ನ್ಯೂಸ್

ಬಾಂಬ್ ಬೆದರಿಕೆ: ತಿರುವನಂತಪುರಂ ವಿಮಾನ ನಿಲ್ದಾಣದಲ್ಲಿ ತುರ್ತು ಪರಿಸ್ಥಿತಿ ಘೋಷಣೆ!

ತಿರುವನಂತಪುರಂ: ಮುಂಬೈನಿಂದ ಬಂದ ಏರ್ ಇಂಡಿಯಾ ವಿಮಾನಕ್ಕೆ ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ತಿರುವನಂತಪುರಂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ವಿಮಾನದಲ್ಲಿ 135 ಪ್ರಯಾಣಿಕರಿದ್ದರು. ವಿಮಾನವು ಬೆಳಿಗ್ಗೆ 8 ಗಂಟೆ ಸುಮಾರಿಗೆ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ತಿಳಿಸದ ನಂತರ ಶಿಷ್ಟಾಚಾರದಂತೆ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ಯಲಾಗಿದೆ ಎಂದು ಅವರು ಹೇಳಿದರು.

ವಿಮಾನವು ತಿರುವನಂತಪುರಂ ವಿಮಾನ ನಿಲ್ದಾಣವನ್ನು ಸಮೀಪಿಸುತ್ತಿದ್ದಂತೆ ಬಾಂಬ್ ಬೆದರಿಕೆ ಇರುವುದಾಗಿ ಪೈಲಟ್‌ ಬೆಳಿಗ್ಗೆ 7.30 ಕ್ಕೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬೆಳಿಗ್ಗೆ 7.36 ಕ್ಕೆ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಯಿತು ಎಂದು ಅವರು ಹೇಳಿದರು. ಅಲ್ಲದೆ ವಿಮಾನ ನಿಲ್ದಾಣದ ಒಳಗಡೆ ಮತ್ತು ಆವರಣದಲ್ಲಿ ತಪಾಸಣೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. ಬಾಂಬ್ ಬೆದರಿಕೆ ಬಂದ ಮೂಲದ ಕುರಿತ ವಿವರಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ವಿಮಾನ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.