ನ್ಯೂಸ್

ಭಾರತಕ್ಕೆ BSNL ಸ್ವದೇಶಿ 4ಜಿ ನೆಟ್​ವರ್ಕ್​; ಪ್ರಧಾನಿಯಿಂದ ಅಧಿಕೃತ ಚಾಲನೆ; ಹೀಗಿವೆ ಅಗ್ಗ ರಿಚಾರ್ಚ್​ ಪ್ಲ್ಯಾನ್​ಗಳು

BSNL Swadeshi 4G : ಭಾರತೀಯ ಟೆಲಿಕಾಂ ಗ್ರಾಹಕರಿಗೆ ಕಡೆಗೂ ಸಿಹಿ ಸುದ್ದಿ ಲಭಿಸಿದೆ. ಇದೀಗ ಬಿಎಸ್​ಎನ್​ಎಲ್ ದೇಶದಲ್ಲಿ ತನ್ನ ಸಂಪೂರ್ಣ 4ಜಿ ಸೇವೆಯನ್ನು ಪ್ರಾರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿ ದೇಶಾದ್ಯಂತ ಏಕಕಾಲದಲ್ಲಿ 4G ಸೇವೆಗಳಿಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಸಾರ್ವಜನಿಕ ವಲಯದ ಆಪರೇಟರ್ ತನ್ನ ನೆಟ್‌ವರ್ಕ್ ಅನ್ನು 98,000 ಪ್ರದೇಶಗಳಿಗೆ ವಿಸ್ತರಿಸಿರುವುದು ಗಮನಾರ್ಹ. ಇದು ಪ್ರತಿ ರಾಜ್ಯದ ಗ್ರಾಹಕರಿಗೆ ಹೆಚ್ಚಿನ ವೇಗದ ಸಂಪರ್ಕವನ್ನು ನೀಡಲಿದೆ. ಈ 4G ಸೇವೆಗಳನ್ನು ಪ್ರಾರಂಭಿಸುವುದರೊಂದಿಗೆ, ಬಿಎಸ್​ಎನ್​ಎಲ್​ ಈಗ ಪ್ಯಾನ್ ಇಂಡಿಯಾ 4ಜಿ ವ್ಯಾಪ್ತಿಯನ್ನು ನೀಡುವ ಖಾಸಗಿ ಟೆಲಿಕಾಂ ಆಪರೇಟರ್‌ಗಳಲ್ಲಿ ಒಂದಾಗಿದೆ.

98,000 ಮೊಬೈಲ್ ಟವರ್‌ಗಳ ಸ್ಥಾಪನೆ

ಪ್ರಧಾನಿ ಮೋದಿ ಹಲವಾರು ಇತರ ಯೋಜನೆಗಳಿಗೆ (BSNL 4G ಸೇವೆ) ಚಾಲನೆ ನೀಡಿದರು. ಸೆ.26ರಂದು, ಬಿಎಸ್​ಎನ್​ಎಲ್​ ತನ್ನ 25ನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿತು. ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ 98,000 4ಜಿ/5ಜಿ ಮೊಬೈಲ್ ಟವರ್‌ಗಳ ನಿಯೋಜನೆಯನ್ನು ದೃಢಪಡಿಸಿದರು. ಸಂಪರ್ಕವನ್ನು ಮತ್ತಷ್ಟು ಬಲಪಡಿಸಲು ಮುಂದಿನ ದಿನಗಳಲ್ಲಿ 1 ಲಕ್ಷಕ್ಕೂ ಅಧಿಕ ಟವರ್‌ಗಳನ್ನು ಸ್ಥಾಪಿಸಲಾಗುವುದು ಎಂಬ ಮಾಹಿತಿಯನ್ನು ಹಂಚಿಕೊಂಡರು.

