ನ್ಯೂಸ್

ಕಾಶ್ಮೀರ ದಾಲ್ ಸರೋವರದಲ್ಲಿ ಬೋಟ್ ಬೆಂಕಿ ಅವಘಡ: ಮೂವರು ವಿದೇಶಿಯರು ಸಾವು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ಜನಪ್ರಿಯ ಪ್ರವಾಸಿ ತಾಣವಾದ ದಾಲ್ ಸರೋವರದ ಹೌಸ್‌ಬೋಟ್‌ನಲ್ಲಿ ಶನಿವಾರ ಬೆಂಕಿ ಕಾಣಿಸಿಕೊಂಡಿದ್ದು, ಇದರಲ್ಲಿ 3 ವಿದೇಶಿಗರು ದಾರುಣವಾಗಿ ಮೃತಪಟ್ಟಿದ್ದಾರೆ.

ಶನಿವಾರ ಬೆಳಗಿನ ಜಾವ 5.15ಕ್ಕೆ ಸಂಭವಿಸಿದ ಈ ಅವಘಡದಲ್ಲಿ 5 ಬೋಟ್‌ಗಳು ಹಾಗೂ ಇತರೆ ಬೋಟ್‌ಹೌಸ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಕಿ ನಂದಿಸಲು ಸ್ಥಳೀಯರು ಅಗ್ನಿಶಾಮಕ ದಳ ಮತ್ತು ತುರ್ತು ಸಿಬ್ಬಂದಿಯೊಂದಿಗೆ ಹರಸಾಹಸ ಪಟ್ಟರು. ಒಂದು ದೋಣಿಯಲ್ಲಿ ಹೀಟಿಂಗ್​ ಸಿಸ್ಟಂನ ದೋಷದಿಂದಾಗಿ ಬೆಂಕಿ ಕಾಣಿಸಿಕೊಂಡು ಇತರ ದೋಣಿಗಳಿಗೆ ವ್ಯಾಪಿಸಿದೆ ಎಂದು ತಿಳಿದುಬಂದಿದೆ.

ಸುಟ್ಟ ಬೋಟ್‌ಗಳಲ್ಲಿ ಮೂವರು ವಿದೇಶಿಯರ ಮೃತದೇಹಗಳು ಪತ್ತೆಯಾಗಿವೆ. ಅವು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿವೆ. ಮೃತರಲ್ಲಿ ಒಬ್ಬರು ಮಹಿಳೆಯಾಗಿದ್ದು, ಮೂವರೂ ಬಾಂಗ್ಲಾದೇಶೀಯರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಡಿಎನ್​ಎ ಪರೀಕ್ಷೆಯ ನಂತರ ಮೃತದೇಹಗಳನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷ ಏಪ್ರಿಲ್‌ನಲ್ಲಿ ದಾಲ್ ಸರೋವರದಲ್ಲಿ ಇದೇ ರೀತಿಯ ದೊಡ್ಡ ಬೆಂಕಿ ಅನಾಹುತವಾಗಿತ್ತು. ಆಗ 7 ದೋಣಿಗಳು ಸುಟ್ಟು ಭಸ್ಮವಾಗಿದ್ದವು. ಆದರೆ, ಯಾರಿಗೂ ಯಾವುದೇ ಪ್ರಾಣಹಾನಿ ಸಂಭವಿಸಿರಲಿಲ್ಲ ಎಂಬುದು ಗಮನಾರ್ಹ ಸಂಗತಿಯಾಗಿದೆ.