ನ್ಯೂಸ್

‘ಡಬಲ್​​ ಇಸ್ಮಾರ್ಟ್​​​’ ಹಾಡಿನ ವಿರುದ್ಧ ದೂರು ದಾಖಲು; ನಿರ್ದೇಶಕ ಪೂರಿ ಕ್ಷಮೆಯಾಚಿಸ್ಲೇಬೇಕು ಎಂದಿದ್ದೇಕೆ?

ಹೈದರಾಬಾದ್​​​: ಪೂರಿ ಜಗನ್ನಾಥ್ ನಿರ್ದೇಶಿಸಿ ರಾಮ್​ ಪೋತಿನೇನಿ ನಟನೆಯ 'ಇಸ್ಮಾರ್ಟ್ ಶಂಕರ್' ಯಶಸ್ಸಿನ ನಂತರ ಅದೇ ಸಿನಿಮಾದ ಮುಂದುವರಿದ ಭಾಗವಾಗಿ ‘ಡಬಲ್ ಇಸ್ಮಾರ್ಟ್’ ಶೀರ್ಷಿಕೆಯೊಂದಿಗೆ ಚಿತ್ರ ಮಾಡುತ್ತಿರುವುದು ಎಲ್ಲರಿಗೂ ಗೊತ್ತೆ ಇದೆ. ಈ ಸಿನಿಮಾ ಆಗಸ್ಟ್ 15 ರಂದು ಬಿಡುಗಡೆಯಾಗುತ್ತಿದೆ.

ಇತ್ತೀಚೆಗೆ ಚಿತ್ರತಂಡ ಸಿನಿಮಾದ 'ಮಾರ್ ಮುಂತಾ.. ಚೋಡ್ ಚಿಂತಾ' ಲಿರಿಕಲ್ ಸಾಂಗ್​​ನ್ನು ರಿಲೀಸ್​ ಮಾಡಿದೆ.. ಪರ್ಫೆಕ್ಟ್ ಮಾಸ್ ಬೀಟ್ ಇರುವ ಈ ಹಾಡಿಗೆ ನಾಯಕ ರಾಮ್ ಮತ್ತು ನಾಯಕಿ ಕಾವ್ಯತಾಪರ್ ಹೆಜ್ಜೆ ಹಾಕಿದ್ದಾರೆ. ಕಾಸರ್ಲಾ ಶ್ಯಾಮ್ ಬರೆದಿರುವ ಈ ಹಾಡನ್ನು ರಾಹುಲ್ ಸಿಪ್ಲಿಗಂಜ್ ಮತ್ತು ಕೀರ್ತನಾ ಶರ್ಮಾ ಹಾಡಿದ್ದಾರೆ. ಮಣಿ ಶರ್ಮಾ ಸಂಗೀತ ಸಂಯೋಜನೆ ಮಾಡಿರುವ ಈ ಹಾಡಿನಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ ಚಂದ್ರಶೇಖರ ರಾವ್ ಹೇಳಿರುವ ಮಾತುಗಳನ್ನು ಸೇರಿಸಲಾಗಿದೆ. ಈ ಪ್ರಯತ್ನವೇ ಈಗ ಹಾಡಿಗೆ ತೊಂದರೆ ಉಂಟುಮಾಡಿದೆ.

ಈ ಹಾಡಿನ ಮಧ್ಯದಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್​ ಅವರ ‘ಎಂ ಚೆದ್ದಾಂ ಅಂತವ್ ಮಾರಿ’ ಎಂಬ ಮಾತುಗಳನ್ನು ಸೇರಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಬಿಆರ್‌ಎಸ್ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ಅವರು ಮಾತನಾಡಿರುವ ಪದಗಳನ್ನು ಬಳಸಿದ್ದಕ್ಕಾಗಿ ಬಿಆರ್‌ಎಸ್​​ನ (ಭಾರತ್ ರಾಷ್ಟ್ರ ಸಮಿತಿ) ಹಿರಿಯ ನಾಯಕಿ ರಜಿತಾ ರೆಡ್ಡಿ, ಸಿನಿಮಾದ ನಿರ್ದೇಶಕರು ಮತ್ತು ಅವರ ತಂಡದ ವಿರುದ್ಧ ದೂರು ದಾಖಲಿಸಿದ್ದಾರೆ.

ಐಟಂ ಸಾಂಗ್ ಅನ್ನು ಕೆಟ್ಟದಾಗಿ ತೋರಿಸಲಾಗಿದೆ. ಅಲ್ಲದೆ ಹಾಡಿನಲ್ಲಿ ಚಂದ್ರಶೇಖರ್ ರಾವ್ ಅವರ ಮಾತುಗಳನ್ನು ಬಳಸಲಾಗಿದೆ. ಇದು ಮಾಜಿ ಮುಖ್ಯಮಂತ್ರಿಯಾಗಿದ್ದ ಕೆ ಚಂದ್ರಶೇಖರ ರಾವ್​ ಅವರಿಗೆ ಅಗೌರವ ತೋರಿದಂತೆ. ಪುರಿ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸರನ್ನು ರಜಿತಾ ರೆಡ್ಡಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಕೆಸಿಆರ್ ಅವರ ಪದಗಳನ್ನು ಹಾಡಿನಿಂದ ತೆಗೆದುಹಾಕಬೇಕು ಮತ್ತು ಪುರಿ ಕ್ಷಮೆಯಾಚಿಸಬೇಕು ಎಂದು BRS ಮತ್ತು ತೆಲಂಗಾಣದ ಜನರು ಒತ್ತಾಯಿಸಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್​​)