ಸ್ಥಳೀಯ ಟೆಕ್ನಾಲಜಿಯೊಂದಿಗೆ BSNL 4G

ಖಾಸಗಿ ನೆಟ್‌ವರ್ಕ್‌ಗಳಿಗಿಂತ ಭಿನ್ನವಾಗಿ, ಬಿಎಸ್​ಎನ್​ಎಲ್​ ನೆಟ್​ವರ್ಕ್​ ಅನ್ನು ಸಂಪೂರ್ಣವಾಗಿ ಸ್ಥಳೀಯ ತಂತ್ರಜ್ಞಾನದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಭಾರತದಲ್ಲಿ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಎರಡನ್ನೂ ಅಭಿವೃದ್ಧಿಪಡಿಸಲಾಗಿದೆ. ಈ ಯಶಸ್ಸಿನೊಂದಿಗೆ, ಸ್ವಾವಲಂಬಿ ಟೆಲಿಕಾಂ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಿದ ಸ್ವೀಡನ್, ಡೆನ್ಮಾರ್ಕ್, ಚೀನಾ ಮತ್ತು ದಕ್ಷಿಣ ಕೊರಿಯಾ ಜತೆಗೆ ಭಾರತವು ವಿಶ್ವದ ಅಗ್ರ 5 ದೇಶಗಳಲ್ಲಿ ಒಂದಾಗಿದೆ. ಈ ಸ್ಥಳೀಯ ನೆಟ್‌ವರ್ಕ್ ನಿರ್ಮಿಸಲು ಕೇಂದ್ರ ಸರ್ಕಾರ ಬರೋಬ್ಬರಿ 37,000 ಕೋಟಿ ರೂ. ಹೂಡಿಕೆ ಮಾಡಿದೆ.

ಬಳಕೆದಾರರಿಗೆ ಹಲವು ಪ್ರಯೋಜನ

4ಜಿ ಶುರುವಿನೊಂದಿಗೆ ಬಿಎಸ್​ಎನ್​ಎಲ್​ 90 ಮಿಲಿಯನ್‌ಗಿಂತಲೂ ಹೆಚ್ಚು ಚಂದಾದಾರರಿಗೆ ನೇರವಾಗಿ ಪ್ರಯೋಜನವನ್ನು ನೀಡುವ ನಿರೀಕ್ಷೆಯನ್ನು ಹೊತ್ತಿದೆ. ಖಾಸಗಿ ಆಪರೇಟರ್‌ಗಳಿಗೆ ಹೋಲಿಸಿದರೆ, ಬಿಎಸ್​ಎನ್​ಎಲ್​ ರೀಚಾರ್ಜ್ ಯೋಜನೆಗಳು ಶೇ.30ರಿಂದ 40ರಷ್ಟು ಅಗ್ಗವಾಗಿವೆ. ನೆಟ್‌ವರ್ಕ್ ಮಿತಿಗಳಿಂದಾಗಿ ಹಿಂದೆ ಬದಲಿಸಿದ ಬಳಕೆದಾರರಿಗೆ ಆಕರ್ಷಕ ಆಯ್ಕೆಯಾಗಿದೆ. ಬಿಎಸ್​ಎನ್​ಎಲ್​ ಉತ್ತಮ ವ್ಯಾಪ್ತಿ ಮತ್ತು ವೇಗದ ಇಂಟರ್ನೆಟ್ ಮೂಲಕ ಬಳಕೆದಾರರಿಗೆ ಹೆಚ್ಚಿನ ಪ್ರಯೋಜನಗಳನ್ನು ನೀಡಲು ಸಜ್ಜಾಗಿದೆ.

ದೇಶದಲ್ಲಿ 5ಜಿ, 6ಜಿ ಗಾಗಿ ಮಾರ್ಗಸೂಚಿ

ಬಿಎಸ್​ಎನ್​ಎಲ್​ 5ಜಿ ವಿಸ್ತರಣೆಗೂ ತಯಾರಿ ಮಾಡಿಕೊಳ್ಳಲಾಗಿದೆ. ಇದು ಈ ವರ್ಷದ ಅಂತ್ಯದೊಳಗೆ ದೆಹಲಿ ಮತ್ತು ಮುಂಬೈನಂತಹ ಮೆಟ್ರೋ ನಗರಗಳಲ್ಲಿ ಆರಂಭ ಆಗಲಿದೆ. 5ಜಿ ನೆಟ್‌ವರ್ಕ್ ವಿಸ್ತರಣೆಯೊಂದಿಗೆ 2030ರ ವೇಳೆಗೆ 6ಜಿ ಟೆಕ್ನಾಲಜಿಯನ್ನು ಪ್ರಾರಂಭಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಇದು ಯಶಸ್ವಿಯಾದರೆ, ಭಾರತವು 6ಜಿ ಸೇವೆಗಳನ್ನು ಒದಗಿಸುವ ಮೊದಲ ದೇಶಗಳಲ್ಲಿ ಒಂದಾಗಲಿದೆ.

