ನ್ಯೂಸ್

ಹವಾಮಾನ ವೈಪರೀತ್ಯಕ್ಕೆ ಬ್ರೇಕ್: ಕೇಂದ್ರಕ್ಕೆ ಕ್ರಿಯಾ ಯೋಜನೆ ಸಲ್ಲಿಕೆ, ಇಲಾಖಾವಾರು ಕ್ರಮದ ವಿವರಣೆ

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಹವಾಮಾನ ಬದಲಾವಣೆಯ ಒತ್ತಡದಿಂದ ಕೃಷಿ, ಮೀನುಗಾರಿಕೆ, ಆರೋಗ್ಯ ಸೇರಿ ವಿವಿಧ ವಲಯಗಳ ಮೇಲೆ ಆಗುವ ದುಷ್ಪರಿಣಾಮಗಳನ್ನು ನಿಯಂತ್ರಿಸುವ ಸಲುವಾಗಿ ರೂಪಿಸಿರುವ ಕ್ರಿಯಾ ಯೋಜನೆ ಇದೀಗ ಕೇಂದ್ರ ಸರ್ಕಾರದ ಅಂಗಳಕ್ಕೆ ಹೋಗಿದೆ.

2030ರ ವೇಳೆಗೆ ಹವಾಮಾನ ಬದಲಾವಣೆಯಿಂದಾಗುವ ಪರಿಣಾಮಗಳನ್ನು ಸಾಧ್ಯವಾದಷ್ಟು ತಡೆಗಟ್ಟುವ ಸಲುವಾಗಿ ವಿಶ್ವಸಂಸ್ಥೆಯ ಸೂಚನೆಯಂತೆ ಕೇಂದ್ರ ಸರ್ಕಾರ ಎಲ್ಲ ರಾಜ್ಯಗಳಿಂದ ಕ್ರಿಯಾ ಯೋಜನೆಯನ್ನು ತರಿಸಿಕೊಂಡಿದೆ. ಕೇಂದ್ರದಿಂದ ಅನುಮೋದನೆ ಸಿಕ್ಕ ಕೂಡಲೇ ನಿಯಂತ್ರಣ ಕ್ರಮಗಳನ್ನು ಆರಂಭಿಸ ಲು ಸರ್ಕಾರ ತೀರ್ವನಿಸಿದೆ. ವಿವಿಧ ವಲಯಗಳ ತಜ್ಞರಿಂದ ಪಡೆದ ಅಧ್ಯಯನ ವರದಿಗಳನ್ನು ಆಧರಿಸಿ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಕ್ರಿಯಾ ಯೋಜನೆ ಸಿದ್ಧಪಡಿಸಿದೆ. ತಜ್ಞರು ಪರಿಣಾಮಗಳು ಹಾಗೂ ನಿಯಂತ್ರಣದ ಕ್ರಮಗಳ ಬಗ್ಗೆ ತಮ್ಮ ವರದಿಗಳಲ್ಲಿ ವಿವರವಾಗಿಯೇ ಸಲ್ಲಿಸಿದ್ದರು.

ಪರಿಣಾಮಗಳು ಭೀಕರ: ಪರಿಸರದಲ್ಲಿ ಸಮತೋಲನ ಕಾಪಾಡಿ ಉಷ್ಣಾಂಶ ಹೆಚ್ಚಾಗದಂತೆ ನಿಯಂತ್ರಣ ಮಾಡದಿದ್ದರೆ ಪರಿಣಾಮಗಳು ಇಡೀ ಮನುಕುಲದ ಮೇಲೆ ಬೀಳುತ್ತವೆ. ಒಟ್ಟಾರೆ ಮನುಷ್ಯನ ಜೀವನದ ಮೇಲೆ ಪರಿಣಾಮವಾಗುತ್ತದೆ. ರಾಜ್ಯದಲ್ಲಿಯೂ ಯಾವ ಯಾವ ವಲಯದಲ್ಲಿ ಯಾವ ಮಟ್ಟಿನ ಪರಿಣಾಮಗಳಾಗುತ್ತವೆ ಎಂಬುದು ಸಾಕಷ್ಟು ಚರ್ಚೆಯಾಗಿದೆ. ಆದರೆ ಕ್ರಿಯಾ ಯೋಜನೆಗಾಗಿ ಸಲ್ಲಿಸಿರುವ ಅಧ್ಯಯನ ವರದಿಗಳು ಭೀಕರತೆಯನ್ನು ಇನ್ನಷ್ಟು ವಿಸ್ಮೃತವಾಗಿಯೇ ತಿಳಿಸಿವೆ.

