ಮುಂಬೈ: ಭಾರತೀಯ ಷೇರುಪೇಟೆಯ ಮೂರು ದಿನಗಳ ಗೆಲುವಿನ ಓಟಕ್ಕೆ ಬುಧವಾರ ಬ್ರೇಕ್ ಬಿದ್ದಿತು. ಎಚ್‌ಡಿಎಫ್‌ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಟಿಸಿಎಸ್ ರೀತಿಯ ಪ್ರಮುಖ ಷೇರುಗಳ ಮಾರಾಟದಿಂದಾಗಿ ಬುಧವಾರ ಬೆಂಚ್‌ಮಾರ್ಕ್ ಸೂಚ್ಯಂಕ 117 ಅಂಕಗಳ ಕುಸಿತ ಕಂಡಿತು.
30-ಷೇರುಗಳ ಬಿಎಸ್‌ಇ ಸೂಚ್ಯಂಕ 117.58 ಅಂಕಗಳು ಅಥವಾ ಶೇಕಡಾ 0.16 ರಷ್ಟು ಕುಸಿದು 72,987.03 ಕ್ಕೆ ಸ್ಥಿರವಾಯಿತು. ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 17.30 ಅಂಕಗಳು ಅಥವಾ 0.08 ರಷ್ಟು ಕುಸಿದು 22,200.55 ಕ್ಕೆ ತಲುಪಿತು.
ಪ್ರಮುಖ ಷೇರುಗಳಾದ ಟಾಟಾ ಮೋಟಾರ್ಸ್, ಏಷ್ಯನ್ ಪೇಂಟ್ಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಜೆಎಸ್‌ಡಬ್ಲ್ಯೂ ಸ್ಟೀಲ್, ಹಿಂದೂಸ್ತಾನ್ ಯೂನಿಲಿವರ್, ನೆಸ್ಲೆ ಮತ್ತು ಟೈಟಾನ್ ಸ್ಟಾಕ್ಗಳ ಬೆಲೆಗಳು ಕುಸಿತ ಕಂಡವು. ಇದಕ್ಕೆ ವ್ಯತಿರಿಕ್ತವಾಗಿ, ಭಾರ್ತಿ ಏರ್‌ಟೆಲ್, ಪವರ್ ಗ್ರಿಡ್, ಎನ್‌ಟಿಪಿಸಿ, ಮಹೀಂದ್ರಾ ಮತ್ತು ಮಹೀಂದ್ರಾ, ಲಾರ್ಸನ್ ಆ್ಯಂಡ್ ಟೂಬ್ರೊ, ಎಚ್‌ಸಿಎಲ್ ಟೆಕ್ನಾಲಜೀಸ್ ಷೇರುಗಳು ಲಾಭ ಗಳಿಸಿದವು.
ವಿಶಾಲ ಮಾರುಕಟ್ಟೆಯಲ್ಲಿ, ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇಕಡಾ 0.96 ರಷ್ಟು ಹಾಗೂ ಮಿಡ್‌ಕ್ಯಾಪ್ ಸೂಚ್ಯಂಕವು ಶೇಕಡಾ 0.60 ರಷ್ಟು ಏರಿಕೆ ಕಂಡಿದ್ದು ವಿಶೇಷವಾಗಿತ್ತು.
ವಲಯವಾರು ಸೂಚ್ಯಂಕಗಳ ಪೈಕಿ ಎಫ್‌ಎಂಸಿಜಿ ಶೇ. 0.75ರಷ್ಟು ಕುಸಿದಿದೆ. ಆಟೋ (ಶೇ 0.31), ಬ್ಯಾಂಕೆಕ್ಸ್ (ಶೇ 0.17) ಮತ್ತು ಹಣಕಾಸು ಸೇವೆಗಳು (ಶೇ 0.07) ಸಹ ಕುಸಿತ ಕಂಡಿವೆ. ಬಂಡವಾಳ ಸರಕುಗಳು ಶೇಕಡಾ 2.13ರಷ್ಟು, ಯುಟಿಲಿಟೀಸ್ (1.27 ಶೇಕಡಾ), ರಿಯಾಲ್ಟಿ (1.11 ಶೇಕಡಾ), ಸೇವೆಗಳು (1.08 ಶೇಕಡಾ) ಮತ್ತು ಇಂಧನ (0.95 ಶೇಕಡಾ) ವಲಯಗಳು ಏರಿಕೆ ದಾಖಲಿಸಿದವು.
"ಮೂರು ದಿನಗಳ ಚೇತರಿಕೆಯ ನಂತರ, ಮಾರುಕಟ್ಟೆಗಳು ವಿರಾಮವನ್ನು ತೆಗೆದುಕೊಂಡವು ಮತ್ತು ಬಹುತೇಕ ಬದಲಾಗದೆ ಮುಚ್ಚಲ್ಪಟ್ಟವು. ಆರಂಭದಲ್ಲಿ, ಏರಿಕೆ ಕಂಡುಬಂದಿತು, ಆದರೆ, ಕೆಲವು ಪ್ರಮುಖ ಷೇರುಗಳ ಒತ್ತಡವು ನಿಫ್ಟಿಯನ್ನು ಕೆಳಕ್ಕೆ ತಳ್ಳಿತು" ಎಂದು ರೆಲಿಗೇರ್ ಬ್ರೋಕಿಂಗ್ ಲಿಮಿಟೆಡ್ನ ಅಜಿತ್ ಮಿಶ್ರಾ ಹೇಳಿದ್ದಾರೆ.
ಏಷ್ಯಾದ ಮಾರುಕಟ್ಟೆಗಳ ಪೈಕಿ, ಟೋಕಿಯೊ ಲಾಭ ಕಂಡರೆ, ಶಾಂಘೈ ಕೆಳಮಟ್ಟಕ್ಕೆ ಕೊನೆಗೊಂಡಿತು. ದಕ್ಷಿಣ ಕೊರಿಯಾ ಮತ್ತು ಹಾಂಗ್ಕಾಂಗ್ನ ಮಾರುಕಟ್ಟೆಗಳು ರಜೆಗಾಗಿ ಮುಚ್ಚಲ್ಪಟ್ಟಿದ್ವವು. ಐರೋಪ್ಯ ಮಾರುಕಟ್ಟೆಗಳು ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಸಿದವು. ಅಮೆರಿಕದ ವಾಲ್ ಸ್ಟ್ರೀಟ್ ಮಂಗಳವಾರ ಲಾಭದೊಂದಿಗೆ ಕೊನೆಗೊಂಡಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಮಂಗಳವಾರ 4,065.52 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ಷೇರು ವಿನಿಮಯ ಕೇಂದ್ರ ತಿಳಿಸಿದೆ.