ನವದೆಹಲಿ: ಸರ್ಕಾರದ ಒಪ್ಪಿಗೆಯನ್ನು ಪಡೆಯದೆ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ)ಗೆ ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವನ್ನು ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಹೊಂದಿದ್ದಾರೆ ಎಂದು ಸುಪ್ರೀಂಕೋರ್ಟ್ ಸೋಮವಾರ (ಆ.05) ಮಹತ್ವದ ತೀರ್ಪು ಹೊರಡಿಸಿದೆ.
ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ ಅಡಿಯಲ್ಲಿ ಈ ಅಧಿಕಾರ ಬಂದಿದೆ. ಹೀಗಾಗಿ ಸದಸ್ಯರ ನಾಮನಿರ್ದೇಶನ ಮಾಡಲು ಲೆಫ್ಟಿನೆಂಟ್ ಗವರ್ನರ್ ಅವರು ದೆಹಲಿ ಸರ್ಕಾರದ ಸಲಹೆಯನ್ನು ಪಾಲಿಸಬೇಕಿಲ್ಲ. ಇದು ಶಾಸನಬದ್ಧ ಅಧಿಕಾರವಾಗಿರುವುದರಿಂದ ಲೆಫ್ಟಿನೆಂಟ್ ಗವರ್ನರ್ ದೆಹಲಿ ಸರ್ಕಾರದ ಸಲಹೆ ಅಲ್ಲ, ಶಾಸನಬದ್ಧ ಆದೇಶವನ್ನು ಅನುಸರಿಸುತ್ತಾರೆ ಎಂದು ಕೋರ್ಟ್ ಹೇಳಿದೆ.
ದೆಹಲಿ ಲೆಫ್ಟಿನೆಂಟ್ ಗವರ್ನರ್ ಅಧಿಕಾರವು ಲಾಟರಿ ಎಂದು ಸೂಚಿಸುವುದು ಸರಿಯಲ್ಲ. ಇದು ಸಂಸತ್ತಿನಿಂದ ಮಾಡಲ್ಪಟ್ಟ ಕಾನೂನಾಗಿದೆ. ಲೆಫ್ಟಿನೆಂಟ್ ಗವರ್ನರ್ ಅವರು ಚಲಾಯಿಸುವ ಅಧಿಕಾರ ಅವರ ವಿವೇಚನೆಗೆ ಬಿಡಲಾಗಿದೆ. 1993 ರ ಎಂಸಿಡಿ ಕಾಯಿದೆಯು ಲೆಫ್ಟಿನೆಂಟ್ ಗವರ್ನರ್ಗೆ ನಾಮನಿರ್ದೇಶನ ಮಾಡುವ ಅಧಿಕಾರವನ್ನು ನೀಡಿದೆ ಎಂದು ನ್ಯಾಯಾಲಯ ಹೇಳಿದೆ.
ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಎಂಸಿಡಿಗೆ 10 ಮಂದಿ ಪದಾಧಿಕಾರಿಗಳನ್ನು ನಾಮನಿರ್ದೇಶನ ಮಾಡಿದ್ದರು. ಇದು ಭಾರಿ ವಿವಾದಕ್ಕೀಡಾಗಿ ಗವರ್ನರ್ ವಿರುದ್ಧ ದೆಹಲಿ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಸಚಿವರ ಸಲಹೆಯನ್ನು ಸ್ವೀಕರಿಸದೇ ನಾಮನಿರ್ದೇಶನ ಮಾಡಿದ್ದಾರೆ, ಗವರ್ನರ್ ಅಧಿಸೂಚನೆ ರದ್ದುಗೊಳಿಸುವಂತೆ ಕೋರಿತ್ತು. ವಿಚಾರಣೆ ನಡೆಸಿದ ಸಿಜೆಐ ಚಂದ್ರಚೂಡ್, ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಮತ್ತು ನ್ಯಾಯಮೂರ್ತಿ ಜೆಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠವು 2023ರ ಮೇ 17 ಎಂದು ತೀರ್ಪನ್ನು ಕಾಯ್ದಿರಿಸಿತ್ತು.
ತನ್ನ ಮನವಿಯಲ್ಲಿ ದೆಹಲಿ ಸರ್ಕಾರ ಲೆಫ್ಟಿನೆಂಟ್ ಗವರ್ನರ್ ಚುನಾಯಿತ ಸರ್ಕಾರವನ್ನು ನಿರ್ಲಕ್ಷಿಸಿ, ಎಂಸಿಡಿಗೆ ನೇಮಕಾತಿಗಳನ್ನು ಮಾಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ಆದರೆ, ದೆಹಲಿ ಸರ್ಕಾರದ ಮನವಿಯನ್ನು ತಿರಸ್ಕರಿಸಿರುವ ನ್ಯಾಯಾಲಯ ಲೆಫ್ಟಿನೆಂಟ್ ಗವರ್ನರ್ಗೆ ಅಧಿಕಾರವಿದೆ ಎಂದು ತೀರ್ಪು ನೀಡಿದೆ. ಈ ತೀರ್ಪಿನಿಂದ ಸಿಎಂ ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರಕ್ಕೆ ಭಾರಿ ಹಿನ್ನೆಡೆಯಾದಂತಾಗಿದೆ. (ಏಜೆನ್ಸೀಸ್)