ಟಿಸಿಎಸ್ ಮತ್ತು ತೇಜಸ್ ನೆಟ್‌ವರ್ಕ್‌ಗಳ ಸಹಯೋಗ

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಈ ನೆಟ್‌ವರ್ಕ್ ವಿಸ್ತರಣೆಯ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದೆ. ತೇಜಸ್ ನೆಟ್‌ವರ್ಕ್ಸ್ ರೇಡಿಯೋ ಪ್ರವೇಶ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದರ ಸಹಯೋಗದೊಂದಿಗೆ, ಬಿಎಸ್‌ಎನ್‌ಎಲ್ ತನ್ನ ಆತ್ಮನಿರ್ಭರ ಭಾರತ್ ದೃಷ್ಟಿಕೋನಕ್ಕೆ ಅನುಗುಣವಾಗಿ ಸಂಪೂರ್ಣವಾಗಿ ಸ್ಥಳೀಯ 4ಜಿ ನೆಟ್‌ವರ್ಕ್ ಆಗಿ ಮಾರ್ಪಟ್ಟಿದೆ.

ಬಿಎಸ್‌ಎನ್‌ಎಲ್ 4ಜಿ ರೀಚಾರ್ಜ್ ಎಷ್ಟು ಅಗ್ಗ?

107 ರೂ. 28 ​​ದಿನಗಳ ಮಾನ್ಯತೆ: ಬಿಎಸ್‌ಎನ್‌ಎಲ್‌ನ ಅತ್ಯಂತ ಕೈಗೆಟುಕುವ ಪ್ರಿಪೇಯ್ಡ್ ರೀಚಾರ್ಜ್ ಕೇವಲ 107 ರೂ.ಗೆ ಲಭ್ಯವಿದೆ. ಇದು ಪೂರ್ಣ 28 ದಿನಗಳ ಮಾನ್ಯತೆಯನ್ನು ನೀಡಲಿದೆ. 200 ನಿಮಿಷಗಳ ಕರೆಗಳು ಮತ್ತು 28 ದಿನಗಳವರೆಗೆ ಒಟ್ಟು 3ಜಿಬಿ ಡೇಟಾವನ್ನು ಈ ಪ್ಲ್ಯಾನ್​ ನೀಡುತ್ತದೆ.

25 ದಿನಗಳ ಪ್ಲ್ಯಾನ್​ಗೆ 153 ರೂ.

ಬಿಎಸ್‌ಎನ್‌ಎಲ್ 153 ರೂ. ಪ್ರಿಪೇಯ್ಡ್ ರೀಚಾರ್ಜ್ ಅನ್ನು ಸಹ ನೀಡುತ್ತಿದೆ. ಇದರಲ್ಲಿ ಅನಿಯಮಿತ ಕರೆಗಳಿಗೆ (ಅನ್​ಲಿಮಿಟೆಡ್​ ಕಾಲ್ಸ್​) ಅವಕಾಶವಿದೆ. ಈ ರೀಚಾರ್ಜ್ ದೆಹಲಿಯ ಎಂಟಿಎನ್‌ಎಲ್ ಪ್ರದೇಶಗಳಲ್ಲಿಯೂ ಸಹ ಕಾರ್ಯನಿರ್ವಹಿಸುತ್ತದೆ. ಹೆಚ್ಚುವರಿಯಾಗಿ, ಬಳಕೆದಾರರು ದಿನಕ್ಕೆ 100 ಉಚಿತ ಎಸ್​ಎಂಎಸ್​ ಮತ್ತು 25 ದಿನಗಳವರೆಗೆ ದಿನಕ್ಕೆ 1ಜಿಬಿ ಡೇಟಾವನ್ನು ಪಡೆಯಬಹುದಾಗಿದೆ.

199 ರೂ. 28 ದಿನ, ದಿನಕ್ಕೆ 2GB ಡೇಟಾ

28 ದಿನಗಳ ಬಿಎಸ್ಎನ್​ಎಲ್​ ಪ್ರಿಪೇಯ್ಡ್ ರೀಚಾರ್ಜ್ ಜಿಯೋ, ಏರ್‌ಟೆಲ್, ವೊಡಾಫೋನ್ ಐಡಿಯಾಕ್ಕಿಂತ ಬಹಳ ಅಗ್ಗವಾಗಿದೆ. ಕೇವಲ 199 ರೂ.ಗೆ, ಬಳಕೆದಾರರು ಅನಿಯಮಿತ ಕರೆಗಳು, ದಿನಕ್ಕೆ 100 ಉಚಿತ ಎಸ್​ಎಂಎಸ್​ ಮತ್ತು 28 ದಿನಗಳವರೆಗೆ ದಿನಕ್ಕೆ 2GB ಡೇಟಾವನ್ನು ಪಡೆಯಬಹುದಾಗಿದೆ.

ಹೊಸ ಗ್ರಾಹಕರಿಗೆ 249 ರೂ. ರೀಚಾರ್ಜ್ ಪ್ಲ್ಯಾನ್

ಕಂಪನಿಯು ಮೊದಲ ಬಾರಿಗೆ ಬಿಎಸ್​ಎನ್​ಎಲ್​ ಗ್ರಾಹಕರಿಗೆ 249 ರೂ. ಆಕರ್ಷಕ ರೀಚಾರ್ಜ್ ಅನ್ನು ನೀಡುತ್ತಿದೆ. ಈ ರೀಚಾರ್ಜ್ ಯೋಜನೆಯು 45 ದಿನಗಳ ಪೂರ್ಣ ಮಾನ್ಯತೆಯನ್ನು ನೀಡುತ್ತದೆ. ಬಳಕೆದಾರರು ಅನಿಯಮಿತ ಕರೆಗಳು, ದಿನಕ್ಕೆ 2GB ಡೇಟಾ ಮತ್ತು ದಿನಕ್ಕೆ 100 ಉಚಿತ ಎಸ್​ಎಂಎಸ್​ ಪ್ರಯೋಜನಗಳನ್ನು ಪಡೆಯಬಹುದಾಗಿದೆ.

1499 ರೂ. ಯೋಜನೆ

ಬಿಎಸ್​ಎನ್​ಎಲ್​ ತನ್ನ ಜನಪ್ರಿಯ ಯೋಜನೆಗಳಲ್ಲಿ 1499 ರೂ. ರೀಚಾರ್ಜ್ ಅನ್ನು ಘೋಷಿಸಿದೆ. ಇದು 336 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ನೀವು ಅನಿಯಮಿತ ಕರೆಗಳು, 336 ದಿನಗಳವರೆಗೆ ಪ್ರತಿದಿನ 100 ಎಸ್​ಎಂಎಸ್​ ಲಭ್ಯವಿದೆ. ಈ ಅವಧಿಯಲ್ಲಿ ಒಟ್ಟು 24GB ಡೇಟಾವನ್ನು ನೀಡಲಾಗುವುದು.

2399 ರೂ. ವಾರ್ಷಿಕ ಯೋಜನೆ

ಬಿಎಸ್​ಎನ್​ಎಲ್​ ಕೇವಲ 2,399 ರೂ.ಗೆ ಪೂರ್ಣ ವರ್ಷ 365 ದಿನಗಳ ರೀಚಾರ್ಜ್ ಅನ್ನು ನೀಡುತ್ತಿದೆ. ಈ ಯೋಜನೆಯು ಅನಿಯಮಿತ ಕರೆಗಳು, ದಿನಕ್ಕೆ 100 ಎಸ್​ಎಂಎಸ್​ ಮತ್ತು ದಿನಕ್ಕೆ 2GB ಡೇಟಾವನ್ನು ನೀಡುತ್ತದೆ. ಅನಿಯಮಿತ ಡೇಟಾ ಯೋಜನೆಯು 2GB ಮಿತಿಯ ನಂತರ ಡೇಟಾ ವೇಗವನ್ನು ಕಡಿತಗೊಳಿಸಲಿದೆ,(ಏಜೆನ್ಸೀಸ್).