ಬಡತನ ಹೆಚ್ಚಳ, ಜಿಡಿಪಿ ನಷ್ಟ: ಯುನೈಟೆಡ್ ಕಿಂಗ್​ಡಮ್ ಸಂಸ್ಥೆಯೊಂದರ ಅಧ್ಯಯನದ ಪ್ರಕಾರ, 2040ರ ವೇಳೆಗೆ ಬಾರತದಲ್ಲಿ ಹೊಸದಾಗಿ 5 ಕೋಟಿ ಜನ ಬಡತನಕ್ಕೆ ನೂಕಲ್ಪಡುತ್ತಾರೆ. ಅದನ್ನು ತಡೆಗಟ್ಟಲು ಅಗತ್ಯ ಕ್ರಮಗಳನ್ನು ಸರ್ಕಾರ ಕೈಗೊಳ್ಳಬೇಕಿದೆ. ಹವಾಮಾನದಲ್ಲಿನ ಬದಲಾವಣೆಯಿಂದ ಆಗುವ ಪರಿಣಾಮಗಳಿಂದ ನಮ್ಮ ಜಿಡಿಪಿಯ ಶೇ.3.5 ನಷ್ಟವಾಗುತ್ತದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಜಿಡಿಪಿಯ ಶೇ.20 ವೆಚ್ಚ ಮಾಡುತ್ತಿವೆ. ರಾಜ್ಯ ಸರ್ಕಾರ ಸಹ ಹೆಚ್ಚಿನ ಮೊತ್ತವನ್ನು ಬೇರೆ ಬೇರೆ ಇಲಾಖೆಗಳ ಮೂಲಕ ಖರ್ಚು ಮಾಡಲು ಸಿದ್ಧವಿರುವುದಾಗಿ ಕ್ರಿಯಾ ಯೋಜನೆಯಲ್ಲಿ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಜಿಲ್ಲೆಗಳಲ್ಲಿ ತರಬೇತಿ: ಕೇಂದ್ರ ಸರ್ಕಾರದಿಂದ ಕ್ರಿಯಾ ಯೋಜನೆಗೆ ಅನುಮತಿ ಸಿಕ್ಕ ಕೂಡಲೇ ರಾಜ್ಯದಲ್ಲಿ ಎಂಪ್ರಿ ಅಧಿಕಾರಿಗಳು ಹಾಗೂ ತಜ್ಞರು ಪ್ರತಿ ಜಿಲ್ಲೆಗೆ ತೆರಳಿ ಪ್ರಾತ್ಯಕ್ಷಿಕೆ ನೀಡಿ ಸರ್ಕಾರಿ ನೌಕರರು, ಸಂಘ-ಸಂಸ್ಥೆಗಳು, ಸಾರ್ವಜನಿಕರಲ್ಲಿ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ಎದುರಿಸುವ ಬಗ್ಗೆ ಸಜ್ಜುಗೊಳಿಸಲಿದ್ದಾರೆ.

ಮಲೇಷ್ಯಾದಲ್ಲಿ ಪರಾಗ ಸ್ಪರ್ಶ ಅಧ್ಯಯನ: ಮಲೇಷ್ಯಾದಲ್ಲಿ ದುರೈನ್ ಎಂಬ ಹಣ್ಣು ಉತ್ಪಾದನೆ ಕಡಿಮೆಯಾಗಿರುವ ಬಗ್ಗೆ ಅಲ್ಲಿನ ಸರ್ಕಾರ ಅಧ್ಯಯನ ನಡೆಸಿದೆ. ಚಿಟ್ಟೆ, ಬಾವಲಿಯಂತಹ ಪರಾಗಸ್ಪರ್ಶ ನಡೆಸುವ ಕೀಟಗಳ ಸಂಖ್ಯೆ ಕಡಿಮೆಯಾಗಿರುವುದು ಕಾರಣವೆಂಬುದು ತಿಳಿದುಬಂದಿದೆ. ಅಲ್ಲಿನ ಕಾರ್ಖಾನೆಗಳಿಂದ ಬಾವುಲಿಗಳ ಸಂತತಿ ಕ್ಷೀಣಿಸುತ್ತಿದೆ.

ವೈಪರೀತ್ಯ ಪರಿಣಾಮಗಳೇನು?

