ನ್ಯೂಸ್

ಪಾಕಿಸ್ತಾನದ ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ: 14 ಬಲಿ, 35 ಜನರಿಗೆ ಗಂಭೀರ ಗಾಯ​| Bomb blast

Bomb blast: ಪಾಕಿಸ್ತಾನದ ನೈಋತ್ಯ ಪ್ರಾಂತ್ಯದ ಬಲೂಚಿಸ್ತಾನದ ಕ್ವೆಟ್ಟಾದಲ್ಲಿ ಬಲೂಚಿಸ್ತಾನ್ ರಾಷ್ಟ್ರೀಯ ಪಕ್ಷದ (ಬಿಎನ್‌ಪಿ) ರ‍್ಯಾಲಿಯ ಬಳಿ ಸಂಭವಿಸಿದ ಬಾಂಬ್​ ಸ್ಫೋಟದಲ್ಲಿ ಕನಿಷ್ಠ 14 ಮಂದಿ ಬಲಿಯಾಗಿದ್ದು,35 ಜನ ಗಾಯಗೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ರ‍್ಯಾಲಿಯು ಬಲೂಚ್ ನಾಯಕ ಸರ್ದಾರ್ ಅತ್ತೌಲ್ಲಾ ಮೆಂಗಲ್ 4ನೇ ಪುಣ್ಯತಿಥಿಯ ಸ್ಮರಣಾರ್ಥ ಕಾರ್ಯಕ್ರಮ ಮುಗಿದ ಕೆಲವೇ ಕ್ಷಣಗಳಲ್ಲಿ, ಮಂಗಳವಾರ ಸಂಜೆ ಶಹವಾನಿ ಕ್ರೀಡಾಂಗಣದ ಬಳಿ ಸ್ಫೋಟ ಸಂಭವಿಸಿದೆ.

ಅಲ್ಲದೆ ಈಬಗ್ಗೆ ಮಾಹಿತಿ ನೀಡಿರುವ ಬಲೂಚಿಸ್ತಾನದ ಆರೋಗ್ಯ ಸಚಿವ ಬಖ್ತ್ ಮುಹಮ್ಮದ್ ಕಾಕರ್ ಸಾವುನೋವುಗಳನ್ನು ದೃಢಪಡಿಸಿದ್ದು, ಗಾಯಗೊಂಡವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ದಾಳಿಯ ಬಗ್ಗೆ ಪೊಲೀಸರು ಹೇಳಿದ್ದೇನೆ?

ಬಿಎನ್‌ಪಿ ಮುಖ್ಯಸ್ಥ ಅಖ್ತರ್ ಮೆಂಗಲ್​ರ ಬೆಂಗಾವಲು ಪಡೆಯನ್ನು ಗುರಿಯಾಗಿಸಿಕೊಂಡು ದಾಳಿ ಮಾಡಲಾಗಿದೆ. ಆದರೆ, ಮೆಂಗಲ್ ಯಾವುದೇ ಗಾಯಗಳಿಲ್ಲದೆ ಜೀವ ಉಳಿಸಿಕೊಂಡಿದ್ದಾರೆ. ಅಲ್ಲದೆ, ದಾಳಿಯ ತುರ್ತು ಪ್ರತಿಕ್ರಿಯೆ ನೀಡಿ, ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ.

ಈ ಬಾಂಬ್​ ದಾಳಿಯಲ್ಲಿ ಪಕ್ಷದ 13 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಬಿಎನ್‌ಪಿ ವಕ್ತಾರ ಸಾಜಿದ್ ತರೀನ್ ತಿಳಿಸಿದ್ದಾರೆ. ಅಖ್ತರ್ ಮೆಂಗಲ್ ವಾಹನ ಹಾದುಹೋದ ಕ್ಷಣದಲ್ಲೇ, ದೊಡ್ಡ ಸ್ಫೋಟ ಸಂಭವಿಸಿದೆ ಎಂದು ತರೀನ್ ಹೇಳಿದ್ದಾರೆ. ಸ್ಫೋಟದ ನಿಖರ ಸ್ವರೂಪವನ್ನು ಅಧಿಕಾರಿಗಳು ಇನ್ನೂ ಪರಿಶೀಲಿಸುತ್ತಿದ್ದು, ಇದು ಆತ್ಮಹತ್ಯಾ ದಾಳಿಕೋರನಿಂದ ಉಂಟಾಗಿದೆಯೇ ಎಂಬುದನ್ನು ಇನ್ನೂ ದೃಢಪಡಿಸಿಲ್ಲ.

ನಾನು ಸುರಕ್ಷಿತವಾಗಿದ್ದೇನೆ: ಅಖ್ತರ್ ಮೆಂಗಲ್

ಈ ದಾಳಿಯ ನಂತರ ಎಕ್ಸ್​​ನಲ್ಲಿ ಪೋಸ್ಟ್​ ಮಾಡಿರುವ​ ಅಖ್ತರ್ ಮೆಂಗಲ್, ನಾನು ಸುರಕ್ಷಿತವಾಗಿದ್ದೇನೆ. ತಮ್ಮ ಪಕ್ಷದ ಕಾರ್ಯಕರ್ತರ ಸಾವಿಗೆ ಸಂತಾಪ ವ್ಯಕ್ತಪಡಿಸಿದರು.ಈ ದಾಳೀಯಲ್ಲಿ 15 ಜನರು ಹುತಾತ್ಮರಾಗಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ನನ್ನೊಂದಿಗೆ ನಿಂತು ನಮ್ಮ ಕಾರಣಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದರು. ಇವರ ತ್ಯಾಗವನ್ನು ಎಂದಿಗೂ ಮರೆಯಲಾಗುವುದಿಲ್ಲ. ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)