ನ್ಯೂಸ್

ಡಾಲರ್​ ವಿರುದ್ಧ ಬ್ರಿಕ್ಸ್​ ಕರೆನ್ಸಿ ವಾರ್​

Webdesk - Manjunatha B

ಬ್ರಿಕ್ಸ್ ಒಕ್ಕೂಟದಲ್ಲಿ ಇರುವ ರಾಷ್ಟ್ರಗಳು ವ್ಯಾಪಾರ ವಹಿವಾಟಿಗಾಗಿ ಡಾಲರ್ ಬದಲು ಸ್ಥಳೀಯ ಕರೆನ್ಸಿ ಬಳಸಲು ಉತ್ಸಾಹ ತೋರಿವೆ. ಇದು ಸಾಧ್ಯವಾದರೆ ಭಾರತ ಕೂಡ ಈ ರಾಷ್ಟ್ರಗಳೊಂದಿಗೆ ಡಾಲರ್ ಬದಲು ರೂಪಾಯಿಯಲ್ಲೇ ವಹಿವಾಟು ನಡೆಸಬಹುದು. ಅಲ್ಲದೆ, ಈ ವಹಿವಾಟನ್ನು ಮತ್ತಷ್ಟು ಸುಗಮಗೊಳಿಸಲು ಬ್ರಿಕ್ಸ್ ರಾಷ್ಟ್ರಗಳಿಗೆಂದೇ ಹೊಸ ಪೇಮೆಂಟ್ ಸಿಸ್ಟಮ್ (ಪಾವತಿ ವಿಧಾನ) ರೂಪಿಸಲು ರಷ್ಯಾ ಮುಂದಾಗಿದ್ದು, ಚೀನಾ ಇದಕ್ಕೆ ಕೈಜೋಡಿಸುವ ಭರವಸೆ ನೀಡಿದೆ. ರಷ್ಯಾದ ಕಜಾನ್ ನಗರದಲ್ಲಿ ಅಕ್ಟೋಬರ್ 22ರಿಂದ 24ರವರೆಗೆ ನಡೆದ 16ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಜಗತ್ತಿನ ಮೂರು ಬಲಾಢ್ಯ ಆರ್ಥಿಕ ಶಕ್ತಿಗಳಾದ ರಷ್ಯಾ, ಚೀನಾ ಮತ್ತು ಭಾರತ ಡಾಲರ್ ವಿರುದ್ಧ ಸಮರ ಸಾರುವ ಸೂಚನೆ ನೀಡಿವೆ.

ರವೀಂದ್ರ ಎಸ್. ದೇಶಮುಖ್ ‘ದೊಡ್ಡಣ್ಣ’ನ ಧಿಮಾಕಿಗೆ ಮೂಲ ಕಾರಣ ಡಾಲರ್. ಜಾಗತಿಕವಾಗಿ ಡಾಲರ್ ವಿಶ್ವಸನೀಯ ಕರೆನ್ಸಿ ಎನಿಸಿಕೊಂಡಿದ್ದು, ಉಳಿದ ರಾಷ್ಟ್ರಗಳು ಡಾಲರ್​ನಲ್ಲೇ ವಹಿವಾಟು ನಡೆಸುವುದರಿಂದ ಅಮೆರಿಕ ಕುಳಿತಲ್ಲೇ ಲಕ್ಷಾಂತರ ಡಾಲರ್ ಆದಾಯ ತನ್ನದಾಗಿಸಿಕೊಳ್ಳುತ್ತಿದೆ. ಡಾಲರ್ ಬಲದಿಂದಲೇ ಅಮೆರಿಕದ ಆರ್ಥಿಕತೆ ಭದ್ರವಾಗಿಯೂ, ಸ್ಥಿರವಾಗಿಯೂ ಇದೆ. ಆದರೆ, ಡಾಲರ್​ನ ಪ್ರಾಬಲ್ಯ ಕಡಿಮೆಗೊಳಿಸಬೇಕು ಎಂಬ ಪ್ರಯತ್ನಗಳು ಹಲವು ದಶಕಗಳಿಂದ ಆಗಾಗ ನಡೆಯುತ್ತಿದ್ದರೂ ಅದಕ್ಕೆ ಹೇಳಿಕೊಳ್ಳುವಂಥ ಯಶಸ್ಸು ಸಿಕ್ಕಿಲ್ಲ. ಈ ಬಾರಿ ಬ್ರಿಕ್ಸ್ ರಾಷ್ಟ್ರಗಳಿಂದ ಪ್ರತ್ಯೇಕ ಪಾವತಿ ವಿಧಾನ ಮತ್ತು ಅದಕ್ಕಾಗಿ ಬ್ಯಾಂಕಿಂಗ್ ನೆಟ್​ವರ್ಕ್ ರೂಪಿಸುವ ಪ್ರಕ್ರಿಯೆಗೆ ಬಲ ಬಂದಿದ್ದು, ಈ ಬೆಳವಣಿಗೆ ಜಾಗತಿಕ ವಲಯದಲ್ಲೂ ತೀವ್ರ ಕುತೂಹಲ ಮೂಡಿಸಿದೆ. ಈ ಬಗೆಯ ಪ್ರಯತ್ನಗಳಿಂದ ಡಾಲರ್​ನ ಬಳಕೆಯನ್ನು ತಗ್ಗಿಸಬಹುದೆ ಹೊರತು ಸಂಪೂರ್ಣವಾಗಿ ಡಾಲರ್​ನ ಪ್ರಾಬಲ್ಯ ಕಡಿಮೆ ಮಾಡಲು ಸಾಧ್ಯವಿಲ್ಲ ಎನ್ನುತ್ತಾರೆ ವಿತ್ತೀಯ ಪರಿಣಿತರು.

‘ಬ್ರಿಕ್ಸ್ ಕರೆನ್ಸಿಯನ್ನು ಜಾರಿಗೆ ತರಲು ಇನ್ನಷ್ಟು ಸಮಯ ಬೇಕಾಗಲಿದೆ. ಹಾಗಾಗಿ, ಬ್ರಿಕ್ಸ್ ನ್ಯಾಷನಲ್ ಕರೆನ್ಸಿಯ (ಆಯಾ ದೇಶಗಳ ಕರೆನ್ಸಿ) ಬಳಕೆ ಹೆಚ್ಚಿಸಲು ಮತ್ತು ಅದನ್ನು ಸುರಕ್ಷಿತವಾಗಿಸಲು ಕೆಲಸ ಮಾಡುತ್ತಿದೆ’ ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಪುತಿನ್ ಅ. 19ರಂದು ಹೇಳಿದ್ದು, ರಾಷ್ಟ್ರೀಯ ಕರೆನ್ಸಿಗಳ ಬಳಕೆ ಹೆಚ್ಚುವ ಸೂಚನೆಯಂತೂ ಸ್ಪಷ್ಟವಾಗಿ ಸಿಕ್ಕಿದೆ. ಅಲ್ಲದೆ, ಇದರ ಬೆನ್ನಲ್ಲೇ ಬ್ರಿಕ್ಸ್ ಕರೆನ್ಸಿ ಜಾರಿಯ ಪ್ರಕ್ರಿಯೆಗಳೂ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಬ್ರಿಕ್ಸ್​ನ್ನು ಬೆಂಬಲಿಸುವ 36 ರಾಷ್ಟ್ರಗಳು ಬ್ರಿಕ್ಸ್ ಕರೆನ್ಸಿಯಲ್ಲಿ ವ್ಯಾಪಾರ, ವಹಿವಾಟು ನಡೆಸುವಂತಾದರೆ, ಡಾಲರ್ ಪ್ರಾಬಲ್ಯ ಕುಸಿಯುವುದು ಬಹುತೇಕ ನಿಶ್ಚಿತ. ಸದ್ಯದ ಮಟ್ಟಿಗೆ, ಒಂದೇ ಪೇಮೆಂಟ್ ಸಿಸ್ಟಮ್ ಮೂಲಕ ವಹಿವಾಟು ನಡೆಸಲು ಬ್ರಿಕ್ಸ್ ರಾಷ್ಟ್ರಗಳು ಚಿಂತನೆ ನಡೆಸಿವೆ. ಹಾಗಾಗಿಯೇ, ಡಿ-ಡಾಲರೈಜೇಶನ್ ಮತ್ತು ನ್ಯೂ ಪೇಮೆಂಟ್ ಸಿಸ್ಟಮ್ ಈ ಬಾರಿ ಬ್ರಿಕ್ಸ್​ನ ಮುಖ್ಯ ಕಾರ್ಯಸೂಚಿಯಾಗಿತ್ತು. ಆಂತರಿಕವಾಗಿ ಆರ್ಥಿಕ ತಳಮಳಗಳಿಂದ ಈಗಾಗಲೇ ಚಿಂತೆಗೆ ಸಿಲುಕಿರುವ ಅಮೆರಿಕ ಈ ಬೆಳವಣಿಗೆಗಳನ್ನು ಎಚ್ಚರಿಕೆಯಿಂದ ಗಮನಿಸುತ್ತಿದೆ. ಭಾರತವೂ ರಷ್ಯಾ ಮತ್ತು ಚೀನಾದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಬ್ರಿಕ್ಸ್ ರಾಷ್ಟ್ರಗಳ ನಡುವೆ ರಾಷ್ಟ್ರೀಯ ಕರೆನ್ಸಿಗಳ ವಹಿವಾಟು ಹೆಚ್ಚಿದರೆ, ಅದರಿಂದ ಚೀನಾದ ಪ್ರಾಬಲ್ಯ ಹೆಚ್ಚಿ, ಹೊಸ ತಲೆನೋವು ಸೃಷ್ಟಿಯಾಗಬಹುದು ಎಂಬ ಬಗ್ಗೆಯೂ ಭಾರತ ಅವಲೋಕಿಸುತ್ತಿದೆ.

ಚೀನಾ ಕೂಡ ಹಿಂದೆ ಬಿದ್ದಿಲ್ಲ: ಅಮೆರಿಕದ ಖಗಐಊಖ ನೆಟ್​ವರ್ಕ್​ನಂತೆಯೇ ಚೀನಾ ಕೂಡ ಸಿಐಪಿಎಸ್ ಎಂಬ ಪಾವತಿ ವಿಧಾನವನ್ನು ರೂಪಿಸಿದೆ. 117 ದೇಶಗಳ 1551 ಬ್ಯಾಂಕ್​ಗಳು ಈ ಪೇಮೆಂಟ್ ಸಿಸ್ಟಮ್್ನು ಬಳಸುತ್ತಿವೆ. 2023ರ ನವೆಂಬರ್​ನಲ್ಲಿ ಚೀನಾ ಸೌದಿ ಅರೇಬಿಯಾ ಜತೆ ಒಪ್ಪಂದ ಮಾಡಿಕೊಂಡಿದ್ದು, ಮೂರು ವರ್ಷದ ಅವಧಿಗೆ ಡಾಲರ್ ಬದಲಿಗೆ ಯುವಾನ್​ನ್ನು ಬಳಸಿ, ಕರೆನ್ಸಿ ಸ್ವೈಪ್ ಮಾಡಲಾಗುತ್ತದೆ. ಇದರ ಮೌಲ್ಯ 6.93 ಬಿಲಿಯನ್ ಡಾಲರ್. ಈ ಮೂಲಕ ಡಾಲರ್​ಗೆ ಸೆಡ್ಡು ಹೊಡೆಯಲು ಚೀನಾ ನಿರಂತರವಾಗಿ ಪ್ರಯತ್ನ ನಡೆಸಿದೆ. ಈಗ, ರಷ್ಯಾ ಕೂಡ ಅಮೆರಿಕನ್ ಡಾಲರ್ ಪ್ರಭಾವ ಕುಗ್ಗಿಸಲು ಮುಂದಾಗಿರುವುದು ಚೀನಾದ ಉತ್ಸಾಹವನ್ನು ಹೆಚ್ಚಿಸಿದೆ.

