ರಾಯ್ಪುರ್: ಕರೊನಾ ವೈರಸ್ ಎಂಬ ಸಾಂಕ್ರಮಿಕ ಮಹಾಮಾರಿ ಇಡೀ ಜಗತ್ತನ್ನೇ ಆವರಿಸಿ ಮೃತ್ಯು ಕೇಕೆ ಹಾಕುತ್ತಿದೆ. ಇಂತಹ ಸಂದರ್ಭದಲ್ಲೂ ಧೈರ್ಯಗೆಡದ ಛತ್ತೀಸ್ಗಢದ ದಂಪತಿ ಜನಿಸಿದ ಅವಳಿ ಮಕ್ಕಳಿಗೆ 'ಕರೊನಾ' ಮತ್ತು 'ಕೋವಿಡ್' ಎಂದು ನಾಮಕರಣ ಮಾಡಿ ವಿಭಿನ್ನತೆ ಮೆರೆದಿದ್ದಾರೆ.
ಈ ಎರಡು ಪದ ಇಂದು ಇಡೀ ಜಗತ್ತನೇ ನಡುಗಿಸುತ್ತಿದೆ. ಜನರನ್ನು ಸೋಂಕಿಗೆ ದೂಡುತ್ತಾ ಮೃತ್ಯುಕೂಪಕ್ಕೆ ಸೆಳೆದುಕೊಳ್ಳುತ್ತಿರುವ ಕರೊನಾ ಅಥವಾ ಕೋವಿಡ್ ಹೆಸರನ್ನು ರಾಯ್ಪುರ್ ದಂಪತಿ ವಿಜಯದ ಸಂಕೇತವಾಗಿ ತಮ್ಮ ಮಕ್ಕಳಿಗೆ ಇಟ್ಟಿದ್ದಾರೆ. ಜಗತ್ತು ಆರೋಗ್ಯ ಬಿಕ್ಕಟ್ಟಿನಲ್ಲಿರುವ ಸಂದರ್ಭದಲ್ಲೂ ಅವಳಿ ಮಕ್ಕಳು ಜನಿಸಿರುವುದು ದಂಪತಿಗೆ ವಿಜಯದ ಸಂಕೇತವಾಗಿದೆ. ದಂಪತಿಗೆ ಒಂದು ಗಂಡು(ಕೋವಿಡ್) ಮತ್ತು ಹೆಣ್ಣು(ಕರೊನಾ) ಮಗು ಜನಿಸಿದೆ.
ಮಾರ್ಚ್ 26-27ರ ನಡುರಾತ್ರಿ ರಾಯ್ಪುರ್ ಸರ್ಕಾರಿ ಆಸ್ಪತ್ರೆಯಲ್ಲಿ ಅವಳಿ ಮಕ್ಕಳು ಜನಿಸಿದ್ದಾರೆ. ಕರೊನಾದ ಕರಾಳತೆ ಮತ್ತು ಅದನ್ನು ತಡೆಗಟ್ಟಲು ಹೇರಲಾಗಿದ್ದ ಲಾಕ್ಡೌನ್ ಅನ್ನು ಜಯಿಸಿ, ಯಶಸ್ವಿಯಾಗಿ ಮಕ್ಕಳಿಗೆ ಜನ್ಮ ನೀಡಿದ ನೆನಪು ಸದಾ ಮನಸ್ಸಿನಲ್ಲಿ ಉಳಿಯಲಿ ಎಂದು ಹೆಸರಿಟ್ಟಿರುವುದಾಗಿ ದಂಪತಿ ತಿಳಿಸಿದ್ದಾರೆ. ಅಲ್ಲದೆ, ಮುಂದಿನ ದಿನಗಳಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ, ಮರುನಾಮಕರಣ ಮಾಡುವ ಸಾಧ್ಯತೆಯೂ ಇದೆ ಎಂದಿದ್ದಾರೆ.
ಕರೊನಾ ವೈರಸ್ ನಿಜವಾಗಿಯೂ ಅಪಾಯಕಾರಿಯಾಗಿದೆ. ಆದರೆ, ಸಾಕಷ್ಟು ಮಂದಿ ನೈರ್ಮಲ್ಯತೆ, ಆರೋಗ್ಯ ಮತ್ತು ಉತ್ತಮ ಆಹಾರ ಪದ್ಧತಿ ಬಗ್ಗೆ ಚಿಂತಿಸುವಂತೆ ಮಾಡಿದೆ. ಮಕ್ಕಳ ಜನನಕ್ಕೂ ಮುಂದೆ ನನ್ನ ಪತಿ ಸಾಕಷ್ಟು ಕಷ್ಟಗಳನ್ನು ಅನುಭವಿಸಿದರು. ಹೀಗಾಗಿ ಈ ದಿನ ನೆನಪಿನಲ್ಲಿರಲಿ ಎಂಬ ಉದ್ದೇಶದಿಂದ ಹೆಸರನ್ನು ಇಡಲಾಗಿದೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಕೂಡ ಮಕ್ಕಳನ್ನು ಕೋವಿಡ್ ಮತ್ತು ಕರೊನಾ ಎಂದು ಕರೆಯಲು ಆರಂಭಿಸಿದರು. ಕೊನೆಯದಾಗಿ ಇದೇ ಹೆಸರನ್ನಿಡಲು ನಿರ್ಧರಿಸಿದೆವು ಎಂದು ದಂಪತಿ ಹೇಳಿದರು. (ಏಜೆನ್ಸೀಸ್)