ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ. ಯಡಿಯೂರಪ್ಪ ಅವರು ಸಿಎಂ ಕುರ್ಚಿಯಿಂದ ಕೆಳಗಿಳಿಯಬಾರದು ಎಂದು ಅನೇಕರು ಹೇಳುತ್ತಿದ್ದರೆ, ಬೇರೆಯವರಿಗೆ ಅವಕಾಶ ಸಿಗಬೇಕು ಎನ್ನುವ ಮಾತುಗಳೂ ಕೇಳಿಬರುತ್ತಿವೆ.
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಮತ್ತು ಜನರ ಪ್ರತಿಕ್ರಿಯೆಗಳನ್ನು ಗಮನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜನರಲ್ಲಿ ಮನವಿ ಮಾಡಿದ್ದಾರೆ. "ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು." ಎಂದು ಅವರು ಟ್ವೀಟ್ ಮಾಡಿದ್ದಾರೆ.
ಪಕ್ಷ ನನಗೆ ಮಾತೃ ಸಮಾನ. ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಅವರು ಟ್ವೀಟ್ನಲ್ಲಿ ತಿಳಿಸಿದ್ದಾರೆ. (ಏಜೆನ್ಸೀಸ್)