ನ್ಯೂಸ್

ಬೋನಿ ಕಪೂರ್​ ಕಡೆಯಿಂದ ಬ್ರೇಕಿಂಗ್​ ನ್ಯೂಸ್​!

ಇತ್ತೀಚೆಗಷ್ಟೇ ಬಾಲಿವುಡ್​ನ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಮನೆಯ ಮೂವರು ಕೆಲಸದವರಿಗೆ ಕರೊನಾ ಪಾಸಿಟಿವ್​ ಪತ್ತೆಯಾಗಿತ್ತು. ಅದಾದ ಬಳಿಕ ಅಧಿಕೃತ ಪ್ರಕಟಣೆ ಹೊರಡಿಸಿದ್ದ ಬೋನಿ ಕಪೂರ್​, ಮನೆ ಮತ್ತು ಮನೆಯಲ್ಲಿರುವವರ ಬಗ್ಗೆಯೂ ಹೇಳಿಕೊಂಡಿದ್ದರು. ತಮ್ಮಿಬ್ಬರು ಪುತ್ರಿಯರ ಆರೋಗ್ಯದ ಬಗ್ಗೆಯೂ ಮಾಹಿತಿ ನೀಡಿದ್ದರು. ಇದೀಗ ಮತ್ತೊಂದು ಸುದ್ದಿಯನ್ನು ನೀಡಿದ್ದಾರೆ ಬೋನಿ ಕಪೂರ್​. ಅದೇನೆಂದರೆ, ಮೇ 22ಕ್ಕೆ ಪಾಸಿಟಿವ್​ ಎಂದು ಆಸ್ಪತ್ರೆಗೆ ದಾಖಲಾಗಿದ್ದ ಅವರ ಮನೆಯ ಮೂವರು ಕೆಲಸಗಾರರ ಕರೊನಾ ಪರೀಕ್ಷೆ ನೆಗೆಟಿವ್​ ಬಂದಿದ್ದು, ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಅದನ್ನು ಜಾಲತಾಣದಲ್ಲಿಯೂ ಹಂಚಿಕೊಂಡಿದ್ದಾರೆ.

‘ಈ ಸುದ್ದಿಯನ್ನು ಹಂಚಿಕೊಳ್ಳಲು ಖುಷಿ ಎನಿಸುತ್ತಿದೆ. ನಾನು ಮತ್ತು ನನ್ನ ಇಬ್ಬರು ಮಕ್ಕಳ ಕೋವಿಡ್​ ಪರೀಕ್ಷೆ ಮತ್ತೆ ನೆಗೆಟಿವ್​ ಬಂದಿದೆ. ಮನೆಯ ಮೂವರು ಕೆಲಸಗಾರರ ವರದಿ ಪಾಸಿಟಿವ್​ ಬಂದಿತ್ತು. ಇದೀಗ ಅವರೂ ಗುಣಮುಖರಾಗಿದ್ದು, ಅವರ ವರದಿಯೂ ನೆಗೆಟಿವ್ ಬಂದಿದೆ. ನಮ್ಮ 14 ದಿನಗಳ ಕ್ವಾರಂಟೈನ್​ ಅವಧಿ ಸಹ ಮುಗಿದಿದೆ’ ಎಂದು ಖುಷಿ ಹಂಚಿಕೊಂಡಿದ್ದಾರೆ.

ಮನೆಯಲ್ಲಿ ಮೇಲಿಂದ ಮೇಲೆ ಮೂರು ಕರೊನಾ ಪ್ರಕರಣ ಕಾಣಿಸಿಕೊಂಡಿದ್ದರಿಂದ ಸೋಂಕು ನಿಯಂತ್ರಣಕ್ಕೆ ಮತ್ತು ಅದರ ಹರಡುವಿಕೆಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಎಲ್ಲ ರೀತಿಯ ಮುಂಜಾಗೃತಾ ಕ್ರಮಗಳನ್ನು ಬೋನಿ ಕಪೂರ್​ ತೆಗೆದುಕೊಂಡಿದ್ದರು. ಈಗ ಆ ಕ್ರಮವನ್ನು ಕರೊನಾ ಹಾವಳಿ ನಿಲ್ಲುವವರೆಗೂ ಮುಂದುವರಿಸುವುದಾಗಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)