ಸಿಕ್ಸ್ ಪ್ಯಾಕ್, ಏಯ್ಟ್ ಪ್ಯಾಕ್ಗಳು, 20 ಇಂಚಿನ ತೋಳುಗಳು, ಹೊರಗಿನಿಂದ ನೋಡಲು ಹುರಿಗೊಂಡ ದೇಹ... ನಾವು ಒಳಗಿನಿಂದಲೂ ಆರೋಗ್ಯವಾಗಿದ್ದೇವೆ ಎಂಬುದನ್ನು ದೃಢೀಕರಿಸುತ್ತಾ? ಹೌದು ಎನ್ನುವುದಾದರೆ ವಿಶ್ವಾದ್ಯಂತ ಬಾಡಿ ಬಿಲ್ಡರ್ಗಳಷ್ಟು ಆರೋಗ್ಯವಂತರು ಬೇರಾರೂ ಇಲ್ಲ ಅಲ್ಲವೇ? ಆದರೆ, ಅವರ ಈ ಕಟ್ಟುನಿಟ್ಟಿನ ವರ್ಕೌಟ್, ಡಯಟ್ ಮತ್ತು ದೇಹ ಹುರಿಗೊಳಿಸಿಕೊಳ್ಳಲು ತೆಗೆದುಕೊಳ್ಳುವ ಸಪ್ಲಿಮೆಂಟ್ಗಳೇ ಅವರ ಆರೋಗ್ಯಕ್ಕೆ ಮಾರಕವಾಗುತ್ತಿವೆ. ಹೀಗಾಗಿ ದೇಹದಾರ್ಢ್ಯ ಪಟುಗಳಲ್ಲಿ ಹೃದಯಾಘಾತ ಹೆಚ್ಚುತ್ತಿದ್ದು ಕಳವಳಕ್ಕೆ ಕಾರಣವಾಗಿದೆ.
ವಿಶ್ವದ ಮೊದಲ ವೆಜ್ ಬಾಡಿ ಬಿಲ್ಡರ್ ಎಂದೇ ಖ್ಯಾತಿ ಗಳಿಸಿದ್ದ 42 ವರ್ಷದ ವರಿಂದರ್ ಸಿಂಗ್ ಘುಮಾನ್ ಅಕಾಲಿಕ ಸಾವು ತಲ್ಲಣ ಸೃಷ್ಟಿಸಿದೆ. ವೃತ್ತಿಪರ ಬಾಡಿ ಬಿಲ್ಡಿಂಗ್ ಎಷ್ಟು ಸೇಫ್? ಜಿಮ್ಗೆ ಹೋಗುವುದೇ ತಪ್ಪು ಎಂಬಂತಹ ಚರ್ಚೆ ಜಾಲತಾಣದಲ್ಲಿ ಹುಟ್ಟುಹಾಕಿದೆ. ಹಾಗಂತ ಈ ವಿಷಯ ಮುನ್ನೆಲೆಗೆ ಬಂದಿರುವುದು ಇದೇ ಮೊದಲೇನಲ್ಲ. ಈ ಹಿಂದೆಯೂ ವೃತ್ತಿಪರ ಬಾಡಿ ಬಿಲ್ಡರ್ಗಳು ಆರೋಗ್ಯ ಸಮಸ್ಯೆಗಳಿಂದ, ಅದರಲ್ಲೂ ಹೆಚ್ಚಾಗಿ ಹೃದಯಾಘಾತದಿಂದ ಮರಣವನ್ನಪ್ಪಿದಾಗ ಕಳವಳ ಸೃಷ್ಟಿಯಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಇಂಥ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಹಲವು ಪ್ರಶ್ನೆಗಳನ್ನು ಸೃಷ್ಟಿಸಿದೆ.
