ನವದೆಹಲಿ: ಜಗತ್ತಿನಾದ್ಯಂತ ಕರೊನಾ ವೈರಸ್ ಭೀತಿ ಹೆಚ್ಚಿದೆ. ದೇಶದಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳ ಕಾಣುತ್ತಿದ್ದು, ವೈರಸ್ ಹರಡುವಿಕೆಯನ್ನು ತಡೆಗಟ್ಟುವ ಸಲುವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ವಿದೇಶಗಳಿಂದ ದೇಶಕ್ಕೆ ಬಂದಿರುವ ಜನರಿಗೆ ಕಡ್ಡಾಯವಾಗಿ 14 ದಿನಗಳ ಕಾಲ ಮನೆಯಿಂದ ಹೊರಬರದಿರಿ ಎಂದು ತಿಳಿಸಲಾಗಿದ್ದು, ಇದೀಗ ಪ್ರಸಿದ್ಧ ಬಾಕ್ಸರ್ ಮತ್ತು ರಾಜ್ಯ ಸಭಾ ಸದಸ್ಯೆ ಮೇರಿ ಕೋಮ್ ಈ ನಿಯಮವನ್ನು ಮುರಿದಿರುವ ವಿಚಾರ ಬೆಳಕಿಗೆ ಬಂದಿದೆ.
ಜೋರ್ಡನ್ನ ಅಮ್ಮನ್ನಲ್ಲಿ ಏಷ್ಯಾ ಒಲಂಪಿಕ್ ಕ್ವಾಲಿಪೈರ್ ಪಂದ್ಯದಲ್ಲಿ ಭಾಗವಹಿಸಿರುವ ಮೇರಿ ಕೋಮ್ ಮಾರ್ಚ್ 13ರಂದು ಭಾರತಕ್ಕೆ ಮರಳಿದ್ದಾರೆ. ಅಂದಿನಿಂದ 14 ದಿನಗಳ ಕಾಲ ಕಡ್ಡಾಯವಾಗಿ ಮನೆಯಲ್ಲಿಯೇ ಇರುವಂತೆ ಆಕೆಗೆ ತಿಳಿಸಲಾಗಿತ್ತಾದರೂ ಅದನ್ನು ಮೀರಿ ಆಕೆ ರಾಷ್ಟ್ರಪತಿ ಭವನಕ್ಕೆ ಬಂದಿದ್ದಾರೆ.
ಮಾರ್ಚ್ 18ರಂದು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಬ್ರೇಕ್ಫಾಸ್ಟ್ ಪಾರ್ಟಿ ನಡೆಸಿದ್ದು ಅದರಲ್ಲಿ ಮೇರಿ ಕೋಮ್ ಪಾಲ್ಗೊಂಡಿದ್ದಾರೆ. ರಾಷ್ಟ್ರಪತಿಗಳ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಬ್ರೇಕ್ಫಾಸ್ಟ್ ಪಾರ್ಟಿಯ ಫೋಟೋ ಹಾಕಲಾಗಿದ್ದು ಅದರಲ್ಲಿ ಮೇರಿ ಕೋಮ್ ಕಾಣಿಸಿಕೊಂಡಿದ್ದಾರೆ. ತಾವು ರಾಷ್ಟ್ರಪತಿ ಭವನಕ್ಕೆ ತೆರಳಿದ್ದಾಗಿ ಆಕೆ ಒಪ್ಪಿಕೊಂಡಿದ್ದಾರೆ.
ರಾಷ್ಟ್ರಪತಿಗಳ ಬ್ರೇಕ್ಫಾಸ್ಟ್ ಪಾರ್ಟಿಯಲ್ಲಿ ಕರೊನಾ ವೈರಸ್ ಸೋಂಕಿತೆ ಕನ್ನಿಕಾ ಕಪೂರ್ರನ್ನು ಭೇಟಿ ಮಾಡಿ ಬಂದಿದ್ದ ಬಿಜೆಪಿ ನಾಯಕ ದುಷ್ಯಂತ್ ಸಿಂಗ್ ಕೂಡ ಭಾಗವಹಿಸಿದ್ದರು. ಸೋಂಕಿತೆಯೊಂದಿಗೆ ಸಂಪರ್ಕ ಮಾಡಿ ಬಂದಿರುವವರೊಬ್ಬರು ತಮ್ಮ ಕಾರ್ಯಕ್ರಮದಲ್ಲಿದ್ದ ಕಾರಣ ರಾಷ್ಟ್ರಪತಿಗಳು ವೈರಸ್ ತಪಾಸಣೆ ಮಾಡಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)