ನ್ಯೂಸ್

ಗುಂಪು ಸಭೆಗೆ ಬ್ರೇಕ್ ಹಾಕಿ; ಸಿಎಂ ಸಿದ್ದರಾಮಯ್ಯಗೆ ಹೈಕಮಾಂಡ್ ಸೂಚನೆ

Webdesk - Manjunatha B

ಬೆಂಗಳೂರು: ಮುಡಾ ನಿವೇಶನ ಹಗರಣ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ ಬೆನ್ನಲ್ಲೇ ಕಾಂಗ್ರೆಸ್ ಪಡಸಾಲೆಯಲ್ಲಿ ನಡೆದಿರುವ ಚರ್ಚೆ, ಗುಂಪು ಸಭೆಗಳು, ಬಹಿರಂಗ ಹೇಳಿಕೆ ಕೇಳಿಕೆಗಳ ಬಗ್ಗೆ ಹೈಕಮಾಂಡ್ ತೀವ್ರ ಅಸಮಾಧಾನಗೊಂಡಿದೆ. ಇನ್ಮುಂದೆ ಇಂತಹ ಬೆಳವಣಿಗೆಗಳಿಗೆ ಆಸ್ಪದ ಕೊಡದಂತೆ ಕ್ರಮ ಕೈಗೊಳ್ಳುವುದಾಗಿ ಗುಡುಗಿದೆ.

ರಾಜ್ಯದ ಬೆಳವಣಿಗೆಗಳ ಕುರಿತು ವರದಿ ಪಡೆದುಕೊಂಡಿದ್ದ ಹೈಕಮಾಂಡ್, ಸರ್ಕಾರದ ಇಮೇಜ್​ಗಾಗುತ್ತಿರುವ ಧಕ್ಕೆ ಬಗ್ಗೆ ಕಳವಳ ಹೊರಹಾಕಿದೆ. ಹೀಗಾಗಿ ಮುಂದೆ ಇಂತಹ ಬೆಳವಣಿಗೆಗಳು ನಡೆಯಕೂಡದೆಂದು ಸ್ಪಷ್ಟವಾಗಿ ಎಚ್ಚರಿಸಿದೆ. ದಲಿತ ಸಿಎಂ ವಿಚಾರ ರಾಜ್ಯ ರಾಜಕಾರಣಕ್ಕೆ ಹೊಸ ಆಯಾಮ ನೀಡಿತು. ಅದಕ್ಕೆ ಪೂರಕವಾಗಿ ಒಂದಷ್ಟು ಸಭೆಗಳು, ನಾಯಕರ ಭೇಟಿ, ಅಭಿಪ್ರಾಯ ವ್ಯಕ್ತವಾದವು. ಸಹಜವಾಗಿ ಇದು ಸಾರ್ವಜನಿಕ ವಲಯದಲ್ಲಿ ಊಹಾಪೋಹ ಹರಡಲು ಕಾರಣವಾಯಿತು. ಇನ್ನೊಂದೆಡೆ ದಲಿತ ಸಿಎಂ ವಿಷಯ ಕಾಂಗ್ರೆಸ್​ಗೆ ದಿನದಿನಕ್ಕೂ ಸಂಕಟ ಹೆಚ್ಚಿಸಿದೆ.

ಇದೇ ಕಾರಣಕ್ಕೆ ರಾಜ್ಯದ ಕೆಲ ನಾಯಕರು ಹೈಕಮಾಂಡ್ ಗಮನಕ್ಕೆ ತಂದು, ಬ್ರೇಕ್ ಹಾಕುವಂತೆ ಕೋರಿದ್ದರೆಂದು ಮೂಲಗಳು ತಿಳಿಸಿವೆ. ಅಂತಿಮವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ರಾಜ್ಯ ನಾಯಕರಿಗೆ ಕರೆ ಮಾಡಿ, ಇನ್ನು ನಾಯಕತ್ವ ವಿಚಾರವಾಗಿ ಸಭೆ ಸೇರುವುದು, ಪ್ರತಿಕ್ರಿಯೆ ನೀಡುವುದು, ಊಹಾಪೋಹ ಸೃಷ್ಟಿಯಾಗುವಂತೆ ಹೇಳಿಕೆ ನೀಡಬಾರದು. ಈಗಾಗಲೇ ಮಾತನಾಡುತ್ತಿರುವವರನ್ನು ಕರೆದು ಎಚ್ಚರಿಸಬೇಕು, ಮಾತು ಮುಂದುವರಿಸಿದರೆ ನಾವು ಮುಲಾಜಿಲ್ಲದೇ ಕ್ರಮಕೈಗೊಳ್ಳುತ್ತೇವೆಂದು ಸ್ಪಷ್ಟವಾಗಿ ತಿಳಿಸಿದ್ದಾರೆನ್ನಲಾಗಿದೆ.

ಸಿಎಂ ಮನೆಗೆ ಡಿಸಿಎಂ ದೌಡು: ಮಹತ್ವದ ಬೆಳವಣಿಗೆಯಲ್ಲಿ ಬುಧವಾರ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯ ಮನೆಗೆ ಆಗಮಿಸಿ ರಾಜಕೀಯ ಬೆಳವಣಿಗೆ ಕುರಿತು ಚರ್ಚೆ ನಡೆಸಿದರು. ಹೈಕಮಾಂಡ್ ನಿರ್ದೇಶನಗಳ ಕುರಿತು ಈ ವೇಳೆ ವಿಚಾರ ವಿನಿಮಯ ನಡೆಯಿತೆನ್ನಲಾಗಿದೆ. ನಿಗಮ ಮಂಡಳಿ ನೇಮಕ ಬಗ್ಗೆಯು ಚರ್ಚೆಯಾಗಿದೆ. ದಸರಾ ಮುಗಿಯುತ್ತಿದ್ದಂತೆ ನೇಮಕಾತಿ ನಡೆಯುವ ಸಾಧ್ಯತೆಗಳಿವೆ.

ಕಾಂಗ್ರೆಸ್ ಒಳಗಿನ ಕಂಪನ

1) ಸಚಿವ ಪರಮೇಶ್ವರ, ಸತೀಶ್ ಜಾರಕಿಹೊಳಿ, ಮಹದೇವಪ್ಪ ನಿರಂತರವಾಗಿ ಸಭೆ ನಡೆಸುತ್ತಿರುವುದು ಕಾಂಗ್ರೆಸ್ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿತ್ತು

2) ಸತೀಶ್ ಜಾರಕಿಹೊಳಿ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿಬಂದರೆ, ಡಿಸಿಎಂ ಡಿ.ಕೆ.ಶಿವಕುಮಾರ್ ಪರಮೇಶ್ವರ್ ಭೇಟಿ ಮಾಡಿದ್ದರು

3) ದಲಿತ ಸಿಎಂ ವಿಚಾರ ಮುನ್ನೆಲೆಗೆ ತರುವ ಮೂಲಕ ಸಿಎಂ ಸ್ಥಾನದ ಮೇಲೆ ನಿರೀಕ್ಷೆ ಇಟ್ಟುಕೊಂಡಿರುವವರಿಗೆ ತಳಮಳ ಹೆಚ್ಚಿಸಲಾಗಿತ್ತೇ?

4) ರಹಸ್ಯ ಸಭೆಗಳ ಮೂಲಕ ಗುಂಪುಗಾರಿಕೆಗೆ ಅವಕಾಶ ನೀಡಲಾಗುತ್ತಿದೆ ಎಂದು ಹೈಕಮಾಂಡ್​ಗೆ ದೂರು ಹೋಗಿತ್ತು