ನ್ಯೂಸ್

ಸತತ 4ನೇ ದಿನ ಗೂಳಿಯ ಗುಟುರು: ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿ ದಾಖಲೆ ಬರೆದ ಷೇರು ಸೂಚ್ಯಂಕ

ಮುಂಬೈ: ಭಾರತೀಯ ಷೇರು ಮಾರುಕಟ್ಟೆಯ ಬೆಂಚ್‌ಮಾರ್ಕ್ ಇಕ್ವಿಟಿ ಸೂಚ್ಯಂಕಗಳು ಸೋಮವಾರದಂದು ಹೊಸ ಉನ್ನತ ಮಟ್ಟ ತಲುಪುವ ಮೂಲಕ ದಾಖಲೆ ಬರೆದವು.

ಭಾರತದ ಆರ್ಥಿಕ ಬೆಳವಣಿಗೆಯ (ಜಿಡಿಪಿ) ದರ ಮುನ್ಸೂಚನೆಯನ್ನು ಮೂಡೀಸ್ ಸಂಸ್ಥೆ ಹೆಚ್ಚಿಸಿದ ವರದಿ ಪ್ರಕಟಿಸಿದ್ದು, ಷೇರು ಮಾರುಕಟ್ಟೆ ಏರುಗತಿಗೆ ಕಾರಣವಾಯಿತು. ಜಾಗತಿಕ ರೇಟಿಂಗ್ ಏಜೆನ್ಸಿ ಮೂಡೀಸ್ 2024 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯ ದರದ ಮುನ್ಸೂಚನೆಯನ್ನು ಶೇಕಡಾ 6.1 ರಿಂದ ಶೇಕಡಾ 6.8 ಕ್ಕೆ ಏರಿಸಿದೆ.

2024ರ ಭಾರತದ ಜಿಡಿಪಿ ಬೆಳವಣಿಗೆಯ ಮುನ್ಸೂಚನೆಯಂತೆ ಇಂಧನ ಮತ್ತು ಬ್ಯಾಂಕಿಂಗ್ ಷೇರುಗಳ ಖರೀದಿ ಹೆಚ್ಚಳದ ಹಿನ್ನೆಲೆಯಲ್ಲಿ ಷೇರು ಮಾರುಕಟ್ಟೆ ಹೆಚ್ಚಳ ಕಂಡಿತು. ಸತತ ನಾಲ್ಕನೇ ದಿನದ ವಹಿವಾಟಿನಲ್ಲಿ ಏರುಗತಿ ಕಂಡುಬಂದಿತು.

30-ಷೇರುಗಳ ಬಿಎಸ್‌ಇ ಸೂಚ್ಯಂಕವು 66.14 ಅಂಕಗಳು ಅಥವಾ ಶೇಕಡಾ 0.09 ರಷ್ಟು ಏರಿಕೆಯಾಗಿ 73,872.29 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ನೆಲೆಸಿತು. ದಿನದ ವಹಿವಾಟಿನಲ್ಲಿ, ಇದು 183.98 ಅಂಕಗಳ ಹೆಚ್ಚಳ ಕಂಡು 73,990.13 ರ ಇಂಟ್ರಾ-ಡೇ ಗರಿಷ್ಠ ಮಟ್ಟವನ್ನು ಮುಟ್ಟಿತ್ತು.

ನಿಫ್ಟಿ ಸೂಚ್ಯಂಕವು 27.20 ಅಂಕಗಳು ಅಥವಾ 0.12 ರಷ್ಟು ಏರಿಕೆಯಾಗಿ 22,405.60 ಅಂಕಗಳ ಜೀವಿತಾವಧಿ ಗರಿಷ್ಠ ಮಟ್ಟ ಮುಟ್ಟಿತು. ದಿನದ ವಹಿವಾಟಿನ ನಡುವೆ ಇದು 22,440.90 ರ ಇಂಟ್ರಾ-ಡೇ ಗರಿಷ್ಠ ಮಟ್ಟವನ್ನು ದಾಖಲಿಸಿತು.

ಸತತ ನಾಲ್ಕು ದಿನಗಳ ದಾಖಲೆಯ ವಹಿವಾಟಿನಲ್ಲಿ ಒಟ್ಟು ಸೂಚ್ಯಂಕವು 1,567 ಅಂಕಗಳು ಅಥವಾ ಶೇಕಡಾ 2.15 ರಷ್ಟು ಹೆಚ್ಚಳವಾದರೆ, ನಿಫ್ಟಿ ಸೂಚ್ಯಂಕವು 454 ಅಂಕಗಳು ಅಥವಾ ಶೇಕಡಾ 2 ರಷ್ಟು ಏರಿತು.

ಸೋಮವಾರದ ವಹಿವಾಟಿನಲ್ಲಿ ಐಟಿ, ಎಫ್‌ಎಂಸಿಜಿ ಮತ್ತು ಆಟೋ ಷೇರುಗಳು ಹಿನ್ನಡೆ ಕಂಡರೆ, ಬ್ಯಾಂಕ್‌ಗಳು, ಇಂಧನ ಮತ್ತು ಫಾರ್ಮಾ ಷೇರುಗಳಲ್ಲಿನ ಲಾಭ ಗಳಿಸಿದವು.

