ನ್ಯೂಸ್

ಅಳುತ್ತಿದೆ ಅಂತ 12 ತಿಂಗಳ ಮಗುವಿನ ಕಾಲ ಹಿಡಿದು ನೆಲಕ್ಕೆ ಬಡಿದು ಕೊಲೆಗೈದ ಪಾಪಿ ತಂದೆ! Brutal incident

Brutal incident : ತಂದೆ ಎಂಬ ಸ್ಥಾನ ಬಹಳ ದೊಡ್ಡದು. ಒಂದು ಮಗುವಿಗೆ ಜನ್ಮ ನೀಡುವಾಗ ತಾಯಿ ಎಷ್ಟು ನೋವು ಅನುಭವಿಸುತ್ತಾಳೋ ಅಷ್ಟೇ ನೋವನ್ನು ಓರ್ವ ತಂದೆ ತನ್ನ ಮಕ್ಕಳನ್ನು ನೋಡಿಕೊಳ್ಳಲು ಜೀವನದ ಉದ್ದಕ್ಕೂ ಅನುಭವಿಸುತ್ತಾನೆ. ಅನೇಕ ತ್ಯಾಗಗಳನ್ನು ಮಾಡುತ್ತಾನೆ. ತಾನು ಅನುಭವಿಸಿದ ಕಷ್ಟವನ್ನು ನನ್ನ ಮಕ್ಕಳು ಅನುಭವಿಸಬಾರದು ಎಂದು ಹೇಳುವವನೇ ನಿಜವಾದ ತಂದೆ. ಆದರೆ, ಕೆಲವರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಮಗಳ ಮೇಲೆಯೇ ತಂದೆ ಅತ್ಯಾಚಾರ ಮಾಡಿದ ಉದಾಹರಣೆಗಳಿವೆ. ಅಷ್ಟೇ ಅಲ್ಲ, ಕೊಲೆ ಮಾಡಿದ ಸಂಗತಿಗಳಿವೆ. ಇಂತಹ ಘಟನೆಗಳು ಇಡೀ ಮನುಕುಲವನ್ನೇ ತಲೆ ತಗ್ಗಿಸುವಂತೆ ಮಾಡುತ್ತದೆ. ಅಂಥದ್ದೇ ಒಂದು ಘಟನೆ ಇದೀಗ ನಡೆದಿದೆ.

ಹೌದು, ತಂದೆಯೇ ತನ್ನ 12 ತಿಂಗಳ ಮಗುವನ್ನು ಕೊಲೆ ಮಾಡಿದ್ದಾನೆ. ಮಗುವಿಗೆ ಉಜ್ವಲ ಭವಿಷ್ಯ ಕಲ್ಪಿಸಿಕೊಡಬೇಕಾದ ತಂದೆಯೇ ಮಗುವಿನ ಜೀವನ ಕಸಿದುಕೊಂಡಿರುವುದು ನಿಜಕ್ಕೂ ಆಘಾತಕಾರಿ ಸಂಗತಿ. ಕುಡಿತಕ್ಕೆ ದಾಸನಾದ ತಂದೆ ಈ ದುಷ್ಕೃತ್ಯ ಎಸಗಿದ್ದಾನೆ. ತನ್ನ ಪತ್ನಿಯ ಜೊತೆ ಜಗಳ ಆಡುವಾಗ ಅದೇ ಕೋಪದಲ್ಲಿ ತನ್ನ 1 ವರ್ಷದ ಕಂದಮ್ಮಳನ್ನು ಕೊಲೆಗೈದಿದ್ದಾನೆ. ಈ ಘಟನೆ ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ ನಡೆದಿದೆ.

ಮೃತ ಕಂದಮ್ಮನ ಹೆಸರು ಭವಿಗ್ನಾ. ಸೂರ್ಯಪೇಟೆ ಜಿಲ್ಲೆಯ ನಾಗರಂ ಮಂಡಲದ ಗೈಗುಲ್ಲ ವೆಂಕಟೇಶ್ವರಲು ಮತ್ತು ನಾಗಮಣಿ ದಂಪತಿ ಪುತ್ರಿ. ಸೂರ್ಯಪೇಟೆಯಲ್ಲಿರುವ ಪ್ರಿಯಾಂಕಾ ಕಾಲನಿಯಲ್ಲಿ ಬಾಡಿಗೆ ಮನೆಯಲ್ಲಿ ದಂಪತಿ ವಾಸವಿದ್ದಾರೆ. ಶುಕ್ರವಾರ (ಸೆ.19) ರಾತ್ರಿ ಗಂಡ ಮತ್ತು ಹೆಂಡತಿಯ ನಡುವೆ ಜಗಳವಾಯಿತು.

ಕುಡಿದು ಮನೆಗೆ ಬಂದ ವೆಂಕಟೇಶ್ವರಲು, ತನ್ನ ಹೆಂಡತಿಯೊಂದಿಗೆ ಜಗಳವಾಡಿದನು. ತನ್ನ ಪಾಲಕರು ಜಗಳವಾಡುತ್ತಿದ್ದಂತೆ, ಪುಟ್ಟ ಹುಡುಗಿ ಅಳಲು ಪ್ರಾರಂಭಿಸಿದಳು. ಇತ್ತ ಕುಡಿತದ ಮತ್ತಿನಲ್ಲಿದ್ದ ವೆಂಕಟೇಶ್ವರಲು ಮಗಳು ಅಳುವುದನ್ನು ನೋಡಿ ಸಹಿಸಿಕೊಳ್ಳಲಿಲ್ಲ. ಆತ ಪುಟ್ಟ ಕಂದಮ್ಮಳ ಕಾಲುಗಳನ್ನು ಹಿಡಿದು ನೆಲದ ಬಡಿದನು.

ನೆಲಕ್ಕೆ ಬಡಿದ ಪರಿಣಾಮ ಮಗು ಭವಿಗ್ನಾ ಗಂಭೀರವಾಗಿ ಗಾಯಗೊಂಡಿತ್ತು. ತಕ್ಷಣ ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಗಾಯಗಳಾಗಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಗು ಮೃತಪಟ್ಟಿದೆ.

ಭವಿಗ್ನಾ ಸಾವು ಕುಟುಂಬದಲ್ಲಿ ದುಃಖದ ಛಾಯೆಯನ್ನು ಮೂಡಿಸಿದೆ. ಮಗುವಿನ ತಾಯಿ ನಾಗಮಣಿ ಗೊಳೋ ಎಂದು ಕಣ್ಣೀರಿಡುತ್ತಿದ್ದಾರೆ. ಬದುಕಿಗೆ ಆಸರೆಯಾಗಬೇಕಿದ್ದ ತಂದೆಯೇ ಮಗುವನ್ನು ಕೊಂದಿರುವುದು ಸ್ಥಳೀಯರನ್ನು ಚಿಂತೆಗೀಡುಮಾಡಿದೆ. ಕುಡಿತದ ಚಟ ಮನುಷ್ಯನನ್ನು ರಾಕ್ಷಸನಾಗಿಸುತ್ತದೆ ಎಂಬುದಕ್ಕೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಸದ್ಯ ಮೃತ ಮಗುವಿನ ತಾಯಿಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. (ಏಜೆನ್ಸೀಸ್​)