ಶಾಕಿಂಗ್ ವರದಿ!: ಯೂರೋಪಿಯನ್ ಹಾರ್ಟ್ ಜರ್ನಲ್ 2025ರ ಮೇ 21ರಂದು ಪ್ರಕಟಿಸಿರುವ ವರದಿಯ ಪ್ರಕಾರ ವೃತ್ತಿಪರ ಬಾಡಿ ಬಿಲ್ಡಿಂಗ್ ಮಾಡುವ ಪುರುಷರು ಹೃದಯಾಘಾತಕ್ಕೆ ಬಲಿಯಾಗುವ ಸಾಧ್ಯತೆ ಹೆಚ್ಚು ಎನ್ನಲಾಗಿದೆ. ಇಟಲಿಯ ಪಡೋವಾ ವಿಶ್ವವಿದ್ಯಾಲಯದ ಡಾ. ಮಾರ್ಕೆ ವೆಚಿಯಾಟೊ ನೇತೃತ್ವದಲ್ಲಿ 2005ರಿಂದ 2025ರವರೆಗೆ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಕನಿಷ್ಠ ಒಮ್ಮೆಯಾದರೂ ಸ್ಪರ್ಧಿಸಿರುವ 20,286 ಬಾಡಿ ಬಿಲ್ಡರ್ಗಳ ವೈದ್ಯಕೀಯ ರಿಪೋರ್ಟ್ಗಳನ್ನು ಪರಿಶೀಲಿಸಲಾಗಿದೆ. ಅವರಲ್ಲಿ 121 ಜನ ಮೃತಪಟ್ಟಿದ್ದು, ಅದರಲ್ಲಿ ಶೇಕಡ 38ರಷ್ಟು ಮಂದಿ ಹಠಾತ್ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ. ಈ ವರದಿಯ ಪ್ರಕಾರ ಹವ್ಯಾಸಿ ಬಾಡಿ ಬಿಲ್ಡರ್ಗಳಿಗಿಂತ ವೃತ್ತಿಪರ ಬಾಡಿ ಬಿಲ್ಡರ್ಗಳು ಹೃದಯಾಘಾತಕ್ಕೆ ಬಲಿಯಾಗುವ ಸಾಧ್ಯತೆ ಐದು ಪಟ್ಟು ಹೆಚ್ಚು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅತಿಯಾದ ಸ್ಟ್ರೆಂತ್ ಟ್ರೇನಿಂಗ್, ನಿರ್ಜಲೀಕರಣ, ಆಹಾರ ನಿರ್ಬಂಧಗಳು ಜತೆಗೆ ದೇಹಾರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸಪ್ಲಿಮೆಂಟ್ಗಳ ಅತಿಯಾದ ಬಳಕೆ... ಹೀಗೆ ಬಾಡಿ ಬಿಲ್ಡಿಂಗ್ಗಾಗಿ ಅನುಸರಿಸುವ ವಿಪರೀತ ವಿಧಾನಗಳೇ ಇದಕ್ಕೆ ಕಾರಣ ಎನ್ನಲಾಗಿದೆ.
ಆತಂಕ ಬೇಡ ಕಳೆದ 25 ವರ್ಷಗಳಿಂದ ಜಿಮ್ ಟ್ರೇನರ್ ಆಗಿರುವ, ಕರ್ನಾಟಕದ ಹೆಸರಾಂತ ಫಿಟ್ನೆಸ್ ಟ್ರೇನರ್, ಧನಂಜಯ, ರಚಿತಾ ರಾಮ್ ರಕ್ಷಿತ್ ಶೆಟ್ಟಿ, ಶೈನ್ ಶೆಟ್ಟಿ ಸೇರಿ ಹಲವು ತಾರೆಯರಿಗೂ ತರಬೇತಿ ನೀಡಿರುವ ಶ್ರೀನಿವಾಸ್ ಮಾಸ್ಟರ್, ‘ಬಾಡಿ ಬಿಲ್ಡರ್ಗಳಿಗೂ ಬೇರೆ ಬೇರೆ ಆರೋಗ್ಯ ಕಂಡಿಷನ್ ಇರುತ್ತವೆ. ಫಿಟ್ನೆಸ್ ಬೇರೆ, ಬಾಡಿ ಬಿಲ್ಡಿಂಗ್ ಬೇರೆ. ವರಿಂದರ್ ಸಿಂಗ್ ಘುಮಾನ್ ಅವರ ಆರೋಗ್ಯ ಸ್ಥಿತಿ ಹೇಗಿತ್ತು ಎಂಬುದರ ಬಗ್ಗೆ ಅವರ ಕುಟುಂಬದವರಿಗೆ, ವೈದ್ಯರಿಗಷ್ಟೇ ತಿಳಿದಿರುತ್ತದೆ. ಫಿಟ್ನೆಸ್ಗಾಗಿ ಜಿಮ್ಗೆ ಬರುವವರು ಶೇಕಡ 97ರಷ್ಟಿದ್ದರೆ, ವೃತ್ತಿಪರ ಬಾಡಿ ಬಿಲ್ಡಿಂಗ್ಗೆ ಹೋಗುವವರು ಕೇವಲ ಶೇ.2ರಿಂದ 3ರಷ್ಟು ಮಾತ್ರ ಇರುತ್ತಾರೆ. ಪ್ರತಿ ಬಾರಿ ಬಾಡಿ ಬಿಲ್ಡರ್ಗಳು ಅಥವಾ ಫಿಟ್ನೆಸ್ ಕ್ಷೇತ್ರದವರು ಯಾರಾದರೂ ವಿಧಿವಶರಾದಾಗಲೂ, ಜಿಮ್ ವರ್ಕೌಟ್, ಡಯಟ್ ಬಗ್ಗೆ ಪ್ರಶ್ನೆ ಮಾಡುತ್ತಿರುತ್ತಾರೆ. ನಿರ್ದಿಷ್ಟವಾಗಿ ಒಂದು ಪ್ರಕರಣವನ್ನು ಇಷ್ಟೊಂದು ಗಂಭೀರವಾಗಿ ಪರಿಗಣಿಸುವವರು ಮದ್ಯವ್ಯಸನ, ಧೂಮಪಾನ, ಅಪಘಾತದಿಂದ ಪ್ರತಿ ವರ್ಷ ಸಾಯುವ ಲಕ್ಷಾಂತರ ಜನರ ಬಗ್ಗೆ ಯಾಕೆ ಪ್ರಶ್ನಿಸುವುದಿಲ್ಲ? ವೃತ್ತಿಪರ ಬಾಡಿ ಬಿಲ್ಡರ್ಗಳು ಅವರದೇ ಆದ ಶಿಸ್ತು ರೂಢಿಸಿಕೊಂಡಿರುತ್ತಾರೆ. ಬೆಳಗ್ಗೆ, ಸಂಜೆ ವರ್ಕೌಟ್ ಮಾಡುತ್ತಾರೆ. ಅವರಿಗಾಗಿ ಡಯಟೀಷಿಯನ್, ಟ್ರೇನರ್, ಡಾಕ್ಟರ್ ಎಲ್ಲರೂ ಇರುತ್ತಾರೆ. ಆದರೆ, ಫಿಟ್ನೆಸ್ಗಾಗಿ ಜಿಮ್ಗೆ ಬರುವವರು ಬೇರೆ ಕೆಲಸ ಕೂಡ ಮಾಡುತ್ತಿರುತ್ತಾರೆ. ದಿನಕ್ಕೆ ಒಂದೆರಡು ತಾಸು ವರ್ಕೌಟ್ ಮಾಡುತ್ತಾರೆ. ಫಿಟ್ನೆಸ್ಗೆ ಮಾಡುವ ಡಯಟ್ ಬೇರೆ, ಬಾಡಿ ಬಿಲ್ಡಿಂಗ್ಗೆ ಮಾಡುವ ಡಯಟ್ ಬೇರೆ ಇರುತ್ತದೆ. ಹೀಗಾಗಿ ಫಿಟ್ನೆಸ್ ಮಾಡುವವರು ಬಾಡಿ ಬಿಲ್ಡರ್ ತೆಗೆದುಕೊಳ್ಳುವ ಸಪ್ಲಿಮೆಂಟ್ಸ್ ತೆಗೆದುಕೊಳ್ಳಬಾರದು. ಇಂತಹ ಘಟನೆಗಳು ನಡೆದಾಗಲೂ ಆತಂಕಕ್ಕೆ ಒಳಗಾಗದೆ, ಬೇರೆಯವರ ಮಾತು ಕೇಳದೆ ತಮ್ಮ ಫಿಟ್ನೆಸ್ ರುಟೀನ್ ಮುಂದುವರಿಸಬೇಕು’ ಎನ್ನುತ್ತಾರೆ.
