ನ್ಯೂಸ್

ಮುಂಬೈ ಮುಕ್ತ... ಮುಕ್ತ..., ಏಳೂ ದಿನ ಅಂಗಡಿ ತೆರೆಯಬಹುದು....!

ಮುಂಬೈ: ದೇಶದಲ್ಲೇ ಅತಿ ಹೆಚ್ಚು ಕೋವಿಡ್​ ಪ್ರಕರಣಗಳನ್ನು ಹೊಂದಿ ತೀವ್ರ ಸಂಕಷ್ಟದಲ್ಲಿದ್ದ ಮಹಾರಾಷ್ಟ್ರ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಅದರಲ್ಲೂ ಮುಂಬೈನಲ್ಲಿ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ.

ಈ ಕಾರಣದಿಂದಾಗಿ ರಾಜಧಾನಿಯಲ್ಲಿ ಜಾರಿಯಲ್ಲಿದ್ದ ಬಹುತೇಕ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಲಾಗಿದೆ. ಅಂಗಡಿಗಳನ್ನು ವಾರದ ಏಳು ದಿನವೂ ತೆರೆದಿರಬಹುದು ಎಂದು ಬೃಹನ್ಮುಂಬೈ ಮಹಾನಗರ ಪಾಲಿಕೆ ಆದೇಶ ಹೊರಡಿಸಿದೆ. ಇದು ಆಗಸ್ಟ್​ 5ರಿಂದ ಅನ್ವಯಿಸಲಿದೆ.

ವಾರದ ಎಲ್ಲ ದಿನ ರಸ್ತೆಯ ಎರಡೂ ಬದಿಯ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಬಹುದು. ಮೊದಲಿನಂತೆ ಸಮ ಮತ್ತು ಬೆಸ ಸಂಖ್ಯೆಯ ಸೂತ್ರವನ್ನು ಅನುರಿಸಬೇಕಿಲ್ಲ ಎಂದು ತಿಳಿಸಿದೆ.

ಮದ್ಯದಂಗಡಿಗಳು ಕೂಡ ಎಂದಿನಂತೆ ವ್ಯಾಪಾರ ನಡೆಸಬಹುದು. ಆದರೆ, ರಾಷ್ಟ್ರೀಯ ಮಾರ್ಗಸೂಚಿಗಳ ಪಾಲನೆ ಹಾಗೂ ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ. ದೇಶದ ಬಹುತೇಕ ಕಡೆ ಜುಲೈ ಆರಂಭಕ್ಕೆ ಲಾಕ್​ಡೌನ್​ ತೆರವುಗೊಳಿಸಿದ್ದರೂ, ಮುಂಬೈ ಸೇರಿ ಮಹಾರಾಷ್ಟ್ರದ ಹಲವು ಕಡೆಗಳಲ್ಲಿ ಜುಲೈ 31ರವರೆಗೆ ಲಾಕ್​ಡೌನ್​ ಮುಂದುವರಿದಿತ್ತು.