ನ್ಯೂಸ್

ಬಿಎಂಡಬ್ಲ್ಯು ಹಿಟ್​ಆ್ಯಂಡ್​ರನ್​ ಪ್ರಕರಣ; ಪ್ರಮುಖ ಆರೋಪಿ ಮಿಹಿರ್ ಷಾ ಅರೆಸ್ಟ್​​​​​​

ಮುಂಬೈ: ಮಹಾರಾಷ್ಟ್ರದ ವರ್ಲಿಯಲ್ಲಿ ಭಾನುವಾರ (ಜುಲೈ 7) ನಡೆದ ಬಿಎಂಡಬ್ಲ್ಯು ಹಿಟ್ ಅಂಡ್ ರನ್ ಪ್ರಕರಣದ ಪ್ರಮುಖ ಆರೋಪಿ ಮಿಹಿರ್ ಷಾನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ. ಮಿಹಿರ್ ಷಾ ಏಕನಾಥ್ ಶಿಂಧೆ ಪಾಳಯದ ಶಿವಸೇನೆಯ ಸ್ಥಳೀಯ ನಾಯಕ ರಾಜೇಶ್ ಷಾ ಅವರ ಪುತ್ರ. ಪ್ರಕರಣದಕ್ಕೆ ಸಂಬಂಧಿಸಿದಂತೆ ಆತನ ತಂದೆಯನ್ನು ವರ್ಲಿ ಪೊಲೀಸರು ಬಂಧಿಸಿದ್ದರು. ಸೋಮವಾರ ಜಾಮೀನಿನ ಮೇಲೆ ರಾಜೇಶ್​​ ಷಾ ಬಿಡುಗಡೆಯಾಗಿದ್ದಾರೆ.

ಆರೋಪಿ ಮಿಹಿರ್​ ಷಾ ತಮ್ಮ ಬಿಎಂಡಬ್ಲ್ಯು ಕಾರಿನಿಂದ ಬೈಕ್​ಗೆ ಡಿಕ್ಕಿ ಹೊಡೆದು ಬಳಿಕ ಬಾನೆಟ್​​ ಮೇಲೆ ಸಿಲುಕಿದ್ದ ಮಹಿಳೆಯನ್ನು ಸುಮಾರು ಒಂದೂವರೆ ಕಿಲೋಮೀಟರ್ ಎಳೆದೊಯ್ದಿದ್ದಾಗಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಇದಾದ ನಂತರ ಆತ ಚಾಲಕನೊಂದಿಗೆ ಸೀಟು ಬದಲಾಯಿಸಿಕೊಂಡಿದ್ದಾನೆ. ಬಳಿಕ ಚಾಲಕ ರಾಜಋಷಿ ರಾಜೇಂದ್ರ ಸಿಂಗ್​ ಬಿಡಾವತ್​​ ಕಾರನ್ನು ಹಿಂದಕ್ಕೆ ತೆಗೆದುಕೊಂಡು ಡ್ರೈವ್​ ಮಾಡಿದ್ದಾರೆ. ತನಿಖೆಯ ಮೇಲೆ ಪ್ರಭಾವ ಬೀರಲು ಇದೆಲ್ಲವನ್ನು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಪಘಾತದಲ್ಲಿ ಕಾವೇರಿ ನಖ್ವಾ ಎಂಬ ಮಹಿಳೆ ಮೃತಪಟ್ಟಿದ್ದು, ಪತಿ ಪ್ರದೀಪ್ ಗಾಯಗೊಂಡಿದ್ದಾರೆ. ಘಟನೆ ಬಗ್ಗೆ ಮಹಿಳೆಯ ಪತಿ ಮಾತನಾಡಿ, ಗಂಟೆಗೆ 30 ರಿಂದ 35 ಕಿಲೋಮೀಟರ್ ವೇಗದಲ್ಲಿ ಚಾಲನೆ ಮಾಡುತ್ತಿದ್ದಾಗ, ವೇಗವಾಗಿ ಬಂದ ಕಾರು ಹಿಂದಿನಿಂದ ಡಿಕ್ಕಿ ಹೊಡೆಯಿತು. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಬಾನೆಟ್​ ಮೇಲೆ ಬಿದ್ದವು. ಚಾಲಕ ಬ್ರೇಕ್ ಹಾಕಿದ್ದರಿಂದ ನಾನು ಬಿದ್ದೆ. ನನ್ನ ಹೆಂಡತಿ ಚಕ್ರದಡಿ ಸಿಲುಕಿದಳೂ ಬಾನೆಟ್​​ ಬಡಿದು ಕಾರನ್ನು ನಿಲ್ಲಿಸುವಂತೆ ಕೇಳಿದೆ. ಆದರೆ ಅವರು ಕಾರನ್ನು ನಿಲ್ಲಿಸಲಿಲ್ಲ. ಚಾಲಕ ಬ್ರೇಕ್​ ಹಾಕಿದ್ದರೆ ನನ್ನ ಪತ್ನಿಯನ್ನು ಉಳಿಸಬಹುದಿತ್ತು ಎಂದು ಹೇಳಿದ್ದಾರೆ. (ಏಜೆನ್ಸೀಸ್​​)