ಇತ್ತೀಚಿನ ದಿನಗಳಲ್ಲಿ ಜಿಮ್ಲ್ಲಿ ವರ್ಕೌಟ್ ಮಾಡುವವರು, ಫಿಟ್ನೆಸ್ ಉತ್ಸಾಹಿಗಳು ಹೃದಯಾಘಾತಕ್ಕೆ ತುತ್ತಾಗುತ್ತಿರುವ ಪ್ರಕರಣಗಳಲ್ಲಿ ಹಠಾತ್ ಏರಿಕೆಯಾದ ಕಾರಣ ಪಂಜಾಬ್ ಸರ್ಕಾರವು ಜಿಮ್ಲ್ಲಿ ಇಂಟೆನ್ಸ್ ವರ್ಕೌಟ್ ಪ್ರಾರಂಭಿಸುವ ಮುನ್ನ ಪ್ರತಿಯೊಬ್ಬರೂ ವೈದ್ಯಕೀಯ ಪರೀಕ್ಷೆಗೆ ಒಳಗಾಗಬೇಕೆಂದು ಪ್ರಕಟಣೆ ಹೊರಡಿಸಿದೆ. ಅದಕ್ಕೆ ಒತ್ತು ನೀಡುವ ಡಯಟೀಷಿಯನ್ ಮೌಲ್ಯ, ಮೆಡಿಕಲ್ ಕಂಡೀಷನ್ ಇರುವವರು ವೈದ್ಯರ ಸಲಹೆ ಪಡೆದು ಜಿಮ್ಗೆ ಹೋಗುವುದು ಉತ್ತಮ. ಕೆಲವರಿಗೆ ಫ್ಯಾಮಿಲಿ ಹಿಸ್ಟರಿ ಇರುತ್ತದೆ. ಕೆಲವರು ಬೇರಾವುದೋ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಆ ವಿಷಯ ತರಬೇತುದಾರರಿಗೆ, ಡಯಟೀಷಿಯನ್ಗೆ ತಿಳಿದರೆ ಉತ್ತಮ. ಆಗ ಅವರಿಗೆ ಬೇರೆಯ ರೀತಿಯ ವರ್ಕೌಟ್ಗಳನ್ನು ಮಾಡಿಸಬಹುದು, ಡಯಟ್ ಕೊಡಬಹುದು. ಮತ್ತೊಬ್ಬರನ್ನು ನೋಡಿ ವರ್ಕೌಟ್ ಮಾಡುವುದು, ಅತಿಯಾದ ವರ್ಕೌಟ್, 15 ಕೆಜಿ ತೂಕ ಎತ್ತಲು ಸಾಮರ್ಥ್ಯ ಇರುವ ವ್ಯಕ್ತಿ 30 ಕೆಜಿ ಎತ್ತಲು ಪ್ರಯತ್ನಿಸುವುದು, ಸಪ್ಲಿಮೆಂಟ್ಸ್, ಮದ್ಯಪಾನ, ಧೂಮಪಾನ, ಮಾದಕ ವ್ಯಸನವೂ ಕೆಲವೊಮ್ಮೆ ವರ್ಕೌಟ್ ಮಾಡುವವರಿಗೆ ಸಮಸ್ಯೆ ಆಗಬಹುದು ಎನ್ನುತ್ತಾರೆ ಡಯಟೀಶಿಯನ್ ಮೌಲ್ಯ.
ಕಳೆದ ನಾಲ್ಕು ದಶಕಗಳಿಂದ ವೃತ್ತಿಪರ ಬಾಡಿ ಬಿಲ್ಡಿಂಗ್ನಲ್ಲಿ ತಮ್ಮದೇ ಛಾಪು ಮೂಡಿಸಿರುವ, 18 ಬಾರಿ ಅಂತಾರಾಷ್ಟ್ರೀಯ ಬಾಡಿ ಬಿಲ್ಡಿಂಗ್ ಸ್ಪರ್ಧೆಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ, 140ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಜಿಮ್ ರವಿ ಕೆಲ ಉಪಯುಕ್ತ ಸಲಹೆ ಮತ್ತು ಫಿಟ್ನೆಸ್ ಉತ್ಸಾಹಿಗಳಿಗೆ ಕಿವಿಮಾತು ಹೇಳಿದ್ದಾರೆ.
