ನ್ಯೂಸ್

ಶಾಲೆಯ ರೇಸ್​​ನಲ್ಲಿ ಓಡುತ್ತಿದ್ದ ಬಾಲಕ ಹೃದಯಸ್ತಂಭನದಿಂದ ಕುಸಿದು ಬಿದ್ದು ಸಾವು

ಅಮೆರಿಕಾ:  ಇತ್ತೀಚಿನ ದಿನಗಳಲ್ಲಿ ಯುವಕರು, ಮಧ್ಯವಯಸ್ಕರು, ಮಕ್ಕಳು ಕೂಡ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದಾರೆ. ಅಮೆರಿಕದ ಫ್ಲೋರಿಡಾದಲ್ಲಿ 14 ವರ್ಷದ ಬಾಲಕನೊಬ್ಬ ಶಾಲೆಯ ರೇಸ್​​ನಲ್ಲಿ ಭಾಗವಹಿಸಿದ್ದ ವೇಳೆ ಹೃದಯಸ್ತಂಭನದಿಂದ ಸಾವನ್ನಪ್ಪಿದ್ದಾನೆ.

ನಾಕ್ಸ್ ಮ್ಯಾಕ್ ವೆನ್  ಮೃತ ಬಾಲಕ. ಶಾಲೆ ಆಯೋಜಿಸಿದ್ದ 5ಕೆ ರೇಸ್ ನಲ್ಲಿ ಭಾಗವಹಿಸಿದ್ದ ನಾಕ್ಸ್ ಮ್ಯಾಕ್ ವೆನ್  ಹೃದಯಸ್ತಂಭನದಿಂದ ಕುಸಿದು ಬಿದ್ದಿದ್ದಾನೆ. ತಕ್ಷಣ ಶಾಲೆಗೆ ಬಂದ ತುರ್ತು ತಂಡ ಬಾಲಕನನ್ನು ರಕ್ಷಿಸಲು ಯತ್ನಿಸಿದರಾದರೂ ಫಲಕಾರಿಯಾಗಲಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಬಾಲಕ ಮೃತಪಟ್ಟಿದ್ದಾನೆ.

ಡೇವಿಸ್ ವೆಸ್ಟರ್ನ್ ಹೈಸ್ಕೂಲ್‌ನಲ್ಲಿ ಓದುತ್ತಿದ್ದ ಬಾಲಕ ಜೂನಿಯರ್ ರಿಸರ್ವ್ ಆಫೀಸರ್ಸ್ ಟ್ರೈನಿಂಗ್ ಕಾರ್ಪ್ಸ್ ಡ್ರಿಲ್‌ನಲ್ಲಿ ಭಾಗವಹಿಸುವಾಗ ಪ್ರಾಣ ಕಳೆದುಕೊಂಡಿದ್ದಾನೆ. ಬಾಲಕನ ಸಾವಿಗೆ ಶಾಲಾ ಮುಖ್ಯಸ್ಥರು ಸಂತಾಪ ಸೂಚಿಸಿದ್ದಾರೆ.  ಬಾಲಕನ ತಾಯಿ ಜೂಲಿ ಕಳೆದ ವರ್ಷ ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದು, ಇದೀಗ ಮಗ ಹೃದಯಾಘಾತದಿಂದ ಸಾವನ್ನಪ್ಪಿರುವುದು ಎಲ್ಲರ ಹೃದಯವನ್ನು ಕದಡುತ್ತಿದೆ.

ಕೆಲವು ತಿಂಗಳ ಹಿಂದೆ, ಅಮೆರಿಕದಲ್ಲಿ 17 ವರ್ಷದ ಬಾಸ್ಕೆಟ್‌ಬಾಲ್ ಆಟಗಾರನೊಬ್ಬ ತನ್ನ ತಂಡದೊಂದಿಗೆ ವರ್ಕ್‌ಔಟ್ ಸೆಷನ್‌ನಲ್ಲಿ ಭಾಗವಹಿಸುತ್ತಿದ್ದಾಗ ಕುಸಿದು ಬಿದ್ದ. ಮತ್ತು ಜಿಮ್‌ಗಳಲ್ಲಿ ವ್ಯಾಯಾಮ ಮಾಡುವಾಗ ಅನೇಕ ಜನರು ಹೃದಯಾಘಾತದಿಂದ ಸಾವನ್ನಪ್ಪಿದ ಅನೇಕ ಘಟನೆಗಳಿವೆ.