ಡಾಲರ್ ಪ್ರಾಬಲ್ಯ ಗಳಿಸಿದ್ದು ಹೇಗೆ?

ಎರಡನೇ ವಿಶ್ವಯುದ್ಧದವರೆಗೂ, ಯಾವ ದೇಶಗಳ ಬಳಿ ಎಷ್ಟು ಚಿನ್ನದ ಸಂಗ್ರಹ ಇರುತ್ತಿತ್ತೋ ಅಷ್ಟೇ ಮೌಲ್ಯದ ಕರೆನ್ಸಿಯನ್ನು ಜಾರಿಗೊಳಿ ಸುತ್ತಿದ್ದರು. 1944ರಲ್ಲಿ ಜಗತ್ತಿನ 44 ರಾಷ್ಟ್ರಗಳ ಪ್ರಮುಖರು ಒಂದೆಡೆ ಸಭೆ ಸೇರಿ ಅಮೆರಿಕ ಡಾಲರ್ ಎದುರು ಎಲ್ಲ ಕರೆನ್ಸಿಗಳ ಎಕ್ಸ್​ಚೇಂಜ್ ರೇಟ್​ನ್ನು ನಿಗದಿಗೊಳಿಸಿದರು. ಏಕೆಂದರೆ, ಆ ಹೊತ್ತಲ್ಲಿ ಅಮೆರಿಕದ ಬಳಿ ಅತಿ ಹೆಚ್ಚು ಚಿನ್ನದ ಸಂಗ್ರಹವಿತ್ತು ಮತ್ತು ಜಗತ್ತಿನ ಅತ್ಯಂತ ದೊಡ್ಡ ಹಾಗೂ ಸ್ಥಿರ ಆರ್ಥಿಕತೆಯಾಗಿತ್ತು. ಅದಾಗಿ 80 ವರ್ಷಗಳು ಕಳೆದಿವೆ. ಈಗ 2024ರಲ್ಲಿ ಜಗತ್ತಿನ 80% ವ್ಯಾಪಾರ ಮತ್ತು 58% ಪಾವತಿ (ಪೇಮೆಂಟ್) ಡಾಲರ್​ನಲ್ಲೇ ಆಗುತ್ತಿದೆ ಎಂಬುದು ಡಾಲರ್​ನ ಪ್ರಾಬಲ್ಯಕ್ಕೆ ಸಾಕ್ಷಿ. ಅಲ್ಲದೆ, ಜಗತ್ತಿನ 64% ಸಾಲ ಹಾಗೂ 59% ವಿದೇಶಿ ವಿನಿಮಯ ಮೀಸಲು (ಫಾರಿನ್ ಎಕ್ಸ್​ಚೇಂಜ್ ರಿಜರ್ವ್) ಡಾಲರ್​ನಲ್ಲೇ ಇದೆ. 1970ರ ಸಮಯದಲ್ಲಿ ಹಲವು ರಾಷ್ಟ್ರಗಳು ಅಮೆರಿಕದ ಬಳಿ ಡಾಲರ್ ಬದಲು ಚಿನ್ನಕ್ಕೆ ಬೇಡಿಕೆ ಇಡತೊಡಗಿದವು. ಅಂದರೆ, ಈ ರಾಷ್ಟ್ರಗಳು ಅಮೆರಿಕಕ್ಕೆ ಡಾಲರ್ ನೀಡಿ, ಅದರ ಬದಲು ಚಿನ್ನ ಪಡೆದುಕೊಳ್ಳುತ್ತಿದ್ದವು. ಇದರ ಪರಿಣಾಮವಾಗಿ, ಅಮೆರಿಕದ ಚಿನ್ನದ ಭಂಡಾರ ವೇಗವಾಗಿ ಕರಗತೊಡಗಿ, ಹೊಸ ಸಮಸ್ಯೆ ಉದ್ಭವಿಸಿತು. 