ನ್ಯೂಸ್

ಚುನಾವಣೆ ಕಣದಲ್ಲಿ ಗೆಲುವು ಸಾಧಿಸಿದ ಅಣ್ಣ - ತಂಗಿ!

ಬೆಂಗಳೂರು: ರಾಜ್ಯದ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು ಇದರಲ್ಲಿ ಹಲವಾರು ರಕ್ತಸಂಬಂಧಿಗಳು ಗೆಲುವು-ಸೋಲಿನ ರುಚಿ ಕಂಡಿದ್ದಾರೆ. ಈ ಪೈಕಿ ಹಲವು ಜನ ಅಪ್ಪ- ಮಕ್ಕಳು ಇದ್ದಾರೆ. ಜತೆಗೆ ಅಣ್ಣ - ತಂಗಿ ಕೂಡ ಇದ್ದಾರೆ.

ಬೆಂಗಳೂರಿನ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಎಸ್. ರಘು ಹಾಗೂ ಮಹದೇವಪುರ ಕ್ಷೇತ್ರದಲ್ಲಿ ಜಯಶಾಲಿಯಾಗಿರುವ ಮಂಜುಳಾ ಲಿಂಬಾವಳಿ - ಇವರಿಬ್ಬರೂ ಸ್ವಂತ ಅಣ್ಣ ಮತ್ತು ತಂಗಿ. ಮಂಜುಳಾ ಅವರು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಅರವಿಂದ ಲಿಂಬಾವಳಿ ಅವರ ಪತ್ನಿ. ಮಹದೇವಪುರ ಕ್ಷೇತ್ರದ ಹಾಲಿ ಶಾಸಕರಾಗಿದ್ದ ಅರವಿಂದ ಲಿಂಬಾವಳಿ ಅವರಿಗೆ ಟಿಕೆಟ್ ನಿರಾಕರಿಸಿದ್ದ ಬಿಜೆಪಿ, ಕೊನೆಯ ಹಂತದಲ್ಲಿ ಪ್ರಕಟಿಸಿದ್ದ 10 ಅಭ್ಯರ್ಥಿಗಳ ಪಟ್ಟಿಯಲ್ಲಿ ಲಿಂಬಾವಳಿ ಅವರ ಪತ್ನಿ ಮಂಜುಳಾ ಅವರಿಗೆ ಟಿಕೆಟ್ ನೀಡಿತ್ತು. ಅವರು ಈಗ ಜಯ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಅಣ್ಣ ಎಸ್. ರಘು ಅವರಂತೂ ಕಳೆದ ಹಲವು ಚುನಾವಣೆಗಳಿಂದ ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ.(ಏಜೆನ್ಸೀಸ್)