ನ್ಯೂಸ್

ಹನಿಮೂನ್​ ವೇಳೆ ವರನಿಗೆ ಮತ್ತು ಬರುವ ಔಷಧಿ ನೀಡಿ ವಧು ಎಸ್ಕೇಪ್​! ಪೊಲೀಸ್​ ತನಿಖೆಯಲ್ಲಿ ಕಾರಣ ಬಯಲು

ಲಖನೌ: ಮದುವೆ ಎಂಬುದು ಎರಡು ಆತ್ಮಗಳನ್ನು ಒಂದು ಮಾಡುವ ಪವಿತ್ರ ಬಂಧನ. ವಿವಾಹವು ವಧು-ವರನ ನಡುವಿನ ಸಂಬಂಧವನ್ನು ಅಧಿಕೃತ ಮತ್ತು ಶಾಶ್ವತವಾಗಿಸುತ್ತದೆ. ಇಬ್ಬರೂ ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ ಪ್ರಕಟಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಡುತ್ತಾರೆ. ಮದುವೆಯ ನಂತರದ ಮಧುರ ಕ್ಷಣವೆಂದರೆ ಹನಿಮೂನ್​. ಈ ಕ್ಷಣಕ್ಕಾಗಿ ವಧು-ವರ ಎದುರು ನೋಡುತ್ತಿರುತ್ತಾರೆ.

ಮಧುಚಂದ್ರವು ನವವಿವಾಹಿತ ದಂಪತಿಗಳಿಗೆ ತಮ್ಮನ್ನು ತಾವು ಪರಸ್ಪರ ಅರ್ಥ ಮಾಡಿಕೊಳ್ಳಲು ಸಾಕಷ್ಟು ಖಾಸಗಿ ಸಮಯವನ್ನು ನೀಡುತ್ತದೆ. ಇಬ್ಬರೂ ಬೆರೆತು ಒಂದಾಗುವ ಕ್ಷಣ ಶಾಶ್ವತ ನೆನಪಿನಲ್ಲಿ ಉಳಿಯುತ್ತದೆ. ಆದರೆ, ಇದಕ್ಕೆ ವಿರುದ್ಧವಾದ ಘಟನೆ ನಡೆದಿದೆ. ಹನಿಮೂನ್​ ಸಮಯದಲ್ಲೇ ವಧು ನಾಪತ್ತೆಯಾಗಿದ್ದಾಳೆ. ವರನಿಗೆ ಮತ್ತು ಬರುವ ಔಷಧಿ ನೀಡಿ ತನ್ನ ಲವರ್​ ಜೊತೆ ಓಡಿ ಹೋದ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢ ಗುರುದ್ವಾರ ರಸ್ತೆಯ ನಿವಾಸಿಯಾದ ಸತ್ಯಂ, ಆಗ್ರಾ ನಿವಾಸಿ ದಿಪಾಸಿ ಎಂಬಾಕೆಯನ್ನು ಕಳೆದ ನವೆಂಬರ್​ನಲ್ಲಿ ಮದುವೆ ಆಗಿದ್ದ. 2022ರ ಡಿಸೆಂಬರ್​ 8ರಂದು ಸತ್ಯಂ ತನ್ನ ಪತ್ನಿಯ ಜೊತೆ ಉತ್ತರಾಖಂಡಕ್ಕೆ ಹನಿಮೂನ್​ಗೆ ತೆರಳಿದ್ದರು. ಇಬ್ಬರು ರಿಷಿಕೇಶದ ಖಾಸಗಿ ಹೋಟೆಲ್​ ಒಂದರಲ್ಲಿ ರೂಮ್​ ಬುಕ್​ ಮಾಡಿದ್ದರು.