1971ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ನಿಕ್ಸನ್ ಅವರು ಡಾಲರ್​ನ್ನು ಚಿನ್ನದಿಂದ ಪ್ರತ್ಯೇಕಿಸಿಬಿಟ್ಟರು. ಆ ಹೊತ್ತಿಗಾಗಲೇ ಡಾಲರ್ ಜಗತ್ತಿನ ಸುರಕ್ಷಿತ ಕರೆನ್ಸಿಯಾಗಿ ಮಾರ್ಪಟ್ಟಿದ್ದರಿಂದ ಅಮೆರಿಕಕ್ಕೆ ಯಾವುದೇ ಸಮಸ್ಯೆ ಆಗಲಿಲ್ಲ.ಡಾಲರ್ ಬಲಗೊಳ್ಳಲು ಮತ್ತೊಂದು ಮುಖ್ಯ ಕಾರಣ 1945ರಲ್ಲಿ ಅಮೆರಿಕದ ಆಗಿನ ಅಧ್ಯಕ್ಷ ರೂಸ್​ವೆಲ್ಟ್ ಸೌದಿ ಅರೇಬಿಯಾದೊಂದಿಗೆ ಮಾಡಿಕೊಂಡ ಒಪ್ಪಂದ. ಈ ಒಪ್ಪಂದದ ಪ್ರಮುಖ ಷರತ್ತು ಏನೆಂದರೆ, ‘ಸೌದಿ ಅರೇಬಿಯಾಕ್ಕೆ ಅಮೆರಿಕ ಸಂಪೂರ್ಣ ಸುರಕ್ಷೆ ನೀಡುತ್ತದೆ. ಅದರ ಬದಲು ಸೌದಿ ಡಾಲರ್​ನಲ್ಲಿ ಮಾತ್ರ ಕಚ್ಚಾ ತೈಲವನ್ನು ಮಾರಾಟ ಮಾಡಬೇಕು’ ಎಂಬುದು. ಅಂದರೆ, ಯಾವುದೇ ರಾಷ್ಟ್ರ ಕಚ್ಚಾತೈಲ ಖರೀದಿಸಬೇಕು ಎಂದರೆ ಅದರ ಬಳಿ ಡಾಲರ್ ಇರಲೇಬೇಕು. ಪ್ರಸ್ತುತ ಜಗತ್ತಿನ ಬಹುತೇಕ ರಾಷ್ಟ್ರಗಳು ಪರಸ್ಪರ ವ್ಯಾಪಾರ ವಹಿವಾಟು ನಡೆಸಲು ಅಮೆರಿಕದ ಖಗಐಊಖ ನೆಟ್​ವರ್ಕ್​ನ್ನು (ಪಾವತಿ ವಿಧಾನ) ಬಳಸುತ್ತಿವೆ, ಇದರಿಂದ ಅಮೆರಿಕಕ್ಕೆ ನಿರಾಯಾಸವಾಗಿ ಆದಾಯ ಹೆಚ್ಚುತ್ತಿದೆ. 1973ರಲ್ಲಿ 22 ದೇಶಗಳ 518 ಬ್ಯಾಂಕ್​ಗಳು ಒಟ್ಟಾಗಿ ಖಗಐಊಖ ನೆಟ್​ವರ್ಕ್ ಬಳಸಲು ಆರಂಭಿಸಿದವು. ಪ್ರಸ್ತುತ 200ಕ್ಕೂ ಹೆಚ್ಚು ದೇಶಗಳ 11 ಸಾವಿರ ಬ್ಯಾಂಕುಗಳು ಈ ಪಾವತಿ ವಿಧಾನವನ್ನು ಬಳಸುತ್ತಿವೆ.