ಪ್ರಮುಖ ಷೇರುಗಳಲ್ಲಿ ಎನ್‌ಟಿಪಿಸಿ ಶೇ.3.5ರಷ್ಟು ಏರಿಕೆ ಕಂಡಿದೆ. ಪವರ್ ಗ್ರಿಡ್ ಶೇ. 2.63, ರಿಲಯನ್ಸ್ ಇಂಡಸ್ಟ್ರೀಸ್ ಶೇ.1.03 ಮತ್ತು ಆಕ್ಸಿಸ್ ಬ್ಯಾಂಕ್ ಶೇ.0.90ರಷ್ಟು ಏರಿಕೆ ಕಂಡಿವೆ. ಬಜಾಜ್ ಫಿನ್‌ಸರ್ವ್, ಟೆಕ್ ಮಹೀಂದ್ರಾ, ಐಸಿಐಸಿಐ ಬ್ಯಾಂಕ್, ಭಾರ್ತಿ ಏರ್‌ಟೆಲ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಕೂಡ ಲಾಭ ಗಳಿಸಿದವು. ಮತ್ತೊಂದೆಡೆ, JSW ಸ್ಟೀಲ್ ಶೇಕಡಾ 2.49ರಷ್ಟು ಕುಸಿದಿದೆ. ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟಾಟಾ ಸ್ಟೀಲ್, ಅಲ್ಟ್ರಾಟೆಕ್ ಸಿಮೆಂಟ್, ಇನ್ಫೋಸಿಸ್ ಮತ್ತು ಟೈಟಾನ್ ಕೂಡ ಹಿನ್ನಡೆ ಕಂಡಿವೆ.

ಇದೇ ವೇಳೆ ಬಿಎಸ್‌ಇ ಮಿಡ್‌ಕ್ಯಾಪ್ ಗೇಜ್ ಶೇಕಡಾ 0.16 ರಷ್ಟು ಏರಿದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.78 ರಷ್ಟು ಕುಸಿಯಿತು.

ವಿವಿಧ ವಲಯಗಳ ಷೇರುಗಳ ಪೈಕಿ, ತೈಲ ಮತ್ತು ಅನಿಲ ವಲಯದ ಷೇರುಗಳು ಶೇಕಡಾ 1.88 ರಷ್ಟು, ಇಂಧನ ಶೇಕಡಾ 1.71 ರಷ್ಟು, ವಿದ್ಯುತ್​ ಶೇಕಡಾ 1.67 ರಷ್ಟು, ಯುಟಿಲಿಟಿಸ್​ ಶೇಕಡಾ 1.45 ರಷ್ಟು, ದೂರಸಂಪರ್ಕ ಶೇಕಡಾ 0.50 ಮತ್ತು ಬ್ಯಾಂಕೆಕ್ಸ್ ಶೇಕಡಾ 0.39 ರಷ್ಟು ಜಿಗಿದವು. ಸರಕುಗಳು, ಗ್ರಾಹಕ ವಿವೇಚನೆ, ಎಫ್‌ಎಂಸಿಜಿ, ಐಟಿ ಮತ್ತು ಟೆಕ್ ವಲಯದ ಷೇರುಗಳು ಹಿನ್ನಡೆ ಕಂಡವು.

ಏಷ್ಯಾದ ಮಾರುಕಟ್ಟೆಗಳ ಪೈಕಿ, ಸಿಯೋಲ್, ಟೋಕಿಯೋ, ಶಾಂಘೈ ಮತ್ತು ಹಾಂಗ್ ಕಾಂಗ್ ಏರಿಕೆ ಕಂಡವು. ಐರೋಪ್ಯ ಮಾರುಕಟ್ಟೆಗಳ ಮಿಶ್ರ ನೋಟ ಕಂಡುಬಂದಿತು. ಅಮೆರಿಕದ ಮಾರುಕಟ್ಟೆಗಳು ಶುಕ್ರವಾರ ಲಾಭ ಕಂಡವು.

ಶನಿವಾರದ ವಿಶೇಷ ವಹಿವಾಟಿನಲ್ಲಿ, ಸೂಚ್ಯಂಕ 60.80 ಅಂಕಗಳು ಅಥವಾ 0.08 ರಷ್ಟು ಏರಿಕೆಯಾಗಿ 73,806.15 ರ ಸಾರ್ವಕಾಲಿಕ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತ್ತು. ನಿಫ್ಟಿ ಸೂಚ್ಯಂಕವು 39.65 ಅಂಕಗಳು ಅಥವಾ ಶೇಕಡಾ 0.18 ರಷ್ಟು ಏರಿಕೆಯಾಗಿ 22,378.40 ರ ಹೊಸ ಮುಕ್ತಾಯದ ಗರಿಷ್ಠ ಮಟ್ಟವನ್ನು ತಲುಪಿತು.