ನ್ಯೂಸ್

ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೆ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್​ಗೆ ಬದಲಾಗಿದೆ : CM Siddaramaiah

ಮಂಡ್ಯ: ನಾನು ಬಡತನ ರೇಖೆಗಿಂತ ಕೆಳಗಿಲ್ಲ. ಹೀಗಾಗಿ, ಅನ್ನಭಾಗ್ಯ ನನಗೆ ಸಿಗಬಾರದು, ನನ್ನಂಥವರಿಗೆ ಅನ್ನಭಾಗ್ಯ ಸಿಗಬಾರದು ಎನ್ನುವ ಉದ್ದೇಶಕ್ಕಷ್ಟೆ ಅನರ್ಹರ ಬಿಪಿಎಲ್ ಕಾರ್ಡ್ ಎಪಿಎಲ್​ಗೆ ಬದಲಾಗಿದೆ ಅಷ್ಟೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಇಲ್ಲಿನ ಕೆ.ಆರ್.ಪೇಟೆಯಲ್ಲಿ ಕಸಬಾ ಪ್ರಾಥಮಿಕ‌ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡವನ್ನು ಬುಧವಾರ(ಡಿ.04) ಉದ್ಘಾಟಿಸಿ ಮಾತನಾಡಿದರು.

GDP ಯಲ್ಲಿ ಇಡೀ ದೇಶದಲ್ಲಿ ನಾವೇ ನಂಬರ್ ಒನ್. ಇದಕ್ಕೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ರೈತರ ಶ್ರಮಕ್ಕೆ ತಕ್ಕ ಫಲ ಸಿಗಬೇಕು. ನಮ್ಮ ಉತ್ಪಾದನೆಗೆ ನಾವೇ ಬೆಲೆ ನಿಗಧಿ ಮಾಡುವಂತಾಗಬೇಕು ಎಂದ ವಅರು, ಕೈಗಾರಿಕೋದ್ಯಮಿಗಳು ಅವರು ತಯಾರಿಸಿದ ವಸ್ತುಗೆ ಅವರೇ ಬೆಲೆ ನಿಗಧಿ ಮಾಡ್ತಾರೆ. ಇದೇ ಅಧಿಕಾರ ನಮ್ಮ‌ ರೈತರಿಗೂ ಸಿಗಬೇಕು.

ನಾವು ಒಕ್ಕೂಟ ವ್ಯವಸ್ಥೆಯಲ್ಲಿದ್ದೇವೆ. ಒಕ್ಕೂಟ ವ್ಯವಸ್ಥೆ ಯಶಸ್ವಿ ಆಗಬೇಕಾದರೆ ದೇಶದ 140 ಕೋಟಿ ಜನರಿಗೂ ಸಕಲ ಸಹಕಾರ ಕೊಡಬೇಕು. ನಮ್ಮ ರೈತ ಸಮುದಾಯಕ್ಕೆ ಬೆಲೆ ಫಿಕ್ಸ್ ಮಾಡುವ ಅಧಿಕಾರ ಬರಬೇಕು. ಆಗ ತಾರತಮ್ಯ ನಿವಾರಣೆ ಆಗುತ್ತದೆ ಎಂದು ಹೇಳಿದರು.

ಈ ದೇಶಕ್ಕೆ ಸಿಕ್ಕ ರಾಜಕೀಯ ಸ್ವಾತಂತ್ರ್ಯ ಯಶಸ್ವಿ ಆಗಬೇಕಾದರೆ, ಪ್ರತಿಯೊಬ್ಬರಿಗೂ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ್ಯ ಸಿಗಬೇಕು ಎನ್ನುವ ಅಂಬೇಡ್ಕರ್ ಅವರ ಮಾತನ್ನು ಉಲ್ಲೇಖಿಸಿ ಈ ಕಾರಣಕ್ಕೇ ನಾವು ಅನ್ನ ಭಾಗ್ಯ ಮತ್ತು ಆರ್ಥಿಕ ಶಕ್ತಿ ಕೊಡುವ ಐದೈದು ಗ್ಯಾರಂಟಿಗಳನ್ನು ಜಾರಿ ಮಾಡಿದ್ದೇವೆ ಎಂದರು.

ದಿನಕ್ಕೆ 5 ಕೋಟಿ ರೂ. ಹಾಲು ಉತ್ಪಾದಕರಿಗೆ ಕೊಡ್ತಾ ಇದ್ದೀವಿ

ರಾಜ್ಯದಲ್ಲಿ ಪ್ರತೀ ಲೀಟರ್ ಹಾಲಿಗೆ 5 ರೂ. ಸಹಾಯ ಧನ ಜಾರಿ ಮಾಡಿದ್ದು ನಾವು. ದಿನಕ್ಕೆ ರಾಜ್ಯದಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ಅಂದರೆ ಪ್ರತೀ ದಿನ 5 ಕೋಟಿ ರೂ. ಹಾಲು ಉತ್ಪಾದಕರಿಗೆ ಕೊಡುತ್ತಿದ್ದೇವೆ ಎಂದು ಲೆಕ್ಕ ವಿವರಿಸಿದರು.

ನಾವು ಒಂದು ಕಡೆ ರೈತರಿಗೆ ಶಕ್ತಿ ತುಂಬುತ್ತಿದ್ದೇವೆ. ಮತ್ತೊಂದು ಕಡೆ ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಎಸಗುತ್ತಿದೆ. ರಾಜ್ಯದ ರೈತರಿಗೆ ನಬಾರ್ಡ್ ನಿಂದ ಕೊಡುವ ಸಬ್ಸಿಡಿ ಸಾಲದ ಪ್ರಮಾಣವನ್ನು ಶೇ58 ರಷ್ಟು ಕಡಿತಗೊಳಿಸಿದೆ. ಬರೀ ಭಾಷಣ ಮಾಡಿದರೆ ರೈತರ ಬದುಕು ಉದ್ದಾರ ಆಗಲ್ಲ ಎಂದು ಬಿಜೆಪಿಯ ಭಾಷಣದ ನೀತಿಯನ್ನು ಟೀಕಿಸಿದರು‌.