Girlfriend : ಆಕೆಗೆ ಕೇವಲ 16 ವರ್ಷ, ಆತನಿಗೆ 20 ವರ್ಷ... ಇಬ್ಬರೂ ಕಳೆದ ಆರು ತಿಂಗಳಿನಿಂದ ಗಾಢವಾಗಿ ಪ್ರೀತಿಸುತ್ತಿದ್ದರು. ಈ ಮಧ್ಯೆ, ಗೆಳತಿ ಕೆಲವು ದಿನಗಳಿಂದ ಬೇರೊಬ್ಬರ ಜೊತೆ ಚಾಟ್ ಮಾಡುತ್ತಿದ್ದಾಳೆಂಬ ಅನುಮಾನದಿಂದ ಇಬ್ಬರ ನಡುವೆ ಜಗಳ ಶುರುವಾಯಿತು. ಇದೇ ಸಂಶಯದಲ್ಲಿ ಚಾಕುವಿನಿಂದ ಗೆಳತಿ ಮತ್ತು ಆಕೆಯ ತಾಯಿಯನ್ನು ಬರ್ಬರವಾಗಿ ಕೊಲೆ ಮಾಡಿದ ಬಾಯ್ಫ್ರೆಂಡ್ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾನೆ. ಆಂಧ್ರ ಪ್ರದೇಶದ ರಾಜಮಹೇಂದ್ರವರಂನಲ್ಲಿ ಭಾನುವಾರ (ಮಾರ್ಚ್ 23) ಮುಂಜಾನೆ ಈ ಘಟನೆ ನಡೆದಿದೆ.
ಪೊಲೀಸರು ಮತ್ತು ಸ್ಥಳೀಯರ ಹೇಳಿಕೆ ಪ್ರಕಾರ, ಎಲೂರಿನ ಎಎಸ್ಆರ್ ಕ್ರೀಡಾಂಗಣ ಪ್ರದೇಶದ ಮೊಹಮ್ಮದ್ ಸಲ್ಮಾ (38) ಮತ್ತು ಅವರ ಮಗಳು ಮೊಹಮ್ಮದ್ ಸಾನಿಯಾ ಅಲಿಯಾಸ್ ಸನಾ (16) ಕಳೆದ ಮೂರು ತಿಂಗಳಿನಿಂದ ರಾಜಮಹೇಂದ್ರವರಂನ ಹುಕುಂಪೇಟೆಯಲ್ಲಿ ವಾಸಿಸುತ್ತಿದ್ದರು. ಸಲ್ಮಾ, ಜಾಂಪೆಟ್ ಪ್ರದೇಶದ ಮೊಹಮ್ಮದ್ ಅಬ್ದುಲ್ ಮಜೀದ್ ಅವರ ಎರಡನೇ ಪತ್ನಿ. ತನ್ನ ಪತಿ ಮೂರು ವರ್ಷಗಳ ಹಿಂದೆ ನಿಧನರಾದರು. ಮೊದಲ ಪತ್ನಿಗೆ ಮೂವರು ಗಂಡು ಮಕ್ಕಳಿದ್ದಾರೆ. ಅವರು ಜಾಂಪೆಟ್‌ನಲ್ಲಿ ವಾಸಿಸುತ್ತಿದ್ದಾರೆ. ಮೊಹಮ್ಮದ್ ಸಾನಿಯಾ ಕಾರ್ಯಕ್ರಮಗಳಿಗೆ ನಿರೂಪಕಿಯಾಗಿ ಕೆಲಸ ಮಾಡುತ್ತಾರೆ.
ಸಲ್ಮಾ ಮತ್ತು ಸಾನಿಯಾ ಜೊತೆಗೆ, ಮಜೀದ್ ಅವರ ಮೊದಲ ಪತ್ನಿಯ ಕಿರಿಯ ಮಗ ಉಮರ್ ಅವರ ಮನೆಯಲ್ಲಿ ವಾಸಿಸುತ್ತಿದ್ದ. ಆರು ತಿಂಗಳ ಹಿಂದೆ, ಕಾಕಿನಾಡ ಜಿಲ್ಲೆಯ ಪಿಥಾಪುರಂನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಹೋಗುತ್ತಿದ್ದಾಗ, ಶ್ರೀಕಾಕುಳಂ ಜಿಲ್ಲೆಯ ನಿವಾಸಿ ಮತ್ತು ಪ್ರಸ್ತುತ ಹೈದರಾಬಾದ್‌ನಲ್ಲಿ ವಾಸಿಸುತ್ತಿರುವ ಶಿವಕುಮಾರ್ ಎಂಬಾತ ಅಲ್ಲಿಗೆ ಲೈಟ್‌ಬಾಯ್ ಆಗಿ ಬಂದನು. ಆ ಸಮಯದಲ್ಲಿ ಇಬ್ಬರ ನಡುವೆ ಬೆಳೆದ ಪರಿಚಯ ಪ್ರೀತಿಗೆ ತಿರುಗಿತು.