ರಷ್ಯಾ ಏನು ಮಾಡುತ್ತಿದೆ?

ರಷ್ಯಾ ಜಗತ್ತಿನ ಎರಡನೇ ಅತಿ ದೊಡ್ಡ ತೈಲ ಹಾಗೂ ನೈಸರ್ಗಿಕ ಅನಿಲ (ಗ್ಯಾಸ್) ಉತ್ಪಾದಕ ರಾಷ್ಟ್ರವಾಗಿದೆ. ಯುರೋಪಿಯನ್ ಒಕ್ಕೂಟದ ರಾಷ್ಟ್ರಗಳೇ ಹೆಚ್ಚಾಗಿ ರಷ್ಯಾದಿಂದ ಕಚ್ಚಾ ತೈಲ ಹಾಗೂ ಗ್ಯಾಸ್​ನ್ನು ಖರೀದಿಸುತ್ತವೆ. ತನ್ನ ಬಳಿ ನ್ಯಾಚುರಲ್ ಗ್ಯಾಸ್ ಖರೀದಿಸುವ ಯುರೋಪಿಯನ್ ಯೂನಿಯನ್​ನ ರಾಷ್ಟ್ರಗಳಿಗೆ 2022ರ ಏಪ್ರಿಲ್​ನಲ್ಲಿ ಸ್ಪಷ್ಟ ಸೂಚನೆ ನೀಡಿದ ರಷ್ಯಾ, ‘ಪಾವತಿಯನ್ನು ಡಾಲರ್ ಅಥವಾ ಯುರೋದಲ್ಲಿ ಮಾಡದೆ ರುಬಲ್ (ರಷ್ಯಾದ ಕರೆನ್ಸಿ)ನಲ್ಲೇ ಮಾಡಬೇಕು’ ಎಂದಿತು. ಅಂದರೆ, ರಷ್ಯಾದ ಬಳಿ ನೈಸರ್ಗಿಕ ಅನಿಲ ಖರೀದಿಸುವ ರಾಷ್ಟ್ರಗಳು ಮೊದಲು ಅಮೆರಿಕದ ಬ್ಯಾಂಕ್​ನಲ್ಲಿ ಡಾಲರ್ ಮೀಸಲು ಇಡಬೇಕಿತ್ತು. ಆದರೆ, 2022ರಲ್ಲಿ ಈ ವ್ಯವಸ್ಥೆ ಜಾರಿಗೆ ಬಂದ ಮೇಲೆ ಇತರ ರಾಷ್ಟ್ರಗಳು ರಷ್ಯಾ ಸೆಂಟ್ರಲ್ ಬ್ಯಾಂಕ್​ನಲ್ಲಿ ರುಬಲ್​ನ್ನು ಮೀಸಲಿಡುತ್ತಿವೆ. ಆದರೆ, ಇದರಿಂದ ರಷ್ಯಾದ ಗ್ಯಾಸ್ ರಫ್ತಿನಲ್ಲಿ ಭಾರಿ ಕುಸಿತ ಉಂಟಾಗಿದೆ. ಯುರೋಪಿಯನ್ ಯೂನಿಯನ್ ರಷ್ಯಾದಿಂದ 2021ರವರೆಗೆ 40%ರಷ್ಟು ಗ್ಯಾಸ್ ಆಮದು ಮಾಡಿಕೊಳ್ಳುತ್ತಿತ್ತು. 2023ರಲ್ಲಿ ಈ ಪ್ರಮಾಣ ಶೇಕಡ 8ಕ್ಕೆ ಕುಸಿದಿದ್ದು, ರಷ್ಯಾಗೆ ತಿರುಗುಬಾಣವಾಗಿ ಪರಿಣಮಿಸಿದೆ.