  • ಮಳೆಯ ಮಾರುತಗಳ ವ್ಯತ್ಯಾಸದಿಂದಾಗಿ ಬರ ಮತ್ತು ಪ್ರವಾಹ ಎರಡೂ ಹೆಚ್ಚುತ್ತದೆ.
  • ಕೃಷಿ ಭೂಮಿ ಕಡಿಮೆಯಾಗುತ್ತದೆ.
  • ಕೃಷಿಯಲ್ಲಿ ಉತ್ಪಾದಕತೆ ಕುಸಿಯುತ್ತದೆ.
  • ಆರೋಗ್ಯದ ಮೇಲೆ ಪರಿಣಾಮವಾಗಿ ಶೀತ, ಕಫ, ಜ್ವರ ಹಾಗೂ ಪ್ರಾಣಿಗಳಿಂದ ಬರುವ ಕಾಯಿಲೆಗಳು ಜಾಸ್ತಿ.
  • ಮೇಲ್ಮೈ ನೀರಿನ ಜತೆಗೆ ಅಂತರ್ಜಲವೂ ಶೇ.25ರಿಂದ 30 ಕಡಿಮೆಯಾಗಿ ಕುಡಿಯುವ ನೀರಿಗೆ ಹಾಹಾಕಾರ.
  • ಚಿಟ್ಟೆ, ಕೀಟಗಳು ಕಡಿಮೆಯಾಗಿ ಪರಾಗಸ್ಪರ್ಶ ಇಲ್ಲದಂತಾಗಿ ಹಣ್ಣುಗಳ ಉತ್ಪಾದನೆ ಕಮ್ಮಿಯಾಗುತ್ತದೆ.
  • ಮೀನುಗಾರರಿಗೆ ತೊಂದರೆ.
  • ಕಾಡ್ಗಿಚ್ಚು ಸಹ ಹೆಚ್ಚಾಗುವ ಸಾಧ್ಯತೆ.
  • ಬಡತನ ರೇಖೆಗಿಂತ ಕೆಳಗಿನವರ ಸಂಖ್ಯೆಯಲ್ಲಿ ಹೆಚ್ಚಳ.
  • ಕರಾವಳಿ ಭಾಗದಲ್ಲಿ ಕಡಲ ಕೊರೆತ ಅಧಿಕವಾಗುತ್ತದೆ
  • ರಸ್ತೆ, ಸೇತುವೆ, ವಿದ್ಯುತ್, ಅಣೆಕಟ್ಟೆಯಂತಹ ಮೂಲಸೌಕರ್ಯಗಳಿಗೆ ಹಾನಿ.
  • ಬಹುತೇಕ ನಗರಗಳಿಗೆ ಪ್ರವಾಹದ ಭೀತಿ.
  • ಮೇವಿನ ಉತ್ಪಾದನೆ ಕಡಿಮೆಯಾಗುತ್ತದೆ.

ಕ್ರಿಯಾ ಯೋಜನೆಯಲ್ಲಿ ಏನಿದೆ?

