. ರಾಜ್ಯದ ರೈತರ ಸಮಸ್ಯೆ, ಮುಂಗಾರು ಕೊರತೆ ಇದೆ. ಬರದ ಛಾಯೆ ಬಗ್ಗೆ ಸರ್ಕಾರವನ್ನು ಎಚ್ಚರಿಸಲಿದ್ದೇವೆ. ರಾಜ್ಯದಲ್ಲಿ ಭೀಕರ ಬರದ ಛಾಯೆ ಆವರಿಸಿದೆ. ಹೀಗಾಗಿ ಅತ್ಯಂತ ತುರ್ತಾಗಿ ತೀರ್ಮಾನ ತೆಗೆದುಕೊಂಡು ಮುನ್ನಗ್ಗಬೇಕು. ರಾಜ್ಯ ಸರ್ಕಾರಕ್ಕೆ ಯಾಕೋ ಮಂಪರು ಕವಿದಂತೆ ಕಾಣುತ್ತಿದೆ. ಅದು ಆಮೆ ವೇಗದಲ್ಲಿ ಸಾಗುತ್ತಿದೆ.
ಮುಂದೆ ಏನೇ ಹೆಚ್ಚುಕಡಿಮೆ ಆದರೂ ಈ ಸರ್ಕಾರ ಹೊಣಹೊರಬೇಕಿದೆ. ಅಂಗೈ ಹುಣ್ಣಿಗೆ ಕನ್ನಡಿಬೇಕೆ? ರೋಮ್ ಹೊತ್ತು ಉರಿಯುತ್ತಿರುವಾಗ ದೊರೆ ಪಿಟೀಲು ಬಾರಿಸ್ತಿದ್ನಂತೆ ಎಂಬಂತಾಗಿದೆ ನಮ್ಮ ರಾಜ್ಯದ ಪರಿಸ್ಥಿತಿ. ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸದೇ ದುಡ್ಡು ವೆಚ್ಚ ಮಾಡುತ್ತಿದೆ. ಅವರ ಕೇಂದ್ರ ನಾಯಕರನ್ನ ಕರೆಸಿ ರಾಜ್ಯದಲ್ಲಿ ಜಾತ್ರೆ ಮಾಡುತ್ತಿದ್ದಾರೆ. ಕಾಲಾನುಸಾರ ಹವಮಾನ ತಜ್ಞರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತಲೇ ಬಂದಿದಾರೆ. ಆದರೆ ಕಿವುಡ ಸರ್ಕಾರ ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಂಡಿಲ್ಲ.
ಸರ್ಕಾರ, ಮಂತ್ರಿಗಳು ಬರ ಪರಿಸ್ಥಿತಿಯನ್ನ ಹಗುರವಾಗಿ ತೆಗೆದುಕೊಂಡು ಹೆಚ್ಚಿನ ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಕೊಡುತ್ತಿದ್ದಾರೆ. ಹೀಗಾಗಿ ಜನರೂ ಸರ್ಕಾರಕ್ಕೆ ಅಧಿಕಾರದ ಮದ ಹತ್ತಿದೆ ಎಂದು ಮಾತಮಾಡುತ್ತಿದ್ದಾರೆ. ಹೀಗಾಗಿ ತತ್ತಕ್ಷಣ ರಾಜ್ಯದ ರೈತರ ಕ್ಷಮೆಕೇಳಬೇಕೆಂದು ಆಗ್ರಹಿಸುತ್ತಿದ್ದೇನೆ” ಎಂದು ಕಿಡಿಕಾರಿದ್ದಾರೆ.
ಈ ಸಂದರ್ಭದಲ್ಲಿ ಲೋಕಸಭಾ ಚುನಾವಣೆಯ ಬಗ್ಗೆಯೂ ಪ್ರಸ್ತಾಪ ಮಾಡಿದ ಶಾಸಕರು, “ಸರ್ಕಾರ ತನ್ನ ಬೆನ್ನನ್ನು ತಾನು ತಟ್ಟಿಕೊಳ್ತಿದೆ. ಪ್ರತಿ ಹಂತದಲ್ಲೂ ಕೇಂದ್ರವನ್ನ ಟೀಕೆ ಮಾಡುತ್ತಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರಕ್ಕೆ ಬರುತ್ತಿದೆ. ಜನರನ್ನು ಅಡ್ಡದಾರಿಯಲ್ಲಿ ಕರೆದೊಯ್ಯಲು ಹೋಗ್ತಿದಾರೆ. ಮುಖ್ಯಮಂತ್ರಿಗಳು ಬರದ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೀತಾರೆ. ಇದರ ಹಿಂದೆ ದುರುದ್ದೇಶ ಅಡಗಿದೆ. ಒಂದು ಕಡೆ ಇವರು ಕೊಟ್ಟ ಯೋಜನೆ ಪೂರೈಸಲು ಆಗುತ್ತಿಲ್ಲ. ಮತ್ತೊಂದೆಡೆ ಸಂಬಳ ನೀಡಲೂ ಆಗುತ್ತಿಲ್ಲ. ಹೀಗಾಗಿ ಬರ ಪೀಡಿತ ತಾಲೂಕು ಘೋಷಣೆಗೆ ಮಾನದಂಡ ಸಡಿಲಿಕೆಗೆ ಪತ್ರ ಬರೆದಿದ್ದಾರೆ” ಎಂದು ರಾಜ್ಯ ಸರ್ಕಾರದ ಮೇಲೆ ಆರೋಪಿಸಿದ್ದಾರೆ.