ಈ ಹಿನ್ನೆಲೆಯಲ್ಲಿ ಒಂದು ವಾರದ ಹಿಂದೆ, ಶಿವಕುಮಾರ್ ಹೈದರಾಬಾದ್‌ನಿಂದ ಸಾನಿಯಾ ಮನೆಗೆ ಬಂದಿದ್ದ. ಆ ಸಮಯದಲ್ಲಿ ಸಾನಿಯಾ, ಯಾರೊಂದಿಗೋ ಫೋನ್‌ನಲ್ಲಿ ಚಾಟ್ ಮಾಡುತ್ತಿರುವುದನ್ನು ಆತ ಗಮನಿಸಿದ. ಇದರಿಂದ ಇಬ್ಬರ ನಡುವೆ ಜಗಳ ಆರಂಭವಾಯಿತು. ಶನಿವಾರ ರಾತ್ರಿ ಇಬ್ಬರೂ ಜಗಳವಾಡುತ್ತಿದ್ದಾಗ, ಮೊದಲ ಪತ್ನಿಯ ಪುತ್ರರಾದ ಮೊಹಮ್ಮದ್ ಅಲಿ ಮತ್ತು ಉಮರ್, ಶಿವಕುಮಾರ್ ಜೊತೆ ಮಾತನಾಡಿ, ಸಮಾಧಾನ ಮಾಡಿ ಹೊರಟುಹೋದರು. ಆದರೆ, ಉಮರ್ ಭಾನುವಾರ ಮಧ್ಯಾಹ್ನ 1ಗಂಟೆಗೆ ಮನೆಗೆ ಮರಳಿದ. ಈ ವೇಳೆ ಬಾಗಿಲು ಹಾಕಿತ್ತು. ಕಿಟಕಿಯಿಂದ ಒಳಗಡೆ ನೋಡಿದಾಗ ಸಲ್ಮಾ ಮತ್ತು ಸಾನಿಯಾ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ತಕ್ಷಣ 100ಕ್ಕೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ. ಬೊಮ್ಮೂರು ಇನ್ಸ್‌ಪೆಕ್ಟರ್ ಕಾಶಿ ವಿಶ್ವನಾಥ್ ಮತ್ತು ಅವರ ಸಿಬ್ಬಂದಿ ಬೀಗಗಳನ್ನು ಹೊಡೆದು, ಮನೆಯ ಒಳಗೆ ಪರಿಶೀಲಿಸಿದರು. ಈ ವೇಳೆ ಕುತ್ತಿಗೆಗೆ ತೀವ್ರವಾದ ಇರಿತದ ಗಾಯಗಳಾಗಿ ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿಯಿತು.
ಜಿಲ್ಲಾ ಎಸ್ಪಿ ಡಿ. ನರಸಿಂಹ ಕಿಶೋರ್, ಕಾನೂನು ಮತ್ತು ಸುವ್ಯವಸ್ಥೆಯ ಎಎಸ್ಪಿ ಎ.ವಿ. ಸುಬ್ಬರಾಜು, ಡಿಎಸ್ಪಿಗಳಾದ ಬಿ. ವಿದ್ಯಾ ಮತ್ತು ಶ್ರೀಕಾಂತ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಎಸ್ಪಿ ಕಿಶೋರ್ ಅವರು ಉಮರ್ ಅವರ ವಿವರಗಳನ್ನು ಪಡೆದುಕೊಂಡಿದ್ದಾರೆ. ಮೊಹಮ್ಮದ್ ಅಲಿ ಅವರ ದೂರಿನ ಆಧಾರದ ಮೇಲೆ ಇನ್ಸ್‌ಪೆಕ್ಟರ್ ಕಾಶಿ ವಿಶ್ವನಾಥ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿ ಶಿವಕುಮಾರ್‌ನನ್ನು ಕೊವ್ವೂರು ಗ್ರಾಮೀಣ ಸಬ್ ಇನ್ಸ್‌ಪೆಕ್ಟರ್ ಶ್ರೀಹರಿ ಅವರು ಭಾನುವಾರ ಮಧ್ಯಾಹ್ನ ಕೊವ್ವೂರು ಪ್ರದೇಶದಲ್ಲಿ ಬಂಧಿಸಿದ್ದಾರೆ. (ಏಜೆನ್ಸೀಸ್)