More

    ಏಪ್ರಿಲ್​ 20ರ ನಂತರ ಬದಲಾಗಲಿದೆ ಪರಿಸ್ಥಿತಿ, ಆನ್​ಲೈನ್​ ಶಾಪಿಂಗ್​ ಮೇಲಿದ್ದ ನಿರ್ಬಂಧ ತೆರವು

    ನವದೆಹಲಿ: ಮೇ 3ರವರೆಗೆ ಲಾಕ್​ಡೌನ್​ ವಿಸ್ತರಣೆಯಾಗಿದ್ದರೂ, ಏಪ್ರಿಲ್​ 20ರ ಬಳಿಕ ಹಲವು ನಿರ್ಬಂಧಗಳನ್ನು ಸಡಿಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ.

    ಗ್ರಾಮೀಣ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಆರಂಭಿಸಬಹುದು, ಹಲವು ಆರ್ಥಿಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗುತ್ತದೆ. ಅತ್ಯಾವಶ್ಯವಲ್ಲದ ವಸ್ತುಗಳನ್ನು ಕೂಡ ಆನ್​ಲೈನ್​ ಮೂಲಕ ಆರ್ಡರ್​ ಮಾಡಬಹುದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

    ಮೊದಲ ಹಂತದ ಲಾಕ್​ಡೌನ್​ ಸಂದರ್ಭದಲ್ಲಿ ಆನ್​ಲೈನ್​ ಇ- ವಾಣಿಜ್ಯ ಸಂಸ್ಥೆಗಳಿಗೆ ಜೀವನಾವಶ್ಯಕ ವಸ್ತುಗಳನ್ನಷ್ಟೇ ಮಾರಾಟ ಮಾಡಲು ಅವಕಾಶ ಕಲ್ಪಿಸಿತ್ತು. ಆದರೆ, ಏಪ್ರಿಲ್​ 20ರ ನಂತರ ಎಲ್ಲ ವಸ್ತುಗಳ ಮಾರಾಟಕ್ಕೆ ಅವಕಾಶವಿದೆ ಎಂದು ಮಾಹಿತಿ ನೀಡಿದೆ. ಈವರೆಗೆ ಅಗತ್ಯ ವಸ್ತುಗಳೆಂದು ವರ್ಗೀಕರಣ ಮಾಡಲಾಗದ ವಸ್ತುಗಳೆಲ್ಲವೂ ಈ ವಿಭಾಗದಲ್ಲಿ ಬರುತ್ತವೆ ಎಂದು ಸ್ಪಷ್ಟನೆ ನೀಡಲಾಗಿದೆ.

    ಲಾಕ್​ಡೌನ್​ ಸಮಯದಲ್ಲಿ ಹಲವು ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡಲು ತಿಳಿಸಿದ್ದವು. ಆದರೆ, ಫೋನ್​, ಲ್ಯಾಪ್​ಟಾಪ್​ಗಳ ಹಾಗೂ ಇವುಗಳ ಬಿಡಿಭಾಗಗಳ ತೀವ್ರ ಕೊರತೆ ಉಂಟಾಗಿತ್ತು. ಈ ಎಲ್ಲ ವಸ್ತುಗಳನ್ನು ಅತ್ಯಾವಶ್ಯವಲ್ಲದ ವಸ್ತುಗಳೆಂದು ವರ್ಗೀಕರಿಸಿದ ಹಿನ್ನೆಲೆಯಲ್ಲಿ ಆನ್​ಲೈನ್​ನಲ್ಲೂ ಇವನ್ನು ಪಡೆಯುವುದು ಸಾಧ್ಯವಾಗಿರಲಿಲ್ಲ.

    ಏಪ್ರಿಲ್​ 20ರ ಬಳಿಕ ಇವುಗಳ ಮಾರಾಟ ಆರಂಭವಾಗಲಿದೆ. ಟಿವಿ, ಎಸಿ, ಕೂಲರ್​, ರೆಫ್ರಿಜರೇಟರ್​ಗಳನ್ನು ಖರೀದಿಸಬಹುದು. ಅಮೆಜಾನ್​, ಫ್ಲಿಪ್​ಕಾರ್ಟ್​ ಸಂಸ್ಥೆಗಳು ಇದಕ್ಕಾಗಿ ಸಿದ್ಧತೆ ನಡೆಸಿವೆ. ಇದರೊಂದಿಗೆ ಸರಕು ಸಾಗಣೆ ವಾಹನಗಳು ಕೂಡ ರಸ್ತೆಗಿಳಿಯಲಿವೆ. ವಾಹನ ದುರಸ್ತಿ ಕೇಂದ್ರಗಳು, ಹೆದ್ದಾರಿ ಪಕ್ಕದ ಡಾಬಾಗಳು ತೆರೆಯಲಿವೆ. ಗೋದಾಮುಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡಲ್ಲಿ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗುತ್ತದೆ. ಈ ಎಲ್ಲ ಕ್ರಮಗಳಿಂದಾಗಿ ಗ್ರಾಹಕರ ಅಗತ್ಯ ವಸ್ತುಗಳ ಉತ್ಪಾದನೆ ಹಾಗೂ ಪೂರೈಕೆ ಮೊದಲಿನಂತಾಗಲಿದೆ ಎಂಬ ವಿಶ್ವಾಸವನ್ನು ಸಚಿವಾಲಯ ವ್ಯಕ್ತಪಡಿಸಿದೆ.

    ಚೀನಾ ನಿರ್ಮಿತ ಝೂಮ್​ ಆ್ಯಪ್​ ಬಳಕೆದಾರರಿಗೆ ಸರ್ಕಾರ ನೀಡಿರುವ ಎಚ್ಚರಿಕೆಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts