ನ್ಯೂಸ್

ಬಾಲಿವುಡ್ `ಧೋನಿ' ಸುಶಾಂತ್ ಸಿಂಗ್ ಆ ದಿನಗಳು...

suchetana

l ರಾಘವೇಂದ್ರ ಗಣಪತಿ
 (ಡೆಪ್ಯೂಟಿ ಎಡಿಟರ್, ವಿಜಯವಾಣಿ)

ಆ ಹುಡುಗ ಹುಟ್ಟಿದ್ದು ಪಾಟ್ನಾ ಸಮೀಪದ ಹಳ್ಳಿಯೊಂದರಲ್ಲಿ. ತಂದೆ ಸರ್ಕಾರಿ ನೌಕರ. ಮನೆಯಲ್ಲಿ ನಾಲ್ಕು ಜನ ಅಕ್ಕಂದಿರು, ಈತ ಕೊನೆಯ ಮಗ. ಸಹಜವಾಗಿಯೇ ಮನೆಯಲ್ಲಿ ಮುದ್ದಿನ ವಾತಾವರಣದಲ್ಲಿ ಬೆಳೆದವ. ಬದುಕಿಗೆ ಅಂಥ ಕಷ್ಟವೇನೂ ಇರಲಿಲ್ಲ. ಆದರೆ, ಅಪ್ಪ ಹಾಕಿದ ಆಲದ ಮರಕ್ಕೆ ಜೋತು ಬೀಳುವ ಸ್ವಭಾವದವನಲ್ಲ ಈ ಹುಡುಗ.

ಕುಟುಂಬ ಪಾಟ್ನಾದಿಂದ ದೆಹಲಿಗೆ ವಲಸೆ ಹೋಗುವುದರೊಂದಿಗೆ ಹೈಸ್ಕೂಲ್‍ನಿಂದ ರಾಜಧಾನಿಯ ಪ್ರತಿಷ್ಠಿತ ಶಾಲೆಯೊಂದರಲ್ಲಿ ಕಲಿತ ಈ ಹುಡುಗ, ರಾಷ್ಟ್ರೀಯ ಒಲಿಂಪಿಯಾಡ್‍ನಲ್ಲಿ ಫಿಸಿಕ್ಸ್‍ನಲ್ಲಿ ಪ್ರಶಸ್ತಿ ಗೆದ್ದಿದ್ದ. 12ನೇ ತರಗತಿ ಬೋರ್ಡ್ ಎಕ್ಸಾಂನಲ್ಲಿ ಅಖಿಲ ಭಾರತ ಮಟ್ಟದ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಪಡೆದಿದ್ದ. ಒಂದಲ್ಲ ಎರಡಲ್ಲ 11 ವಿವಿಧ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಈ ಹುಡುಗನ ಹೆಗ್ಗಳಿಕೆ. ಆದರೂ, ಈ ಹುಡುಗ ಇಂಜಿನಿಯರ್ ಆಗಲೇ ಇಲ್ಲ. ಮೆಕ್ಯಾನಿಕಲ್ ಇಂಜಿನಿಯರಿಂಗ್ ಮೂರೇ ವರ್ಷಕ್ಕೆ ಬೋರಾಯಿತು. ಬದಲಿಗೆ ಡ್ಯಾನ್ಸ್ ಮತ್ತು ಡ್ರಾಮಾ ಇನ್ನಿಲ್ಲದಂತೆ ಆಕರ್ಷಿಸಿತು. ಬದುಕೆನ್ನುವುದೊಂದಿದ್ದರೆ, ನಟನೆಯಲ್ಲೇ ಎಂದು ಆ ಹುಡುಗ ಪಣ ತೊಡುವುದಕ್ಕೆ ಇಷ್ಟೇ ಸಾಕಾಗಿತ್ತು.

ಇದು `ಬಾಲಿವುಡ್ ಧೋನಿ'- ಸುಶಾಂತ್ ಸಿಂಗ್ ರಜಪೂತ್ ಅವರ ಅನ್‍ಟೋಲ್ಡ್ ಸ್ಟೋರಿ. ಕಳೆದ ವಾರ ಬಿಡುಗಡೆಯಾಗಿರುವ ಎಂ.ಎಸ್. ಧೋನಿ ಆತ್ಮಕಥೆ ಸುಶಾಂತ್‍ಗೆ ವೃತ್ತಿಜೀವನದಲ್ಲಿ ಬಹುದೊಡ್ಡ ಬ್ರೇಕ್ ನೀಡಿದೆ. ಧೋನಿ ಬದುಕಿನ ಕಥೆ, ಅವರ ಕ್ರಿಕೆಟ್ ಜೀವನದ ಆಟ-ಹೋರಾಟಗಳು ಕ್ರಿಕೆಟ್ ಅಭಿಮಾನಿಗಳಿಗೆಲ್ಲರಿಗೂ ತಿಳಿದಿದೆ. ಈ ತಿಳಿದ ಕಥೆಯನ್ನು ತೆರೆಯ ಮೇಲೆ ರಸವತ್ತಾಗಿ ಅಭಿನಯಿಸುವುದಿದೆಯಲ್ಲ ಅದು ಬಹುದೊಡ್ಡ ಸವಾಲು. ನಿಜ ಧೋನಿ ಎದುರಿಗಿರುವಾಗ, ಅವರನ್ನೂ ಮೀರಿಸುವಂತೆ, ಅವರಂತೆಯೇ ಅಭಿನಯಿಸುವ ಚಾಲೆಂಜ್‍ನಲ್ಲಿ ಸುಶಾಂತ್ ಗೆದ್ದಿದ್ದಾರೆ.