ಸಂಚಲನ ಸೃಷ್ಟಿಸಿದ ಕರೆನ್ಸಿ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಇತ್ತೀಚೆಗೆ ಕರೆನ್ಸಿ ನೋಟೋಂದನ್ನು ಪ್ರದರ್ಶಿಸಿದ್ದು, ಸಂಚಲನ ಸೃಷ್ಟಿಸಿದೆ. ಬ್ರಿಕ್ಸ್​ನ ಪ್ರಮುಖ ರಾಷ್ಟ್ರಗಳನ್ನು ಈ ಕರೆನ್ಸಿ ಪ್ರತಿನಿಧಿಸುವಂತಿದ್ದು, ನೋಟಿನಲ್ಲಿ ಹಲವು ರಾಷ್ಟ್ರಗಳ ಪ್ರಸಿದ್ಧ ತಾಣಗಳನ್ನು ಪ್ರಾತಿನಿಧಿಕವಾಗಿ ಬಳಸಲಾಗಿದೆ. ಹೀಗೆ ಈ ನೋಟಲ್ಲಿ ಭಾರತದ ತಾಜ್​ವುಹಲ್ ಚಿತ್ರವಿದ್ದು, ಕರೆನ್ಸಿ ಮಾನ್ಯತೆ ಪಡೆಯುವ ಮುನ್ನವೇ ವಿವಾದದ ಸ್ವರೂಪ ಪಡೆದುಕೊಂಡಿದೆ. ತಾಜ್​ವುಹಲ್ ಬದಲಿಗೆ ಅಯೋಧ್ಯಾದ ರಾಮಮಂದಿರ, ಕೋನಾರ್ಕ್​ನ ಸೂರ್ಯಮಂದಿರ ಅಥವಾ ಹಂಪಿಯ ಕಲ್ಲಿನ ರಥದ ಚಿತ್ರ ಅಳವಡಿಸಬೇಕು. ತಾಜ್​ವುಹಲ್ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವಂಥದ್ದಲ್ಲ ಎಂಬ ಚರ್ಚೆಗಳು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಗರಿಗೆದರಿವೆ. ಆದರೆ, ಈ ಬಗೆಯ ಕರೆನ್ಸಿ ಇನ್ನೂ ಅಂತಿಮ ರೂಪ ಪಡೆದುಕೊಂಡಿಲ್ಲ, ಅದಕ್ಕೆ ಯಾವುದೇ ಅಧಿಕೃತ ಮಾನ್ಯತೆಯೂ ಸಿಕ್ಕಿಲ್ಲ. ಆದರೆ, ಬ್ರಿಕ್ಸ್ ರಾಷ್ಟ್ರಗಳಿಗೆಂದೇ ಪ್ರತ್ಯೇಕ ಕರೆನ್ಸಿ ರೂಪಿಸಲು ವ್ಲಾದಿಮಿರ್ ಪುತಿನ್ ತೀವ್ರ ಪ್ರಯತ್ನ ನಡೆಸಿರುವುದಂತೂ ಹೌದು.

