Bride Market : ಯುವಕರಲ್ಲಿ ಗೊಂದಲ ಮೂಡಿಸುವಂತಹ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡುತ್ತಲೇ ಇರುತ್ತೇವೆ. ಮಧ್ಯಪ್ರದೇಶದ ಶಿವಪುರಿಯಲ್ಲಿ ಹೆಣ್ಣುಮಕ್ಕಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್ ಆಗುತ್ತಿರುತ್ತದೆ. ಸ್ಮಾರ್ಟ್ ಜನರು ಈ ರೀತಿಯ ವಿಡಿಯೋಗಳ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಆದರೆ, ಕೆಲವರು ಈ ವೀಡಿಯೋಗಳನ್ನು ನಿಜವೆಂದು ನಂಬುತ್ತಾರೆ.
ಅದೇ ರೀತಿ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನೆಲೆಸಿರುವ ಸೋನೆಲಾಲ್ ಮೌರ್ಯ ಎಂಬ ಯುವಕ ಇಂತಹ ವಿಡಿಯೋಗಳನ್ನು ನೋಡಿ ನೇರವಾಗಿ ಶಿವಪುರಿಗೆ ಬಂದಿದ್ದಾರೆ. ಹುಡುಗಿಯನ್ನು ಖರೀದಿ ಮಾಡುವ ಆಸೆಯಿಂದ ಬಂದವನಿಗೆ ಒಂದು ದೊಡ್ಡ ಆಘಾತವೇ ಕಾದಿತ್ತು. ಅಷ್ಟಕ್ಕೂ ಏನಾಯಿತು ಎಂಬುದನ್ನು ನಾವೀಗ ತಿಳಿಯೋಣ.
35 ವರ್ಷದ ಸೋನೆಲಾಲ್ ಇನ್ನೂ ಅವಿವಾಹಿತ. ವಯಸ್ಸಾಗುತ್ತಿದ್ದರೂ ಮದುವೆಯಾಗಲು ಯಾವುದೇ ಹೆಣ್ಣು ಸಿಗುತ್ತಿಲ್ಲ ಎಂದು ತೀವ್ರ ಮನನೊಂದಿದ್ದ. ಹೀಗಾಗಿ ಆತ ವಧುವನ್ನು ಖರೀದಿಸಲು ಶಿವಪುರಿಗೆ ಬಂದಿದ್ದ. ವಧುವನ್ನು ಖರೀದಿಸಿ ಮದುವೆ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋಗಬೇಕೆಂದುಕೊಂಡಿದ್ದ. ಆದರೆ, ಆಗಿದ್ದೇ ಬೇರೆ.
ಈ ಬಗ್ಗೆ ಸ್ವತಃ ಸೋನೆವಾಲ್ ಮಾತನಾಡಿದ್ದು, ನಾನು ಯೂಟ್ಯೂಬ್‌ನಲ್ಲಿ ಶಿವಪುರಿಯ ಧಾಡಿಚಾ ಅಭ್ಯಾಸದ ಬಗ್ಗೆ ಕೆಲವು ವಿಡಿಯೋಗಳನ್ನು ನೋಡಿದ್ದೇನೆ. ಈ ವಿಡಿಯೋಗಳಲ್ಲಿ ಶಿವಪುರಿಯಲ್ಲಿ ವಧುವನ್ನು ಖರೀದಿಸುವ ಮಾರುಕಟ್ಟೆ ಇದೆ ಎಂದು ಹೇಳಿದ್ದಾರೆ. ಹೀಗಾಗಿ ಹುಡುಗಿಯನ್ನು ಹುಡುಕುತ್ತಾ ನಾನು ಶಿವಪುರಿ ತಲುಪಿದೆ. ಬಳಿಕ ವಧುವಿನ ಮಾರುಕಟ್ಟೆಯ ಬಗ್ಗೆ ಜನರನ್ನು ಕೇಳಿದಾಗ, ಆ ರೀತಿಯ ಯಾವುದೇ ಮಾರುಕಟ್ಟೆ ಇಲ್ಲಿ ಇಲ್ಲ ಎಂದರು. ಇದರಿಂದ ನನಗೆ ತುಂಬಾ ನಿರಾಸೆ ಆಯಿತು ಎಂದಿದ್ದಾರೆ.
ಅಂದಹಾಗೆ ಸೋನೆಲಾಲ್ ಐಟಿಐ ಮಾಡಿದ್ದು, ಪ್ರಸ್ತುತ ಖಾಸಗಿ ಸಂಸ್ಥೆಯೊಂದರಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಚೆನ್ನಾಗಿ ಸಂಪಾದಿಸುತ್ತಾರೆ ಆದರೂ, ಮದುವೆಯಾಗಲಿಲ್ಲ ಎಂದು ಸೋನೆಲಾಲ್ ಬೇಸರ ಹೊರಹಾಕಿದ್ದಾರೆ. ಇನ್ನು ಶಿವಪುರಿಯಲ್ಲಿ ವಾಸವಾಗಿರುವ ಕೆಲ ಎನ್‌ಜಿಒ ಕಾರ್ಯಕರ್ತರು ಧಾಡಿಚಾ ಪದ್ಧತಿಯಿಂದ ಶಿವಪುರಿ ಖ್ಯಾತಿಗೆ ಧಕ್ಕೆಯಾಗಲಿದ್ದು, ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. (ಏಜೆನ್ಸೀಸ್)