ನ್ಯೂಸ್

ಯೂಟ್ಯೂಬ್​ನಿಂದ ಹ್ಯಾಕಿಂಗ್​ ಕಲಿತು ಅಪ್ಪನಿಗೇ 10 ಕೋಟಿ ರೂಪಾಯಿ ಬೇಡಿಕೆಯಿಟ್ಟ 11ರ ಪೋರ!

ಲಖನೌ: 10-11 ವರ್ಷಕ್ಕೆ ಮಕ್ಕಳು ಏನು ಮಾಡುತ್ತಾರೆ? ಆಟ ಪಾಠ ಎನ್ನುತ್ತಾ ಸಮಯ ಕಳೆಯುತ್ತಾರೆ. ಆದರೆ ಇಲ್ಲೊಬ್ಬ ಬಾಲಕ ತನ್ನ 11ನೇ ವರ್ಷಕ್ಕೇ ಮಾಡಿದ ಕೆಲಸ ಕೇಳಿದರೆ ನೀವು ಗಾಬರಿಯಾಗುತ್ತೀರ.

ಉತ್ತರ ಪ್ರದೇಶದ ಗಾಜಿಯಾಬಾದ್​ನಲ್ಲಿ ಇಂತದ್ದೊಂದು ವಿಚಿತ್ರ ಘಟನೆ ನಡೆದಿದೆ. ಅಲ್ಲಿನ ವಸುಂಧರನಗರದಲ್ಲಿದ್ದ ವ್ಯಕ್ತಿಯೊಬ್ಬನ ಇಮೇಲ್​ ಐಡಿಯನ್ನು ಜನವರಿ 1ರಂದು ಯಾರೋ ಹ್ಯಾಕ್​ ಮಾಡಿದ್ದಾರೆ. ಅದಾದ ನಂತರ ಬೇರೆ ಬೇರೆ ಇ ಮೇಲ್​ ಐಡಿಗಳಿಂದ ಆತನಿಗೆ ಬೆದರಿಕೆಯ ಇ ಮೇಲ್​ಗಳು ಬಂದಿವೆ. 10 ಕೋಟಿ ಕೊಡು, ಇಲ್ಲದಿದ್ದರೆ ನಿನ್ನ ನಗ್ನ ಚಿತ್ರಗಳನ್ನು ವೈರಲ್​ ಮಾಡುತ್ತೇವೆ. ನಿನ್ನನ್ನೂ ನಿನ್ನ ಕುಟುಂಬವನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಸಲಾಗಿದೆ.

ಬೆದರಿಕೆಗೆ ಹೆದರಿದ ವ್ಯಕ್ತಿ ಸೀದಾ ಪೊಲೀಸ್​ ಠಾಣೆಗೆ ತೆರಳಿದ್ದು, ದೂರು ದಾಖಲಿಸಿದ್ದಾನೆ. ಇ ಮೇಲ್​ ಐಡಿ ಹ್ಯಾಕ್​ ಆಗಿದ್ದು, ಹ್ಯಾಕರ್​ಗಳು ನನ್ನ ಪ್ರತಿದಿನದ ಕೆಲಸದ ಮೇಲೂ ಕಣ್ಣಿಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೈಬರ್​ ಕ್ರೈಂ ತಂಡದ ಸಹಾಯದಿಂದ ಯಾವ ಐಪಿ ಅಡ್ರೆಸ್​ನಿಂದ ಮೇಲ್​ ಬಂದಿದೆ ಎನ್ನುವುದು ಪತ್ತೆ ಹಚ್ಚಲಾಗಿದೆ. ದೂರು ನೀಡಿದ್ದ ವ್ಯಕ್ತಿಯ ಮನೆಯ ಐಪಿ ಅಡ್ರೆಸ್​ನಿಂದಲೇ ಮೇಲ್​ ಹೋಗಿರುವುದು ಗೊತ್ತಾಗಿದೆ. ದೂರುದಾರನ ಮನೆಗೆ ಬಂದು ಆತನ 11 ವರ್ಷದ ಮಗನನ್ನು ವಿಚಾರಣೆ ನಡೆಸಿದಾಗ ನಿಜಾಂಶ ಹೊರಬಿದ್ದಿದೆ.

ಅಂದ ಹಾಗೆ ಆ ಬಾಲಕ ಕೆಲ ದಿನಗಳ ಹಿಂದೆ ಆನ್​ಲೈನ್​ ಕ್ಲಾಸ್​ನಲ್ಲಿಯೂ ಕೆಲ ಸೈಬರ್​ ಕ್ರೈಂ ಮಾಡಿದ್ದಾಗಿ ಹೇಳಲಾಗಿದೆ. ಅದಾದ ನಂತರ ಯೂಟ್ಯೂಬ್​ನಲ್ಲಿ ಹ್ಯಾಕಿಂಗ್​ ಮಾಡುವುದರ ಬಗ್ಗೆ ತಿಳಿದುಕೊಂಡ ಆತ ಅದನ್ನು ತನ್ನ ಅಪ್ಪನ ಮೇಲೇ ಪ್ರಯೋಗ ಮಾಡಿದ್ದಾನೆ. (ಏಜೆನ್ಸೀಸ್​)