ಹೊಸ ಐಡಿಯಾ: ಬ್ರಿಕ್ಸ್ ರಾಷ್ಟ್ರಗಳಿಗಾಗಿಯೇ ಪ್ರತ್ಯೇಕ ಕರೆನ್ಸಿ ಮತ್ತು ವ್ಯಾಪಾರ ವಹಿವಾಟಿಗಾಗಿ ಪ್ರತ್ಯೇಕ ಪಾವತಿ ವಿಧಾನ ರೂಪಿಸುವ ಬಗ್ಗೆ ವ್ಲಾದಿಮಿರ್ ಪುತಿನ್ ಮೊದಲ ಬಾರಿ ಮಾತನಾಡಿದ್ದು 2022ರ ಜೂನ್​ನಲ್ಲಿ. ಆ ಬಳಿಕ ಈ ನಿಟ್ಟಿನಲ್ಲಿನ ಬೆಳವಣಿಗೆ ವೇಗ ಪಡೆದಿದ್ದು, ಅಮೆರಿಕ ವಿಧಿಸಿರುವ ನಿರ್ಬಂಧಗಳಿಂದ ಕಂಗೆಟ್ಟಿರುವ ಪುತಿನ್ ಬ್ರಿಕ್ಸ್ ಗಾಗಿ ಪ್ರತ್ಯೇಕ ಕರೆನ್ಸಿ ತರಲೇ ಬೇಕೆಂಬ ನಿಟ್ಟಿನಲ್ಲಿ ಪ್ರಯತ್ನಶೀಲರಾಗಿದ್ದಾರೆ. ಈಗಿನ ವೇಗವನ್ನು ನೋಡಿದರೆ, ಮುಂದಿನ ಎರಡು ಅಥವಾ ಮೂರು ವರ್ಷಗಳಲ್ಲಿ ಇದು ರಚನಾತ್ಮಕ ಸ್ವರೂಪ ಪಡೆದುಕೊಳ್ಳಬಹುದು ಎನ್ನುತ್ತಾರೆ ಆರ್ಥಿಕ ತಜ್ಞರು. ಬ್ರಿಕ್ಸ್​ನಲ್ಲಿ ಸಹಭಾಗಿಯಾಗಿರುವ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಈ ಬಗ್ಗೆ ಇನ್ನು ಯಾವುದೇ ಬಹಿರಂಗ ಹೇಳಿಕೆ ನೀಡದೆ, ಕಾದುನೋಡುವ ತಂತ್ರ ಅನುಸರಿಸುತ್ತಿರುವುದು ಗಮನಾರ್ಹ.

ತಜ್ಞರು ಹೇಳೋದೇನು?: ಈ ಎಲ್ಲ ಬೆಳವಣಿಗೆಗಳನ್ನು ಜಾಗತಿಕ ಆರ್ಥಿಕ ತಜ್ಞರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಅಮೆರಿಕದ ಅರ್ಥಶಾಸ್ತ್ರಜ್ಞ ಸೈಮನ್ ಹಂಟ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ಮುಂದಿನ ಎರಡು ವರ್ಷಗಳಲ್ಲಿ ಬ್ರಿಕ್ಸ್ ಕರೆನ್ಸಿ ಅಮೆರಿಕನ್ ಡಾಲರ್​ಗೆ ಪೈಪೋಟಿ ನೀಡಲಿದೆ’ ಎನ್ನುತ್ತಾರೆ.

  • ಬ್ರಿಕ್ಸ್ ಸದಸ್ಯ ರಾಷ್ಟ್ರಗಳು 10, ಬೆಂಬಲ ನೀಡಿರುವ ರಾಷ್ಟ್ರಗಳು 36.
  • ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಜನಸಂಖ್ಯೆ 350 ಕೋಟಿ- ಜಾಗತಿಕ ಜನಸಂಖ್ಯೆಯಲ್ಲಿ 45% ಪಾಲು
  • ಬ್ರಿಕ್ಸ್ ರಾಷ್ಟ್ರಗಳ ಒಟ್ಟು ಜಿಡಿಪಿ ಗಾತ್ರ 2,453 ಲಕ್ಷ ಕೋಟಿ ರೂ. (29.19 ಲಕ್ಷ ಕೋಟಿ ಡಾಲರ್)
  • ಜಾಗತಿಕ ಆರ್ಥಿಕತೆಯಲ್ಲಿ ಬ್ರಿಕ್ಸ್ ರಾಷ್ಟ್ರಗಳ ಪಾಲು 28%