ಇನ್ನು ಬರ ಘೋಷಿಸಲು ಆಗುತ್ತಿರುವ ಅಡಚಣೆ ಬಗ್ಗೆ ಸರ್ಕಾರದ ಬಗ್ಗೆ ವಾಗ್ದಾಳಿ ನಡೆಸಿದ ಬಿ.ವೈ. ವಿಜಯೇಂದ್ರ, “ಬರ ಘೋಷಣೆ, ರಾಜ್ಯದ ರೈತರು ಎದುರು ನೋಡುತ್ತಿದಾರೆ. ಆದರೆ ಸಚಿವರೇ ಮುಂದೂಡಿದ್ದಾರೆ. ಅವರು ಪರಿಶೀಲನೆ ಮಾಡಬೇಕು, ಅದ್ಯಯನ ಮಾಡಬೇಕು, ಪ್ರವಾಸ ಮಾಡಬೇಕು ಅಂತಾರೆ. ನಿಮಗೆ ಜಾತ್ರೆ ಮಾಡೋಕೆ ಟೈಮ್ ಇದೆ. ಇದಕ್ಕಿಲ್ವಾ?” ಎಂದು ಕಿಡಿಕಾರಿದರು.
ಇದೇ ವೇಳೆ ಅವರು, “ಅವರಿಗೆ ರೈತರ ಸಮಸ್ಯೆಗೆ ಸ್ಪಂದಿಸುವ ಮನಸ್ಸಿಲ್ಲ. ಯಾವಾಗ ಬರಪೀಡಿತ ತಾಲೂಕು ಘೋಷಿಸ್ತೀರಾ?” ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ತಮ್ಮ ತಂದೆ ಯಡಿಯೂರಪ್ಪ ಅವರ ಪ್ರಸ್ತಾಪ ಮಾಡಿದ ವಿಜಯೇಂದ್ರ, “ಕ್ಯಾಬಿನೆಟ್ ರಚನೆಯಾಗದಾಗ ಯಡಿಯೂರಪ್ಪ ಒಬ್ಬರೇ ಇದ್ದಾಗ ರಾಜ್ಯ ಪ್ರವಾಸ ಮಾಡಿದ್ರು. ತಕ್ಷಣ 5 ಲಕ್ಷ ರೈತರಿಗೆ ಪರಿಹಾರ ನೀಡಿದ್ದರು” ಎಂದು ನೆನಸಿಕೊಂಡರು.
ನಂತರ ಮೇಕೆದಾಟು ಯೋಜನೆ ಬಗ್ಗೆ ಪ್ರಸ್ತಾಪ ಮಾಡಿದ ಅವರು, ”ಡಿಕೆಶಿ ಸರ್ಕಾರ ಬರುವ ಮುನ್ನ ಮೇಕೆದಾಟು ಪಾದಯಾತ್ರೆ ಮಾಡಿದ್ರು. ಆದರೆ ಬಜೆಟ್ ನಲ್ಲಿಎಷ್ಟು ಹಣ ಮೀಸಲಿಟ್ಟೀದೀರಿ ಹೇಳಿ? ಕಾವೇರಿಗಾಗಿ ರೈತರು ಹಗಲು, ರಾತ್ರಿ ಹೋರಾಟ ಮಾಡ್ತಿದಾರೆ. ಅವರ ಹೋರಾಟವನ್ನು ಹತ್ತಿಕ್ಕುತಿದೀರಿ” ಎಂದು ಕಿಡಿಕಾರಿದರು.
ಇನ್ನು ಲೋಡ್ ಶೆಡ್ಡಿಂಗ್ ಬಗ್ಗೆಯೂ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿ.ವೈ. ವಿಜಯೇಂದ್ರ, “ಸಚಿವರು ಲೋಡ್‍ಶೆಡ್ಡಿಂಗ್ ಮಾಡಿಲ್ಲ ಅಂತಾರೆ. ನಮ್ಮ ಕ್ಷೇತ್ರದಲ್ಲಿ ಒಂದೆರಡು ತಾಸು ಕರೆಂಟ್ ಸಿಗ್ತಿಲ್ಲ. ರೈತರು ವಿದ್ಯುತ್ ಇಲ್ಲದೇ ಪರದಾಡುತಿದ್ದಾರೆ. ಕಾವೇರಿ ವಿಚಾರದಲ್ಲಿ ರಾಜ್ಯ ರೈತ ಸಂಘ ಅರ್ಜಿಹಾಕಿದೆ. ಇದಕ್ಕೆ ಏನುಕಾರಣ? ಈ ಸರ್ಕಾರ ಕಳ್ಳಾಟ ಆಡ್ತಿದೆ. ಪ್ರಾಮಾಣಿಕವಾಗಿ ಸುಪ್ರೀಂಕೋರ್ಟ್‍ನಲ್ಲಿ ಸರಿಯಾಗಿ ವಾದ ಆಗುತ್ತಿಲ್ಲ. ಈ ಸರ್ಕಾರದ ಬಗ್ಗೆ ರೈತರಿಗೆ ವಿಶ್ವಾಸ ಇಲ್ಲ” ಎಂದು ಆರೋಪಿಸಿದ್ದಾರೆ.