ಹಾಗೆ ನೋಡಿದರೆ, ಗೆಲುವು ಬಾಲ್ಯದಿಂದಲೂ ಸುಶಾಂತ್‍ರ ಸ್ನೇಹಿತ. ಒಮ್ಮೆ ನಿರ್ಧಾರ ಮಾಡಿದರೆ ಗುರಿ ಈಡೇರುವವರೆಗೂ ವಿಮುಖರಾಗದ ಹಟ, ಛಲದ ಹೋರಾಟ ಅವರದು. ಈ ಹಾದಿಯಲ್ಲಿ ಅವರು ಮಾಡದ ಕೆಲಸವಿಲ್ಲ, ಪ್ರಯತ್ನವಿಲ್ಲ. ಬಾಲಿವುಡ್ ಏಣಿ ಏರುವ ಮುನ್ನ ದೆಹಲಿಯಲ್ಲಿ ಶೈಮಾಕ್ ದಾವರ್ ಅವರ ನೃತ್ಯಶಾಲೆ ಸೇರಿಕೊಂಡಿದ್ದ ಸುಶಾಂತ್, 2005ರಲ್ಲಿ ಫಿಲಂಫೇರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿನ್ನೆಲೆಯಲ್ಲಿ ನರ್ತಿಸಿದ್ದರು. ಆಸ್ಟ್ರೇಲಿಯಾದಲ್ಲಿ 2006ರ ಕಾಮನ್​ವೆಲ್ತ್​ ಕ್ರೀಡಾಕೂಟದ ಆರಂಭೋತ್ಸವದಲ್ಲಿ ಭಾರತದ ಸಾಂಸ್ಕೃತಿಕ ತಂಡದೊಂದಿಗೆ ತೆರಳಿ ಇವರೂ ಹೆಜ್ಜೆ ಹಾಕಿದ್ದರು. ನಟನೆಯಲ್ಲಿ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಇಂಜಿನಿಯರಿಂಗ್ ಕಲಿಕೆಗೆ ತಿಲಾಂಜಲಿ ಇತ್ತ ಅವರು ಮುಂಬೈಗೆ ಬಂದು, ನಾದಿರಾ ಬಬ್ಬರ್ ಅವರ ಏಕ್‍ಜೂತೆ ರಂಗತಂಡ ಸೇರಿಕೊಂಡಿದ್ದರು. ಆ ತಂಡದ ನಾಟಕಗಳಲ್ಲಿ ಸುಶಾಂತ್ ಅಭಿನಯ ಅವರಿಗೆ ಬಾಲಾಜಿ ಟೆಲಿಫಿಸ್ಮ್ಸ್ ಹೆಬ್ಬಾಗಿಲನ್ನು ತೆರೆಯಿತು. ಕಿರುತೆರೆಯಲ್ಲಿ ಅವರ ಮೊದಲ ಧಾರಾವಾಹಿ `ಕಿಸ್ ದೇಶ್ ಮೆ ಹೇ ಮೇರಾ ದಿಲ್'. ಅದರಲ್ಲಿ ಪ್ರೀತ್ ಜುನೇಜಾ ಪಾತ್ರ ಅವರಿಗೆ ಸಾಕಷ್ಟು ಜನಪ್ರಿಯತೆ ತಂದುಕೊಟ್ಟಿತ್ತಾದರೂ, ಧಾರಾವಾಹಿಯಲ್ಲಿ ಅವರ ಪಾತ್ರ ಅಕಾಲ ಮರಣವನ್ನಪ್ಪಿತು. ಕೊನೆಗೂ ಪ್ರೇಕ್ಷಕರ ಒತ್ತಾಯಕ್ಕೆ ಮಣಿದು ಸುಶಾಂತ್ ಮೃತ ಪಾತ್ರದ ಆತ್ಮದ ರೂಪದಲ್ಲಿ ಕೆಲವು ಎಪಿಸೋಡ್‍ಗಳಲ್ಲಿ ನಟಿಸಿದರು.

