ನ್ಯೂಸ್

'ತಂಗಿಗೆ ಮೆಸೇಜ್ ಮಾಡ್ಬೇಡ' ಎಂದು ಬುದ್ಧಿಮಾತು ಹೇಳಿದ ಅಣ್ಣನ ಕೊಂದೇಬಿಟ್ರು!

ರಾಯಚೂರು: 'ತಂಗಿಗೆ ಮೆಸೇಜ್ ಮಾಡ್ಬೇಡ' ಎಂದು ಬುದ್ಧಿಮಾತು ಹೇಳಿದ ಅಣ್ಣ ಕೊಲೆಯಾಗಿ ಹೋಗಿದ್ದಾನೆ. ರಾಯಚೂರು ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದ್ದು, ಆರೋಪಿಗಳ ವಿರುದ್ಧ ದೂರು ದಾಖಲಾಗಿದೆ.

ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಅಂಕುಶದೊಡ್ಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ದೇವರಾಜ್ (23) ಕೊಲೆಗೀಡಾದ ಯುವಕ. ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತ ಎಂಬವರ ವಿರುದ್ಧ ದೂರು ದಾಖಲಾಗಿದೆ.

ದೇವರಾಜ್ ತಂಗಿಗೆ ಆರೋಪಿ ಬಸವರಾಜ್ ಆಗಾಗ ಮೆಸೇಜ್ ಮಾಡುತ್ತಿದ್ದುದಲ್ಲದೆ, ಸಿಕ್ಕಸಿಕ್ಕಲ್ಲಿ ಮಾತನಾಡಿಸುತ್ತಿದ್ದ ಹಾಗೂ ಪ್ರೀತಿಸುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಈ ವಿಷಯ ಗೊತ್ತಾಗಿದ್ದರಿಂದ ದೇವರಾಜ್​ ಬಸವರಾಜ್​ಗೆ ಬೈದು ಬುದ್ಧಿಮಾತು ಹೇಳಿದ್ದ.

ಬಳಿಕ ಆ ಸೇಡಿಗೆ ಬಸವರಾಜ್ ತನ್ನ ಸ್ನೇಹಿತ ಲಿಂಗಣ್ಣನಿಂದ ಮೆಸೇಜ್ ಮಾಡಿಸಿದ್ದ ಎನ್ನಲಾಗಿದೆ. ನಂತರ ದೇವರಾಜ್ ಹಾಗೂ ಆರೋಪಿ ಬಸವರಾಜ್ ಕಡೆಯವರ ಮಧ್ಯೆ ಗಲಾಟೆಯಾಗಿದ್ದು, ಆಗ ದೇವರಾಜ್​ಗೆ ಬಸವರಾಜ್ ಚೂರಿಯಿಂದ ಇರಿದು ಕೊಲೆ ಮಾಡಿದ್ದ. ಈ ಘಟನೆಯಲ್ಲಿ ಆರೋಪಿಗಳಾದ ಬಸವರಾಜ್ ಹಾಗೂ ಹನುಮಂತಗೂ ಗಾಯವಾಗಿದ್ದು, ಲಿಂಗಸುಗೂರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮಸ್ಕಿ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.