ನ್ಯೂಸ್

ಆರತಕ್ಷತೆಯ ದಿನದಂದೇ ಪ್ರಿಯಕರನ ಜತೆ ವಧು ಪರಾರಿ; Film Style ಕೇಸ್​ ಕುರಿತು ಪೊಲೀಸರು ಹೇಳಿದ್ದಿಷ್ಟು

ಭೋಪಾಲ್​: ಸಾಮಾನ್ಯವಾಗಿ ನಾವು ಸಿನಿಮಾ ಹಾಗೂ ಸೀರಿಯಲ್​ಗಳಲ್ಲಿ ನೋಡಿರುವಂತೆ ವಧು ಅಥವಾ ವರ ತಮ್ಮ ಮದುವೆಯ ದಿನ ಮಂಟಪದಿಂದ ಓಡಿ ಹೋಗುವುದನ್ನು ನೋಡಿದ್ಧೇವೆ. ನಿಜಜೀವನದಲ್ಲೂ ಈ ರೀತಿಯ ಅನೇಕ ಘಟನೆಗಳು ನಡೆದಿದ್ದು, ಆಗೊಮ್ಮೆ ಈಗೊಮ್ಮೆ ನಮ್ಮ ಕಿವಿಗೆ ಬೀಳುತ್ತಿರುತ್ತವೆ. ಇದೀಗ ವಧುವೊಬ್ಬಳು ತನ್ನ ಆರತಕ್ಷತೆಯ ದಿನ ಬ್ಯೂಟಿ ಪಾರ್ಲರ್​ನಿಂದ ಸಿನಿಮೀಯ ಶೈಲಿಯಲ್ಲಿ (Film Style) ಪ್ರಿಯಕರನೊಂದಿಗೆ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಘಟನೆಯು ಮಧ್ಯಪ್ರದೇಶದ ಭೋಪಾಲ್​ನಲ್ಲಿ ನಡೆದಿದ್ದು, ವಧು ತನ್ನ ಪ್ರಿಯಕರನೊಂದಿಗೆ ಒಡವೆ ಹಾಗೂ ಹಣದೊಂದಿಗೆ ಪರಾರಿಯಾಗಿದ್ದು, ಸದ್ಯ ಈ ವಿಚಾರ ಹೊಸ ಚರ್ಚೆಗೆ ನಾಂದಿ ಹಾಡಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಧು ಹಾಗೂ ಆಕೆಯ ಪ್ರಿಯಕರನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಘಟನೆ ಬಗ್ಗೆ ಮಾತನಾಡಿರುವ ಎಸ್​ಎಚ್​ಒ ಸುಧೀರ್ ಅರಾಜಾರಿಯಾ, ಭೋಪಾಲ್​ನ ಟಿಟಿ ನಗರದಲ್ಲಿ ಈ ಘಟನೆ ನಡೆದಿದ್ದು, ವಧು 10 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳೊಂದಿಗೆ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ. ಆರಂಭದಲ್ಲಿ ಇದು ಅಪಹರಣ ಪ್ರಕರಣ ಎಂದು ಬಿಂಬಿಸಲಾಗಿತ್ತು. ಆಳವಾಗಿ ತನಿಖೆ ನಡೆಸಿದಾಗ ವಧು ತನ್ನ ಪ್ರಿಯಕರನೊಂದಿಗೆ ಸಿನಿಮೀಯ ಶೈಲಿಯಲ್ಲಿ (Film Style) ಓಡಿ ಹೋಗಿರುವುದು ಬೆಳಕಿಗೆ ಬಂದಿದೆ.

ಆಶಿಶ್ ರಜಾಕ್ ವಿದಿಶಾ ಜಿಲ್ಲೆಯ ಗಂಜ್‌ಬಸೋಡಾದ ರೋಶ್ನಿ ಸೋಲಂಕಿ ಅವರನ್ನು ಫೆಬ್ರವರಿ 18ರಂದು ವಿವಾಹವಾಗಿದ್ದರು. ಇವರಿಬ್ಬರ ಆರತಕ್ಷತೆ ಸಮಾರಂಭವನ್ನು ಫೆಬ್ರವರಿ 19ರಂದು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಆರತಕ್ಷತೆಯ ದಿನ ಆಶಿಶ್‌ ಮತ್ತು ರೋಶ್ನಿ ಹತ್ತಿರದ ಸಲೂನ್ ಒಂದಕ್ಕೆ ರೆಡಿಯಾಗಲು ಹೋಗಿದ್ದು, ಅಲ್ಲಿಂದ ನೇರವಾಗಿ ಮಂಟಪಕ್ಕೆ ಕಾರಿನಲ್ಲಿ ತೆರಳಿದರು. ಮಂಟಪ ತಲುಪುವ ಮಾರ್ಗಮಧ್ಯೆ ಇನ್ನೊಂದು ಕಾರು ಬಂದಿದ್ದು, ವರ ಆಶಿಕ್ನ ಸಹೋದರಿಯನ್ನು ತಳ್ಳಿ ವಧುವನ್ನು ತನ್ನ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. 

ಮೊದಲಿಗೆ ಅಪಹರಣ ಪ್ರಕರಣ ಎಂದು ದೂರು ದಾಖಲಾಗಿತ್ತು. ಆ ನಂತರ ವಿಚಾರಣೆ ನಡೆಸಿದಾಗ ವಧು ಇಷ್ಟಪಟ್ಟೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎಂಬುದು ಬೆಳಕಿಗೆ ಬಂದಿದೆ. ವಧು ರೋಶ್ನಿ ಮತ್ತು ಅಂಕಿತ್‌ ಎಂಬ ಯುವಕ ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು, ಇದಕ್ಕೆ ಮನೆಯವರ ವಿರೋಧವಿತ್ತು. ಅಷ್ಟೇ ಅಲ್ಲದೆ ಆಕೆ ಮನೆಯವರು ಮಗಳ ಇಚ್ಛೆಗೆ ವಿರುದ್ಧವಾಗಿ ಆಶಿಕ್​ ಜೊತೆಗೆ ಮದುವೆ ಮಾಡಿದ್ದರು. ನಂತರ ಆರತಕ್ಷತೆಯ ದಿನ ಈ ಇಬ್ಬರು ಪ್ರೇಮಿಗಳು ಓಡಿ ಹೋಗಿದ್ದಾರೆ. ಈ ಬಗ್ಗೆ ಪೊಲೀಸ್‌ ಠಾಣೆಯಲ್ಲಿ ದೂರನ್ನು ದಾಖಲಿಸಲಾಗಿದ್ದು, ತಲೆಮರೆಸಿಕೊಂಡಿರುವ ರೋಶ್ನಿ ಮತ್ತು ಅಂಕಿತ್‌ಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ಎಸ್​ಎಚ್​ಒ ಸುಧೀರ್ ಅರಾಜಾರಿಯಾ ತಿಳಿಸಿದ್ದಾರೆ.