ನ್ಯೂಸ್

ಒಂದು ಇಟ್ಟಿಗೆ ಬೆಲೆ ಎಷ್ಟಿರಬಹುದು? 2,500 ಇಟ್ಟಿಗೆಯ ಬಿಲ್​ ನೋಡಿದ್ರೆ ನೀವು ದಂಗಾಗೋದು ಖಚಿತ! | Brick Cost

ಮೋಹನ್​ ಶೆಟ್ಟಿ

Brick Cost: ಸಾಮಾನ್ಯವಾಗಿ ಮನೆಕಟ್ಟಲು ಅಥವಾ ಬೃಹತ್​ ಎತ್ತರದ ಕಟ್ಟಡಗಳನ್ನು ನಿರ್ಮಿಸಲು ಬಹುಮುಖ್ಯ ಹಾಗೂ ಬೇಕೇ ಬೇಕಾದ ಅಗತ್ಯ ವಸ್ತುಗಳ ಪೈಕಿ ಇಟ್ಟಿಗೆ ಕೂಡ ಒಂದು. ಪಾಯ ತೋಡಿ, ಅಲ್ಲಿಂದ ಒಂದರ ಮೇಲೊಂದು ಇಟ್ಟಿಗೆ ಜೋಡಿಸಿದರೆ, ಆ ಕಟ್ಟಡದ ಭದ್ರತೆಗೆ ಮೊದಲ ಹಂತದ ಕಳೆ ಸಿಗುತ್ತದೆ. ಇಂತಹ ಇಟ್ಟಿಗೆಗಳ ಬೆಲೆ ಕೈಗೆಟುಕುವ ದರದಲ್ಲಿ ಇರುವುದೇನೋ ಓಕೆ. ಅದೇ ದುಬಾರಿಗಿಂತ ಬಲು ದುಬಾರಿ ಆಗೋದ್ರೆ ಗ್ರಾಹಕರ ಗತಿಯೇನು? ಇಲ್ಲೊಂದು ಗ್ರಾಮ ಪಂಚಾಯತಿ, 2,500 ಇಟ್ಟಿಗೆಯ ಖರೀದಿಗೆ ನೀಡಿರುವ ಬಿಲ್​ ಒಂದು ನೋಡುಗರನ್ನು ಭಾರೀ ಅಚ್ಚರಿಗೆ ದೂಡಿದೆ.

ಒಂದು ಇಟ್ಟಿಗೆ ಬೆಲೆ

ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಬುಧರ್ ಬ್ಲಾಕ್‌ನಲ್ಲಿರುವ ಭಾಟಿಯಾ ಗ್ರಾಮ ಪಂಚಾಯತಿ, ಕೇವಲ 2,500 ಇಟ್ಟಿಗೆಗೆ ಬರೋಬ್ಬರಿ 1.25 ಲಕ್ಷ ರೂ. ಬಿಲ್​ ನೀಡಿರುವುದು ಸದ್ಯ ಗ್ರಾಮಸ್ಥನನ್ನು ಅಕ್ಷರಶಃ ಕಂಗಾಲಾಗಿಸಿದೆ. ಈ ಬಿಲ್ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಕೂಡ ಆಗಿದೆ. ಈ ಮೊತ್ತದ ಪ್ರಕಾರ, ಒಂದು ಇಟ್ಟಿಗೆಗೆ ಪಂಚಾಯತ್‌ ಹಾಕಿರುವ ದರ 50 ರೂ. ಇದು ಸಾಮಾನ್ಯ ಬೆಲೆಗಿಂತ ಹತ್ತು ಪಟ್ಟು ಹೆಚ್ಚು. ಇಟ್ಟಿಗೆ ಖರೀದಿ ಬಿಲ್ ಪೆರಿಬಹರಾ ಗ್ರಾಮದ ಚೇತನ್ ಪ್ರಸಾದ್ ಕುಶ್ವಾಹ ಎಂಬುವವರ ಹೆಸರಿನಲ್ಲಿದೆ.

ಪಟೇರಾ ಟೋಲಾದಲ್ಲಿ ಅಂಗನವಾಡಿ ಕಟ್ಟಡದ ಗಡಿ ಗೋಡೆಯ ನಿರ್ಮಾಣಕ್ಕಾಗಿ ಈ ಬಿಲ್ ಕೊಡಲಾಗಿದೆ. ಬಿಲ್‌ನಲ್ಲಿ ಭಾಟಿಯಾ ಗ್ರಾಮದ ಸರಪಂಚ್ ಮತ್ತು ಕಾರ್ಯದರ್ಶಿಯ ಸಹಿಯೂ ಇದೆ. ಈ ರೀತಿ ಆಗಿರುವುದು ಇದೇ ಮೊದಲೇನಲ್ಲ. ಕೆಲವೇ ಕೆಲವು ವಾರಗಳ ಹಿಂದಷ್ಟೇ, ಎರಡು ಪುಟಗಳ ಫೋಟೋಕಾಪಿಗಾಗಿ 4,000 ರೂ. ಹಣವನ್ನು ಪಂಚಾಯತಿ ಪಡೆದಿತ್ತು. ಇದು ಕೂಡ ಭಾರೀ ಸುದ್ದಿಯಾಗಿತ್ತು. ಈಗ ಇಟ್ಟಿಗೆ ಬಿಲ್​ ತೀವ್ರ ಟೀಕೆಗೆ ಗುರಿಯಾಗಿದೆ.

ಇಟ್ಟಿಗೆಯ ಬಿಲ್​ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಶಹದೋಲ್ ಕಲೆಕ್ಟರ್ ಡಾ. ಕೇದಾರ್ ಸಿಂಗ್, "ಇಲ್ಲಿ ಏನೋ ತಪ್ಪಾಗಿರುವುದು ಸ್ಪಷ್ಟ. ಇಂತಹ ಬಿಲ್‌ಗಳು ನಿರ್ಲಕ್ಷ್ಯದಿಂದಲೋ ಅಥವಾ ಉದ್ದೇಶಪೂರ್ವಕ ವಂಚನೆಯಿಂದ ಉಂಟಾಗಿವೆಯೋ ಎಂಬುದನ್ನು ಸರಿಯಾಗಿ ಪರಿಶೀಲಿಸಲು ಆದೇಶ ನೀಡಿದ್ದೇನೆ. ಕ್ಲಸ್ಟರ್ ಮಟ್ಟದ ಅಧಿಕಾರಿಗಳಿಗೆ ಪ್ರತಿದಿನ 10ರಿಂದ 12 ಪಂಚಾಯತಿಗಳನ್ನು ಪರಿಶೀಲಿಸಲು ನಿರ್ದೇಶಿಸಿದ್ದೇವೆ" ಎಂದಿದ್ದಾರೆ,(ಏಜೆನ್ಸೀಸ್).