ಹನಿಮೂನ್​ನ ಮೊದಲ ದಿನವೇ ಪತ್ನಿ ಕೊಟ್ಟ ಟೀ ಕುಡಿದ ಸತ್ಯಂ ಪ್ರಜ್ಞೆ ಕಳೆದುಕೊಂಡರು. ಟೀನಲ್ಲಿ ಸತ್ಯಂ ಪತ್ನಿ ದಿಪಾಸಿ ಕೆಲ ಮತ್ತು ಬರುವ ಔಷಧಿ ಬೆರೆಸಿದ್ದರಿಂದ ಆತ ಪ್ರಜ್ಞೆ ತಪ್ಪಿದ್ದ. ಇದಾದ ಬಳಿಕ ದಿಪಾಸಿ ತನ್ನ ಲಗೇಜ್​ ಪ್ಯಾಕ್​ ಮಾಡಿಕೊಂಡು ಹಣದ ಜೊತೆಗೆ ಹೋಟೆಲ್​ನಿಂದ ಎಸ್ಕೇಪ್​ ಆಗಿದ್ದಾಳೆ. ಪ್ರಜ್ಞೆ ಬಂದ ಬಳಿಕ ಸತ್ಯಂ ತನ್ನ ಪತ್ನಿಗಾಗಿ ಹುಡುಕಾಡಿದ್ದಾನೆ. ಆದರೆ, ಪತ್ನಿಯ ಸುಳಿವು ಪತ್ತೆಯಾಗದಿದ್ದಾಗ, ಹೋಟೆಲ್​ ಸಿಬ್ಬಂದಿ ಬಳಿ ಪತ್ನಿಯ ಬಗ್ಗೆ ವಿಚಾರಿಸಿದ್ದಾರೆ. ರಾತ್ರಿ 7 ಗಂಟೆ ಸುಮಾರಿಗೆ ಪತ್ನಿ ಹೋಟೆಲ್​ನಿಂದ ಲಗೇಜ್​ ಸಮೇತ ಹೊರ ಹೋಗಿರುವ ಮಾಹಿತಿ ಸತ್ಯಂಗೆ ತಿಳಿಯುತ್ತದೆ.

ಮಾಹಿತಿ ತಿಳಿದ ಕೂಡಲೇ ಸತ್ಯಂ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲಿಸುತ್ತಾರೆ. ತನಿಖೆ ನಡೆಸುವ ಪೊಲೀಸರಿಗೆ ದಿಪಾಸಿ ಬಸ್​ ಮೂಲಕ ದೆಹಲಿಗೆ ತೆರಳಿರುವುದಾಗಿ ತಿಳಿಯುತ್ತದೆ. ಬಳಿಕ ಸತ್ಯಂ, ತನ್ನ ಕುಟುಂಬಕ್ಕೆ ಮತ್ತು ಆಗ್ರಾದಲ್ಲಿರುವ ಅತ್ತೆ ಮನೆಗೆ ಎಲ್ಲವನ್ನು ತಿಳಿಸುತ್ತಾನೆ. ಆದರೆ, ದಿಪಾಸಿ ಕುಟುಂಬವು ಬಹಳ ವಿಚಿತ್ರವಾಗಿ ಪ್ರತಿಕ್ರಿಯಿಸುತ್ತಾರೆ. ಗ್ಯಾಂಗ್​ಸ್ಟರ್​ ಅನ್ಶು ಯಾದವ್ ಎಂಬ ಮತ್ತೊಬ್ಬ ಯುವಕನ ಜೊತೆ ದಿಪಾಸಿಗೆ ಸಂಬಂಧ ಇದೆ. ಆಕೆಯನ್ನು ಮರೆತುಬಿಡುವಂತೆ ಸತ್ಯಂಗೆ ಹೇಳುತ್ತಾರೆ.

ಇದಾದ ನಂತರ ಸತ್ಯಂ ಉತ್ತರಾಖಂಡ ಪೊಲೀಸರು, ಅಲಿಗಢ ಪೊಲೀಸರು ಮತ್ತು ಆಗ್ರಾ ಪೊಲೀಸರಿಗೆ ಲಿಖಿತ ದೂರುಗಳನ್ನು ಸಲ್ಲಿಸಿದರು. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರ ನಿಷ್ಕ್ರಿಯತೆಯ ಹಿನ್ನೆಲೆಯಲ್ಲಿ ಸತ್ಯಂ ನ್ಯಾಯಾಲಯದ ಬಾಗಿಲು ತಟ್ಟಿದರು. ಆಘಾತಕಾರಿ ಸಂಗತಿಯೆಂದರೆ, ವರದಕ್ಷಿಣೆಗಾಗಿ ದೈಹಿಕ ಹಲ್ಲೆ ಮತ್ತು ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಸತ್ಯಂ ಅವರಿಗೆ ದಿಪಾಸಿ ಕುಟುಂಬ ಲೀಗಲ್ ನೋಟಿಸ್ ಕಳುಹಿಸಿದೆ. (ಏಜೆನ್ಸೀಸ್​)