‘ನಲ್ವತ್ತು ವರ್ಷಗಳಿಂದ ವರ್ಕೌಟ್ ಮಾಡುತ್ತಿದ್ದೇನೆ. ನನ್ನ ಪ್ರಕಾರ ನಮ್ಮ ನಡವಳಿಕೆ, ನಮ್ಮತನವನ್ನು ಬಿಡುತ್ತಿರುವುದೇ ಸಮಸ್ಯೆಗೆ ಮೂಲ ಕಾರಣ ಅಂತನ್ನಿಸುತ್ತದೆ. ಮತ್ತೊಬ್ಬರನ್ನು ಅನುಸರಿಸಲು ಯತ್ನಿಸುತ್ತೇವೆ. ಅವರ ಊಟ, ಅವರ ಜೀವನಶೈಲಿಯನ್ನು ಅನುಕರಿಸಲು ಯತ್ನಿಸುತ್ತೇವೆ. ಅದರಿಂದಲೇ ಶೇಕಡ 50ರಷ್ಟು ಸೋಲುತ್ತಿದ್ದೇವೆ. ನಮ್ಮ ದೇಹ ಇಲ್ಲಿನ ನೆಲದ ಆಹಾರ ಪದ್ಧತಿಗೆ ಒಗ್ಗಿರುತ್ತದೆ. ಪ್ರೋಟೀನ್ ಪೌಡರ್, ಟ್ಯಾಬ್ಲೆಟ್ಸ್, ಇಂಜೆಕ್ಷನ್ ಅದು ಇದು ಅಂತ ಇವತ್ತು ತುಂಬ ತಿಳಿದುಕೊಂಡುಬಿಟ್ಟಿದ್ದೇವೆ. ಎಲ್ಲ ಕ್ರೀಡಾಪಟುಗಳಿಗೆ ನನ್ನ ಒಂದೇ ಮನವಿ, ಎಲ್ಕೆಜಿಯಿಂದ 10ನೇ ತರಗತಿ ಓದುವಂತೆ, ಹಂತಹಂತವಾಗಿ ಡಯಟ್, ವರ್ಕೌಟ್ಗಳನ್ನು ಹೆಚ್ಚಿಸುತ್ತ ಹೋಗಬೇಕು. ಈಗಷ್ಟೇ ಜಿಮ್ ಸೇರಿರುವವರು 10 ವರ್ಷಗಳಿಂದ ತರಬೇತಿ ಪಡೆಯುತ್ತಿರುವವರನ್ನು ಅನುಕರಿಸಬಾರದು. ಅವರ ಡಯಟ್ ಬೇರೆ ಇರುತ್ತದೆ. ಇವರದೇ ಬೇರೆ ಇರುತ್ತದೆ. ಎಲ್ಕೆಜಿ ಮಕ್ಕಳಿಗೆ ಐಎಎಸ್ ಪುಸ್ತಕವೇಕೆ? ಅತಿಯಾದ ಮಾಹಿತಿ ಇಲ್ಲಿ ಸಮಸ್ಯೆ ಆಗುತ್ತಿದೆ ಅಂತನ್ನಿಸುತ್ತದೆ’.
‘ನಾನು 40 ವರ್ಷಗಳಿಂದ ವ್ಯಾಯಾಮ ಮಾಡುತ್ತಿದ್ದೇನೆ. ಇವತ್ತಿಗೂ 110 ಕೆಜಿ ತೂಕ ಎತ್ತುತ್ತೇನೆ. ಪ್ರತಿದಿನ ಬೆಳಗ್ಗೆ ಎರಡು ತಾಸು ವರ್ಕೌಟ್ ಮಾಡುತ್ತೇನೆ. ಇದುವರೆಗೂ ಹೊಸತನ ಅಳವಡಿಸಿಕೊಂಡಿಲ್ಲ. ಹೇಗೆ ವರ್ಕೌಟ್ ಪ್ರಾರಂಭಿಸಿದ್ದೆನೋ, ಅದೇ ವರ್ಕೌಟ್ಗಳನ್ನೇ ಇಂದಿಗೂ ಮಾಡುತ್ತಿದ್ದೇನೆ. ಇದುವರೆಗೂ ಒಂದು ಸಣ್ಣ ಏಟೂ ಮಾಡಿಕೊಂಡಿಲ್ಲ. ಮನೆಯಲ್ಲಿ ಮಾಡುವ ಅಡುಗೆ ಬಿಟ್ಟು ಬೇರೇನೂ ತಿನ್ನುವುದಿಲ್ಲ. ಬಾಡಿ ಬಿಲ್ಡಿಂಗ್ನಲ್ಲಿ 110 ಗೋಲ್ಡ್ ಮೆಡಲ್ ಗೆದ್ದಿದ್ದೇನೆ. ಬಡತನದಿಂದ ಶೂ ಹಾಕದೇ ವರ್ಕೌಟ್ ಮಾಡುತ್ತಿದ್ದೆ. ಬಾಡಿ ಬಿಲ್ಡಿಂಗ್ನಲ್ಲಿ ನನಗೆ ಗುರು ಇಲ್ಲ. ಆಧುನಿಕ ಶೈಲಿಯನ್ನು ಅಳವಡಿಸಿಕೊಳ್ಳಲು ಯತ್ನಿಸಿಲ್ಲ. ಅದರ ಅವಶ್ಯಕತೆಯೂ ನನಗೆ ಬಂದಿಲ್ಲ. ಕಳೆದ ಮೂರು ದಶಕಗಳಿಂದ ನಾನು ಪ್ರೋಟೀನ್ ಮತ್ತು ಇಂಜೆಕ್ಷನ್ಗಳ ಬಗ್ಗೆ ಅರಿವು ಮೂಡಿಸಲು ಯತ್ನಿಸುತ್ತಿದ್ದೇನೆ. ಮಿಸ್ಟರ್ ಇಂಡಿಯಾ, ಇಂಡಿಯಾ ತಂಡದ ತರಬೇತುದಾರನಾಗಿದ್ದೆ. ಏನೇ ವರ್ಕೌಟ್ ಮಾಡಿದರೂ ತೋಳು ಒಂದು ಇಂಚು ದಪ್ಪ ಆಗಲು ಆರು ತಿಂಗಳು ಬೇಕೇಬೇಕು. ಹೀಗಿರುವಾಗ ಮೂರು ತಿಂಗಳಲ್ಲೇ ಮಾಡುತ್ತೇನೆ ಎಂದರೆ ಅದಕ್ಕೆ ಅಡ್ಡದಾರಿ ಹಿಡಿಯಬೇಕಾಗುತ್ತದೆ. ಹಿಂದಿನ ಕಾಲದಲ್ಲಿ ಗರಡಿಮನೆಗಳಿಗೆ ಸಣ್ಣ ಬಾಗಿಲು ಬಿಟ್ಟರೆ, ಕಿಟಕಿಗಳೂ ಇರುತ್ತಿರಲಿಲ್ಲ. ಬೆವರುವುದು ಆರೋಗ್ಯಕ್ಕೆ ಉತ್ತಮ ಎಂಬ ಕಾರಣಕ್ಕೆ ಹೀಗೆ ಮಾಡಲಾಗುತ್ತಿತ್ತು. ಆದರೆ, ಇವತ್ತು ಜಿಮ್ಗಳಲ್ಲಿ ಎಸಿ ಇರಬೇಕು, ಜೋರು ಮ್ಯೂಸಿಕ್ ಅಂತೂ ಬೇಕೇಬೇಕು ಎಂಬಂತಾಗಿದೆ. ಹೀಗಾಗಿ ವರ್ಕೌಟ್ ಮಾಡಿದರೂ ಬೆವರದಂತಹ ಪರಿಸ್ಥಿತಿ. ಅಂತಹ ಪರಿಸರದಲ್ಲಿ ವರ್ಷಗಟ್ಟಲೆ ವರ್ಕೌಟ್ ಮಾಡಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರದೇ ಇನ್ನೇನಾಗುತ್ತದೆ? ಅರ್ನಾಲ್ಡ್ ಶ್ವಾರ್ಜನೆಗರ್, ರೋನಿ ಕೋಲ್ವ್ಯಾನ್ ನನಗೆ ಉತ್ತಮ ಗೆಳೆಯರು. ಅವರನ್ನು ಹತ್ತಿರದಿಂದ ನೋಡಿದ್ದೇನೆ. ಹಾಗಂತ ಅವರ ಶೈಲಿಯನ್ನು ನಾನು ಅಳವಡಿಸಿಕೊಳ್ಳಲು ಯಾವತ್ತೂ ಪ್ರಯತ್ನಿಸಲಿಲ್ಲ. ಏಕೆಂದರೆ ನನ್ನತನ, ನನ್ನ ಸಂಪ್ರದಾಯದಿಂದ ನಾನು ದೂರ ಹೋಗಲು ಯತ್ನಿಸಲಿಲ್ಲ. ನಮ್ಮ ಜೀವ ನಮ್ಮ ಕೈಯಲ್ಲಿದೆ, ನಮ್ಮ ವ್ಯಾಯಾಮ ಕೂಡ ನಮ್ಮ ಕೈಯಲ್ಲಿರಬೇಕು. ಗೂಗಲ್, ಯೂಟ್ಯೂಬ್ ನೋಡಿಕೊಂಡು ವರ್ಕೌಟ್ ಮಾಡಬಾರದು’.