ಚೆನ್ನೈ: ದುಷ್ಕರ್ಮಿಗಳ ಗುಂಪೊಂದು ವ್ಯಕ್ತಿಯೊಬ್ಬನನ್ನು ಅಟ್ಟಾಡಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಚೆನ್ನೈ ಪುಲಿಯಂಥೋಪ್ನಲ್ಲಿ ಮಂಗಳವಾರ ರಾತ್ರಿ ನಡೆದಿದ್ದು, ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇ ರಮೇಶ್ ಬಾಬು (34) ಕೊಲೆಯಾದವ. ಈತ ಹಳೆಯ ರೌಡಿ ಶೀಟರ್. ಕೊಲೆ ವೈಯಕ್ತಿಕ ದ್ವೇಷವೇ ಕಾರಣ ಎಂದು ಹೇಳಲಾಗಿದೆ. ಕೊಲೆಯ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲೂ ಹರಿದಾಡುತ್ತಿದೆ. ಇಕ್ಕಾಟದ ರಸ್ತೆಯಲ್ಲಿ ಮಕ್ಕಳು ಅವರ ಮನೆಯ ಬಳಿ ಆಟವಾಡುತ್ತಾ ನಿಂತಿದ್ದಾಗ ರಮೇಶ್ ಬಾಬುವನ್ನು ಅಟ್ಟಾಡಿಸಿಕೊಂಡು ಬರುವ ದುಷ್ಕರ್ಮಿಗಳು ರಮೇಶ್ನನ್ನು ಕೆಡವಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗುತ್ತಾರೆ. ಈ ದೃಶ್ಯವನ್ನು ನೋಡಿದ ಸ್ಥಳೀಯ ಮಹಿಳೆಯರು ಸಹ ಬೆಚ್ಚಿಬಿದ್ದಾರೆ.
ಮೂಲಗಳ ಪ್ರಕಾರ ರಮೇಶ್ ಬಾಬು ಮಂಗಳವಾರ ರಾತ್ರಿ ಮನೆಗೆ ಮರಳುತ್ತಿದ್ದ. ಅಂದು ರಾತ್ರಿ 9.30ರ ಸುಮಾರಿಗೆ ಗುರುಸ್ವಾಮಿ ನಗರವನ್ನು ದಾಟುವಾಗ ದುಷ್ಕರ್ಮಿಗಳ ಗುಂಪು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿದೆ. ಈ ವೇಳೆ ರಮೇಶ್ ಓಡಿ ಹೋಗಲು ಯತ್ನಿಸಿದಾದರೂ ಅದು ಸಾಧ್ಯವಾಗದೇ ಗಂಭೀರ ಗಾಯಗಳಿಂದ ನರಳಿ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.
ಪ್ರಕರಣದಲ್ಲಿ ಭಾಗಿಯಾಗಿರುವ 8 ಆರೋಪಿಗಳನ್ನು ವಿಜಯ್ಕುಮಾರ್ (31), ವಿಘ್ನೇಶ್ ಕುಮಾರ್ (26), ಶಂಕರ್ (40), ಅಭಿನೇಶ್ (24), ಸೂರ್ಯ (26), ರಾಕೇಶ್ ಕುಮಾರ್ (25), ಸತ್ಯ (24) ಮತ್ತು ಶರತ್ ಕುಮಾರ್ (30) ಎಂದು ಗುರುತಿಸಲಾಗಿದ್ದು, ಪರಾರಿಯಾಗಿದ್ದವರಲ್ಲಿ ಕೆಲವರನ್ನು ಚೆನ್ನೈನ ರೆಡ್ ಹಿಲ್ಸ್ ಪೊಲೀಸರು ಬಂಧಿಸಿದ್ದಾರೆಂದು ತಿಳಿದುಬಂದಿದೆ. (ಏಜೆನ್ಸೀಸ್)