  • ಕಲ್ಲಿದ್ದಲು ಬಳಕೆ ಕಡಿಮೆ ಮಾಡುವುದು.
  • ನವೀಕೃತ ಇಂಧನ ಬಳಕೆ ಶೇ.40 ಹೆಚ್ಚಳ.
  • ವರ್ಷಕ್ಕೆ 60-80 ಸಾವಿರ ಹೆಕ್ಟೇರ್ ಅರಣ್ಯವೃದ್ಧಿ.
  • ಕೃಷಿಯಲ್ಲಿ ನೀರು ಬಳಕೆ ಕಡಿಮೆ ಮಾಡುವುದು.
  • ಕಮ್ಮಿ ನೀರು ಬಳಕೆಯ ಬೆಳೆ ಬೆಳೆಯಲು ಆದ್ಯತೆ.
  • ಕೃಷಿ ಹೊಂಡ, ಚೆಕ್ ಡ್ಯಾಂಗಳ ಸಂಖ್ಯೆ ಹೆಚ್ಚಳ.
  • ಜಾನುವಾರುಗಳ ಸಗಣಿಯಿಂದ ಮಿಥೇನ್ ಕಡಿಮೆ ಮಾಡಲು ದೇಶಿ ತಳಿಗಳಿಗೆ ಆದ್ಯತೆ.
  • ದೇಶಿ ತಳಿಗಳಲ್ಲಿ ಕಡಿಮೆಯಾಗುವ ಹಾಲಿನ ಉತ್ಪಾದನೆ ಪರ್ಯಾಯ ಮೂಲಗಳ ಹುಡುಕಾಟ. ಅದಕ್ಕೆ ತಕ್ಕ ಮೇವಿನ ಉತ್ಪಾದನೆ.
  • ಸೋಲಾರ್ ವಿದ್ಯುತ್ ಉತ್ಪಾದನಾ ಘಟಕಗಳನ್ನು ಹೆಚ್ಚಿಸುವುದು.
  • ಗ್ರೀನ್​ಹೌಸ್ ಗ್ಯಾಸ್​ಗಳಾದ ಹೈಡ್ರೋಕಾರ್ಬನ್, ಕಾರ್ಬನ್ ಡೈ ಆಕೆ್ಸ ೖಡ್ ಇತರ ಅನಿಲಗಳನ್ನು ಶೇ.35 ಕಡಿಮೆ ಮಾಡುವುದು.
  • ವಿದ್ಯುತ್ ಚಾಲಿತ ವಾಹನಗಳ ಜತೆಗೆ ಸಮೂಹ ಸಾರಿಗೆ ಬಳಕೆಯನ್ನೂ ಜಾಸ್ತಿ ಮಾಡುವುದು.
  • ವಾಹನಗಳಲ್ಲಿ ಹೊಗೆ ಮಾಲಿನ್ಯ ಕಡಿಮೆ ಮಾಡುವುದು.
  • ಕೈಗಾರಿಕೆಗಳಲ್ಲಿಯೂ ಹೊಗೆ ಮಾಲಿನ್ಯ ಕಡಿಮೆ ಮಾಡಲು ಸೋಲಾರ್ ವಿದ್ಯುತ್ ಬಳಕೆಗೆ ಆದ್ಯತೆ.
  • ನೀರಿನ ನಷ್ಟ ಕಡಿಮೆ ಮಾಡುವುದಕ್ಕೆ ಹೆಚ್ಚಿನ ಒತ್ತು.
  • ವಾಹನಗಳ ಸಂಖ್ಯೆಗೆ ನಿಯಂತ್ರಣ.
  • ಎಸಿಗಳ ಬಳಕೆ ಕಡಿಮೆ ಮಾಡುವಂತೆ ಜನರಲ್ಲಿ ಅರಿವು ಮೂಡಿಸುವುದು.

ಸಚಿವರಿಗೆ ಆಸಕ್ತಿ ಇಲ್ಲ

ಪರಿಸರದ ಮೇಲಾಗುವ ಹಾನಿಯನ್ನು ಕಡಿಮೆ ಮಾಡುವುದು ಪರಿಸರ ಸಚಿವಾಲಯದ ಜವಾಬ್ದಾರಿ. ಆದರೆ ರಾಜ್ಯದಲ್ಲಿ ಪರಿಸರ ಸಚಿವರಿಗೆ ಇಲಾಖೆ ಬಗ್ಗೆ ಆಸಕ್ತಿಯೇ ಇಲ್ಲದಂತಾಗಿದೆ. ಯಡಿಯೂರಪ್ಪ ಸಂಪುಟದಲ್ಲಿ ಸಿ.ಪಿ.ಯೋಗೇಶ್ವರ್ ಪರಿಸರ ಸಚಿವರಾಗಿದ್ದರು. ಅವರು ಪ್ರವಾಸೋದ್ಯಮಕ್ಕೆ ಆಸಕ್ತಿ ತೋರಿಸಿದಷ್ಟು ಪರಿಸರದ ಬಗ್ಗೆ ತೋರಿಸಿಲಿಲ್ಲ. ಬಸವರಾಜ ಬೊಮ್ಮಾಯಿ ಅವರು ಆನಂದ ಸಿಂಗ್​ಗೆ ಈ ಖಾತೆ ನೀಡಿದ್ದಾರೆ. ಆದರೆ ಅವರಿಗೆ ಇಲಾಖೆ ಬಗ್ಗೆ ಆಸಕ್ತಿ ಇಲ್ಲ. ಕ್ರಿಯಾ ಯೋಜನೆಗೆ ಕೇಂದ್ರ ಒಪ್ಪಿಗೆ ನೀಡಿದ ಕೂಡಲೇ ಜಾರಿಗೆ ಇಲಾಖೆಗಳ ನಡುವೆ ಸೇತುವೆಯಂತೆ ಕೆಲಸ ಮಾಡಬೇಕಾದ ಪರಿಸರ ಇಲಾಖೆ ನಾವಿಕನಿಲ್ಲದ ದೋಣಿಯಂತಾಗಿದೆ.