- ಟಾಲಿವುಡ್ನಿಂದ ಸಾಲು ಸಾಲು ಚಿತ್ರಗಳು ತೆರೆಗೆ
- ಹೈಬಜೆಟ್ ಸಾಲಿನಲ್ಲಿ ಬಹುನಿರೀಕ್ಷಿತ ಸಿನಿಮಾಗಳು
- 1000 ಕೋಟಿ ರೂ. ಗಡಿದಾಟಿದ ಚಿತ್ರಗಳು
ಆಂಧ್ರಪ್ರದೇಶ: ಟಾಲಿವುಡ್ನಿಂದ ಸಾಲು ಸಾಲು ಚಿತ್ರಗಳು ತೆರೆಗೆ ಬರಲು ಸಜ್ಜಾಗಿದ್ದು, ಸ್ಟಾರ್ ಹೀರೋಗಳು ಮತ್ತು ನಿರ್ದೇಶಕರ ಕಾಂಬೊ ಸಿನಿಮಾಗಳು ಸದ್ಯ ಭಾರತೀಯ ಚಿತ್ರೋದ್ಯಮದಲ್ಲಿ ಸಖತ್ ಸದ್ದು ಮಾಡುತ್ತಿವೆ. ಈ ಪೈಕಿ ಸ್ಟಾರ್ ನಿರ್ದೇಶಕ ಎಸ್.ಎಸ್ ರಾಜಮೌಳಿ-ಪ್ರಿನ್ಸ್ ಮಹೇಶ್ ಬಾಬು ಮತ್ತು ಅಲ್ಲು ಅರ್ಜುನ್-ಅಟ್ಲೀ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ ಸಿನಿಮಾಗಳ ಮೇಲೆ ಸಿನಿಪ್ರಿಯರ ಕಣ್ಣು ಬಿದ್ದಿದೆ.
ಮಹೇಶ್ ಬಾಬು ಅವರ 'ವಾರಣಾಸಿ' ಒಂದೆಡೆಯಾದರೆ, ಅಲ್ಲು ಅರ್ಜುನ್ ಅವರ ಸಿನಿಮಾ ಮತ್ತೊಂದೆಡೆ. ಈ ಇಬ್ಬರು ಸ್ಟಾರ್ ನಟರ ಸಿನಿಮಾಗಳು ಬಹುನಿರೀಕ್ಷಿತ ಚಿತ್ರಗಳ ಪಟ್ಟಿಗೆ ಸೇರಿದ್ದು, ಕಥಾಹಂದರ ಹಾಗೂ ಬಜೆಟ್ ವಿಷಯದಲ್ಲಿ ಹಲವರ ಗಮನ ಸೆಳೆದಿದೆ. ಇತ್ತೀಚೆಗಷ್ಟೇ, ವಾರಣಾಸಿ ಚಿತ್ರದ ಟೈಟಲ್ ಗ್ಲಿಂಪ್ಸ್ ಬಿಡುಗಡೆಯಾಗಿದ್ದು, ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಚಿತ್ರದಲ್ಲಿ ಮಹೇಶ್ ಬಾಬುಗೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾದರೆ, ಪೃಥ್ವಿರಾಜ್ ಸುಕುಮಾರನ್ ಖಳನಾಯಕನಾಗಿ ನಟಿಸುತ್ತಿದ್ದಾರೆ.
ಇದರ ಮಧ್ಯೆ ವಾರಣಾಸಿ ಚಿತ್ರದ ಬಜೆಟ್ ಬಗ್ಗೆಯೂ ಸದ್ಯ ಚರ್ಚೆ ಜೋರಾಗಿದೆ. ಸಿನಿ ಮೂಲಗಳ ಪ್ರಕಾರ, ಸಿನಿಮಾದ ಬಜೆಟ್ 1200 ಕೋಟಿ ರೂ. ಎನ್ನಲಾಗಿದೆ. ಇದು ನಿಜಕ್ಕೂ ದೊಡ್ಡ ಗಾತ್ರದ ಬಜೆಟ್ ಎಂಬುದರಲ್ಲಿ ಅನುಮಾನವೇ ಬೇಡ. ಭಾರತದಲ್ಲಿ ಇದುವರೆಗೆ ಇಷ್ಟು ಬಿಗ್ ಬಜೆಟ್‌ನಲ್ಲಿ ಯಾವುದೇ ಚಿತ್ರ ನಿರ್ಮಾಣವಾಗಿಲ್ಲ. ಇದನ್ನೂ ಮೀರಿಸಿರುವುದು ಬಾಲಿವುಡ್ನ 'ರಾಮಾಯಣ'. ಈ ಚಿತ್ರದ ಒಟ್ಟು ಬಜೆಟ್ 4,000 ಕೋಟಿ ರೂ. ಎಂದು ಹೇಳಲಾಗಿದೆ.
'ಆರ್‌ಆರ್‌ಆರ್', 'ರೋಬೋಟ್', 'ಕಲ್ಕಿ', 'ಕೆಜಿಎಫ್' ಸೇರಿದಂತೆ ಹಲವು ಬ್ಲಾಕ್ಬಸ್ಟರ್ ಚಿತ್ರಗಳನ್ನು 400ರಿಂದ 600 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಿಸಲಾಗಿದೆ. ಆದರೆ, ಇದೇ ಮೊದಲ ಬಾರಿಗೆ ಈ ಬಜೆಟ್ ಗಾತ್ರವನ್ನು ಬಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳು ಮೀರಿಸಿವೆ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಇತ್ತೀಚೆಗೆ, ಅಲ್ಲು ಅರ್ಜುನ್ ಮತ್ತು ಅಟ್ಲೀ ಚಿತ್ರಕ್ಕೆ 800 ಕೋಟಿ ರೂ. ಬಜೆಟ್ ಮೀಸಲಿಟ್ಟಿದ್ದು, ಇದು ಸೈನ್ಸ್ ಫಿಕ್ಷನ್ ಆಧರಿತ ಚಿತ್ರ ಎಂಬುದು ಗಮನಾರ್ಹ,(ಏಜೆನ್ಸೀಸ್).