ನ್ಯೂಸ್

ಕರೊನಾ ವಿರುದ್ಧ ಹೋರಾಡುತ್ತಿರುವ ವೈದ್ಯರಿಗಾಗಿ 99 ವರ್ಷದ 'ವಾರ್​ ಹೀರೋ' 125 ಕೋಟಿ ಸಂಗ್ರಹಿಸಿದ್ದು ಹೇಗೆ ಗೊತ್ತಾ?

ಲಂಡನ್​: ಬ್ರಿಟನ್ನಿನ ಬ್ರೆಡ್​ಫೋರ್ಡ್​ಶೈರ್​ನ ಮೊರಟೈನ್​ ಪ್ರದೇಶ ನಿವಾಸಿ ಕ್ಯಾಪ್ಟನ್​ ಟಾಮ್​ ಕರೊನಾ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯರಿಗಾಗಿ ಬರೋಬ್ಬರಿ 125 ಕೋಟಿ ರೂ. (12 ಮಿಲಿಯನ್​ ಪೌಂಡ್​ ) ಸಂಗ್ರಹಿಸಿದ್ದಾರೆ. ದೇಶದ ಜನರು, ವಿದೇಶದಲ್ಲಿ ನೆಲೆಸಿದವರು ಈ ಮಟ್ಟಿಗೆ ಉದಾರತೆ ತೋರಿರುವುದು ಭಾರಿ ಅಚ್ಚರಿ ಮೂಡಿಸಿದೆ.

ಅಷ್ಟಕ್ಕೂ ಕ್ಯಾಪ್ಟನ್​ ಟಾಮ್​ ಸಾಮಾನ್ಯ ವ್ಯಕ್ತಿಯೇನಲ್ಲ. ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಂಡ 99 ವರ್ಷದ ಹಿರಿಯರು. ಬ್ರಿಟನ್ನಿಗರ ಪಾಲಿಗೆ ವಾರ್​ ಹೀರೋ. ದೇಶ ಸಂಕಷ್ಟ ಸಮಯದಲ್ಲಿದ್ದು, ನೆರವು ನೀಡಿ ಎಂದು ಟಾಮ್​ ಮನವಿಯನ್ನಷ್ಟೇ ಮಾಡಲಿಲ್ಲ. ಹಲವು ದಿನಗಳಿಂದ ದೊಡ್ಡದೊಂದು ಸಾಹಸವನ್ನೇ ಕೈಗೊಂಡರು.

ದೇಶದಲ್ಲಿ ಲಾಕ್​ಡೌನ್​ ಇರುವ ಕಾರಣ ಮನೆಯಿಂದ ಹೊರಹೋಗುವಂತೆಯೂ ಇರಲಿಲ್ಲ. ಹೀಗಾಗಿ ತಮ್ಮ ಮನೆಯ ಉದ್ಯಾನದ ಎದುರಿನ ಕಾಲು ದಾರಿಯನ್ನು ನೂರು ಬಾರಿ ಕ್ರಮಿಸುವುದಾಗಿ ಘೋಷಿಸಿದರು. ಅಂದರೆ ಅಂದಾಜು 2.5 ಕಿ.ಮೀ ದೂರವನ್ನು ಕ್ರಮಿಸಿದ್ದಾರೆ. ಇದಕ್ಕಾಗಿ ಅವರು ಚಕ್ರಗಳಿರುವ ಊರುಗೋಲು (ಜಿಮ್ಮರ್​ ಫ್ರೇಮ್​) ಬಳಸಿದ್ದಾರೆ. ಇದನ್ನವರು ಒಂದೇ ದಿನದಲ್ಲಿ ಮಾಡಿಲ್ಲ. ಕಳೆದ ಹಲವು ದಿನಗಳಿಂದ ಕ್ರಮಿಸುತ್ತಲೇ ಅದನ್ನು ಆನ್​ಲೈನ್​ನಲ್ಲಿ ದಾಖಲಿಸಿ ಧನ ಸಂಗ್ರಹಕ್ಕೆ ನೆರವು ನೀಡುವಂತೆ ಕೋರಿದ್ದರು.

99 ವರ್ಷದ ಯೋಧರೊಬ್ಬರು ದೇಶ ಸೇವೆಗಾಗಿ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿದ 53ಕ್ಕೂ ಅಧಿಕ ದೇಶಗಳ ಜನರು ನಿಧಿ ಒದಗಿಸಿದ್ದಾರೆ. ಅವರು ನೂರನೇ ಬಾರಿ ಕ್ರಮಿಸುವ ವೇಳೆಗೆ ಹೀಗೆ ಸಂಗ್ರಹವಾದ ನೆರವಿನ ಮೊತ್ತ 125 ಕೋಟಿ ರೂ. ತಲುಪಿತ್ತು.

ಕ್ಯಾಪ್ಟನ್​ ಟಾಮ್​ ಗುರಿ ತಲುಪಲು ಕೆಲ ಸುತ್ತುಗಳು ಬಾಕಿಯಿರುವಂತೆ ಸ್ಥಳೀಯ ಭದ್ರತಾ ಪಡೆಗಳ ಯೋಧರು ಅವರಿಗೆ ಗೌರವ ವಂದನೆ ನೀಡಿದ್ದಾರೆ. ನಿಮ್ಮಿಂದಾದ ಸಹಾಯವನ್ನು ಈ ದೇಶ ಎಂದಿಗೂ ಮರೆಯುವುದಿಲ್ಲ ಎಂದು ಅಭಿನಂದಿಸಿದ್ದಾರೆ. ಜನರು ಸ್ಪಂದಿಸಿದ ಪರಿಗೆ ಹಿರಿಯ ಜೀವದ ಕಣ್ಣಂಚು ತೇವವಾಗಿತ್ತು. ವೈದ್ಯರಿಗೆ ನೆರವಾಗುವ ಅಭಿಯಾನಕ್ಕೆ ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ್ದಾರೆ.