ನ್ಯೂಸ್

ಪೊಲೀಸರ ಬೇಕಾಬಿಟ್ಟಿ ವರ್ಗಾವಣೆಗೆ ಬ್ರೇಕ್

ಬೆಂಗಳೂರು: ಪೊಲೀಸ್ ಇಲಾಖೆಯ ಆಯಕಟ್ಟಿನ ಹುದ್ದೆಯಲ್ಲಿರುವ ಕಾರ್ಯನಿರ್ವಾಹಕೇತರ ವರ್ಗಾವಣೆ ಲಾಬಿಗೆ ಬ್ರೇಕ್ ಬೀಳುವ ನಿಟ್ಟಿನಲ್ಲಿ ಸರ್ಕಾರ ಮಾರ್ಗಸೂಚಿ ರೂಪಿಸಿದೆ. ಸಬ್ ಇನ್​ಸ್ಪೆಕ್ಟರ್ ಹುದ್ದೆಯಿಂದ ಇನ್​ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದರೆ 2 ವರ್ಷ ನಾನ್ ಎಕ್ಸಿಕ್ಯೂಟಿವ್ (ಕಾರ್ಯನಿರ್ವಾಹಕೇತರ) ಹುದ್ದೆಯಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯಗೊಳಿಸಿದೆ.

ಅಲ್ಲದೆ ಇಲಾಖೆ ತನಿಖಾ ಅಥವಾ ಎಸಿಬಿ ವಿಚಾರಣೆ ನಡೆಯಲ್ಲಿದ್ದಂಥವರನ್ನು ಎಕ್ಸಿಕ್ಯೂಟಿವ್ (ಕಾರ್ಯನಿರ್ವಾಹಕ) ಹುದ್ದೆಗೆ ವರ್ಗಾವಣೆಗೊಳಿಸದಂತೆ ನಿಯಮ ರೂಪಿಸಿದೆ. ಈ ಆದೇಶ ಜಾರಿಗೊಂಡ ಬಳಿಕ ಬಡ್ತಿ ಹೊಂದಿದವರಿಗೆ ಈ ಹೊಸ ನಿಬಂಧನೆಗಳು ಅನ್ವಯಿಸಲಿವೆ ಎಂದು ಆದೇಶದಲ್ಲಿದೆ. ಡಿವೈಎಸ್​ಪಿ (ಸಿವಿಲ್) ಹಾಗೂ ಇನ್​ಸ್ಪೆಕ್ಟರ್(ಸಿವಿಲ್) ವರ್ಗಾವಣೆಗೆ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ ಸೇವೆ ಸಲ್ಲಿಸಲು ಅರ್ಹತೆಯ ನಿಬಂಧನೆಗಳನ್ನು ವಿಧಿಸಲಾಗಿದೆ. ಪೊಲೀಸ್ ಇಲಾಖೆಯ ತನಿಖಾ ವಿಭಾಗಗಳಾದ ಸಿಐಡಿ, ಡಿಸಿಆರ್​ಇ, ಲೋಕಾಯುಕ್ತ, ಎಸಿಬಿ ಹಾಗೂ ರಾಜ್ಯ ಗುಪ್ತದಳದ ನಾನ್-ಎಕ್ಸಿಕ್ಯೂಟಿವ್ ಹುದ್ದೆಗಳಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ. ಪೊಲೀಸ್ ಉಪಾಧೀಕ್ಷಕರ ಹುದ್ದೆಗೆ ಮುಂಬಡ್ತಿ ಪಡೆದ ನಂತರ ಕನಿಷ್ಠ 2 ವರ್ಷಗಳವರೆಗೆ ಡಿವೈಎಸ್​ಪಿ ಆಗಿ ಕಾರ್ಯನಿರ್ವಾಹಕೇತರ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಇನ್​ಸ್ಪೆಕ್ಟರ್ ಹುದ್ದೆಗೆ ಮುಂಬಡ್ತಿ ಪಡೆದವರಿಗೂ ಇದೇ ಮಾರ್ಗಸೂಚಿ ಅನ್ವಯವಾಗಲಿದೆ.

ಕಮಿಷನರೇಟ್​ನಲ್ಲಿ ಐದು ವರ್ಷ

ರಾಜಕೀಯ ಪ್ರಭಾವ ಬಳಸಿ ಕಮಿಷನರೇಟ್​ನಲ್ಲೇ ಸುತ್ತುತ್ತಿದ್ದ ಅಧಿಕಾರಿಗಳಿಗೂ ಶಾಕ್ ಕೊಟ್ಟಿದೆ. ಬೆಂಗಳೂರು ನಗರ, ಮಂಗಳೂರು, ಮೈಸೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ಹಾಗೂ ಕಲಬುರಗಿ ನಗರ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಾಹಕ ಹುದ್ದೆಗಳಲ್ಲಿ 5 ವರ್ಷಗಳ ಸೇವೆ ಪೂರ್ಣಗೊಳಿಸಿದ ಅಧಿಕಾರಿಗಳನ್ನು ಆಯಾ ಕಮೀಷನರೇಟ್ ವ್ಯಾಪ್ತಿಯಿಂದ, ಇತರ ಘಟಕಗಳಿಗೆ ವರ್ಗಾವಣೆ ಮಾಡಬೇಕು. ಅಲ್ಲಿಯೂ 5 ವರ್ಷಗಳ ಕರ್ತವ್ಯ ಕಡ್ಡಾಯವಾಗಿ ನಿರ್ವಹಿಸಬೇಕು. ಬಳಿಕ ಕಮಿಷನರೇಟ್ ವ್ಯಾಪ್ತಿಯಲ್ಲಿ ಮತ್ತೆ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ.

ಪೊಲೀಸರಿಗೆ ಪಿಪಿಇ ನೀಡಿ

ಕಂಟೇನ್​ವೆುಂಟ್ ವಲಯ, ಚೆಕ್​ಪೋಸ್ಟ್ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗೆ ಪಿಪಿಇ ಕಿಟ್ ಒದಗಿಸಲು ಕ್ರಮಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಕಂಟೇನ್​ವೆುಂಟ್ ವಲಯ, ಚೆಕ್​ಪೋಸ್ಟ್ ಹಾಗೂ ಕೋವಿಡ್ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೊಲೀಸರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಈಗಾಗಲೇ ಪರೀಕ್ಷೆಗೆ ಒಳಪಡಿಸಿರುವ ಸಿಬ್ಬಂದಿ ವಿವರ ನೀಡಬೇಕು. ಪೊಲೀಸ್ ಸಿಬ್ಬಂದಿ ಕೋವಿಡ್ ಸೋಂಕಿನಿಂದ ಸತ್ತರೆ ಅವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ಯಾವುದೇ ಬಾಹ್ಯ ಆಘಾತಕಾರಿ ಘಟನೆಯಿಂದ ಸತ್ತರೆ ಅಗತ್ಯ ವಿಮಾ ಸೌಲಭ್ಯ ಒದಗಿಸಬೇಕು ಎಂದಿದ್ದಾರೆ.