ಇದಾದ ಬಳಿಕ ಬಾಲಾಜಿ ಟೆಲಿಫಿಲ್ಮ್ಸ್ ಮತ್ತೊಂದು ಯಶಸ್ವಿ ಧಾರಾವಾಹಿ `ಪವಿತ್ರ ರಿಶ್ತಾ' ಸುಶಾಂತ್ ಪಾಲಿಗೆ ಭಾಗ್ಯದ ಬಾಗಿಲು ತೆರೆಯಿತು. ಮುಖ್ಯ ಪಾತ್ರಧಾರಿಯಾಗಿ ಅವರ ಪ್ರಬುದ್ಧ ನಟನೆಗೆ ಹಲವು ಪ್ರಶಸ್ತಿಗಳೂ ಬಂದವು.

ಇದನ್ನೂ ಓದಿ: ಬದುಕು ಕ್ಷಣಿಕ ಎಂದಿದ್ದೇಕೆ ಸುಶಾಂತ್​ ಸಿಂಗ್​; ಅಮ್ಮನ ನೆನೆದು ಬಾರದ ಲೋಕಕ್ಕೆ ಪಯಣ

ಚೇತನ್ ಭಗತ್‍ರ ಬೆಸ್ಟ್ ಸೆಲ್ಲರ್ ಥ್ರೀ ಮಿಸ್ಟೇಕ್ಸ್ ಆಫ್​ ಮೈ ಲೈಫ್​ ಕೃತಿ `ಕಾಯ್​ ಪೋಚೇ' ಹೆಸರಲ್ಲಿ ಚಿತ್ರವಾದಾಗ ಅದರಲ್ಲೊಂದು ಪ್ರಮುಖ ಪಾತ್ರಕ್ಕೆ ಆಯ್ಕೆಯಾದರು. ಕಾಕತಾಳೀಯವೆಂದರೆ, ಈ ಮೊದಲ ಚಿತ್ರದಲ್ಲಿ ಅವರು ಜಿಲ್ಲಾ ಮಟ್ಟದ ಕ್ರಿಕೆಟಿಗನ ಪಾತ್ರವನ್ನು ನಿರ್ವಹಿಸಿದ್ದರು. ಮುಂದೆ `ಶುದ್ಧ್ ದೇಸಿ ರೊಮಾನ್ಸ್'ನಲ್ಲಿ ವಾಣಿ ಕಪೂರ್ ಮತ್ತು ಪರಿಣೀತಿ ಚೋಪ್ರಾ ಜತೆ ರೊಮ್ಯಾಂಟಿಕ್ ಪಾತ್ರದಲ್ಲಿ ಕಾಣಿಸಿಕೊಂಡ ಅವರು ಆಮೀರ್ ಖಾನ್‍ರ ಬ್ಲ್ಯಾಕ್‍ಬಸ್ಟರ್ ಚಿತ್ರ `ಪಿಕೆ' ಚಿತ್ರದಲ್ಲಿ ಅನುಷ್ಕಾ ಶರ್ಮ ಲವರ್ ಪಾತ್ರದಲ್ಲಿ ಮಿಂಚಿದರು.

ನಿರ್ದೇಶಕ ನೀರಜ್ ಪಾಂಡೆ ಎಂ.ಎಸ್. ಧೋನಿ ಜೀವನವನ್ನು ಚಲನಚಿತ್ರ ಮಾಡಲು ನಿರ್ಧರಿಸಿದಾಗ ಧೋನಿ ಪಾತ್ರಕ್ಕೆ ಮೊದಲು ನೆನಪಾಗಿದ್ದೇ ಸುಶಾಂತ್. ಈ ಪಾತ್ರವನ್ನೊಂದು ಸವಾಲಾಗಿ ಸ್ವೀಕರಿಸಿ ಜನಮನ್ನಣೆ ಗಳಿಸಿದ್ದರು. ಧೋನಿ ಚಿತ್ರ ಮೊದಲ ವಾರದಲ್ಲಿ 100 ಕೋಟಿ ಕ್ಲಬ್ ಸೇರಿತ್ತು.

(ವಿಜಯವಾಣಿಯ `ಬಾಲಿವುಡ್ ಡೈರಿ'ಯಲ್ಲಿ 2016 ಅಕ್ಟೋಬರ್ 7ರಲ್ಲಿ ಪ್ರಕಟವಾಗಿದ್ದ ಅಂಕಣ)

ಸಂಪೂರ್ಣ ಲೇಖನಕ್ಕೆ ಈ ಲಿಂಕ್​ ಕ್ಲಿಕ್ಕಿಸಿ: