ನ್ಯೂಸ್

ಭಾರತ ಸಲಾಮಿ ನೀಡುವ ಸಾಮಂತ ರಾಜ್ಯವಲ್ಲ ಎಂದ ಸಂಸದ ಓವೈಸಿ! | Asaduddin Owaisi

Asaduddin Owaisi: ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಹೆಚ್ಚಿನ ಸುಂಕ ವಿಧಿಸಿದ ನಿರ್ಧಾರವನ್ನು ಟೀಕಿಸಿರುವ ಸಂಸದ ಅಸಾದುದ್ದೀನ್ ಓವೈಸಿ, ಭಾರತ ಸ್ವತಂತ್ರ ಸಾರ್ವಭೌಮ ರಾಷ್ಟ್ರ. ಚಕ್ರವರ್ತಿಯ ಆಸ್ಥಾನದಲ್ಲಿ ಸಲಾಮ್ ನೀಡುವ ಸಾಮಂತ ರಾಜ್ಯವಲ್ಲ ಎಂದಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಓವೈಸಿ, ರಷ್ಯಾದೊಂದಿಗೆ ವ್ಯಾಪಾರ ಮಾಡಿದ್ದಕ್ಕಾಗಿ ಟ್ರಂಪ್ ಅಸ್ಪಷ್ಟ ದಂಡ ಹೇರಿದ್ದು, ಈ ಕ್ರಮಗಳು ಭಾರತದ ಸಾರ್ವಭೌಮತೆ ಮತ್ತು ಆರ್ಥಿಕತೆಯ ಮೇಲಿನ ಉದ್ದೇಶಪೂರ್ವಕ ದಾಳಿ ಎಂದು ಬರೆದುಕೊಂಡಿದ್ದಾರೆ.

ನನ್ನ ದೇಶದ ಸರ್ಕಾರವನ್ನು ಶ್ವೇತಭವನದಲ್ಲಿ ಕೂತಿರುವ ಒಬ್ಬ ಬಫೂನ್-ಇನ್-ಚೀಫ್ ಬೆದರಿಸುತ್ತಿರುವುದು ಬೇಸರದ ಸಂಗತಿ, ಭಾರತದ ವಿರುದ್ಧ ಹೆಚ್ಚುತ್ತಿರುವ ಪ್ರತಿಕೂಲ ವ್ಯಾಪಾರ ಪದ್ಧತಿಗಳ ಬಗ್ಗೆ ತಾವೂ ಅನೇಕ ವರ್ಷಗಳಿಂದ ಸಂಸತ್ತಿನಲ್ಲಿ ಧ್ವನಿ ಎತ್ತುತ್ತಿರುವುದಾಗಿ ಟ್ವೀಟ್​ನಲ್ಲಿ ಉಲ್ಲೇಖಿಸಿದ್ದಾರೆ.

ಈ ರೀತಿಯ ಸುಂಕಗಳು ಭಾರತೀಯ MSMEಗಳು, ತಯಾರಕರು, ಐಟಿ ಸಂಸ್ಥೆಗಳು, ಸೇವಾ ಪೂರೈಕೆದಾರರು ಮತ್ತು ರೈತರ ಮೇಲೂ ಪರಿಣಾಮ ಬೀರುತ್ತವೆ ಎಂದಿದ್ದಾರೆ.

ಈ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮೌನವನ್ನು ಟೀಕಿಸಿರುವ ಓವೈಸಿ, ಟ್ರಂಪ್ ಸುಂಕವನ್ನು 56% ಕ್ಕೆ ಏರಿಸಿದರೆ ಮಾತ್ರವೇ ನಮ್ಮ ಪ್ರಧಾನಿಗಳ 56 ಇಂಚಿನ ಎದೆಯನ್ನು ನೋಡುತ್ತೇವೆಯೇ ಎಂದು ವ್ಯಂಗ್ಯವಾಡಿದ್ದಾರೆ.(ಏಜೆನ್ಸೀಸ್)