ನ್ಯೂಸ್

ಪಾಕಿಸ್ತಾನ ಮಸೀದಿಯಲ್ಲಿ ಬಾಂಬ್ ಸ್ಫೋಟ; ನಾಲ್ವರಿಗೆ ಗಂಭೀರ ಗಾಯ | Pakistan

ಇಸ್ಲಾಮಾಬಾದ್​​: ಪಾಕಿಸ್ತಾನದ(Pakistan) ಖೈಬರ್ ಪಖ್ತುಂಖ್ವಾದ ದಕ್ಷಿಣ ವಜೀರಿಸ್ತಾನದಲ್ಲಿ ಶುಕ್ರವಾರ (ಮಾರ್ಚ್ 14)ಪ್ರಾರ್ಥನೆಯ ಸಮಯದಲ್ಲಿ ಮಸೀದಿಯಲ್ಲಿ ಬಾಂಬ್ ಸ್ಫೋಟಗೊಂಡಿದೆ. ದಾಳಿಯಲ್ಲಿ ಜಮಿಯತ್ ಉಲೇಮಾ-ಎ-ಇಸ್ಲಾಂ (ಜೆಯುಐ) ಜಿಲ್ಲಾ ಮುಖ್ಯಸ್ಥ ಅಬ್ದುಲ್ಲಾ ನದೀಮ್ ಗಂಭೀರವಾಗಿ ಗಾಯಗೊಂಡಿದ್ದು, ಇತರ ಮೂವರು ಮಕ್ಕಳಿಗೆ ಗಾಯಗಳಾಗಿವೆ.

ಅಜಮ್ ವಾರ್ಸಾಕ್ ಬೈಪಾಸ್ ರಸ್ತೆಯಲ್ಲಿರುವ ಮೌಲಾನಾ ಅಬ್ದುಲ್ ಅಜೀಜ್ ಮಸೀದಿಯಲ್ಲಿ ಸ್ಫೋಟ ಸಂಭವಿಸಿದೆ ಎಂದು ಜಿಲ್ಲಾ ಪೊಲೀಸ್ ಅಧಿಕಾರಿ (ಡಿಪಿಒ) ಆಸಿಫ್ ಬಹದ್ದೂರ್ ಹೇಳಿರುವುದಾಗಿ ದಿ ಡಾನ್ ವರದಿ ಮಾಡಿದೆ. ಮಧ್ಯಾಹ್ನ 1:45ಕ್ಕೆ ಮಸೀದಿಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED)ವನ್ನು ಇರಿಸಲಾಗಿತ್ತು. ಪ್ರಾರ್ಥನೆಯ ಸಮಯದಲ್ಲಿ ಅದನ್ನು ಸ್ಫೋಟಿಸಲಾಗಿದೆ ಎಂದು ಹೇಳಿದ್ದಾರೆ.

ಜಮಿಯತ್ ಉಲೇಮಾ ಇಸ್ಲಾಂ-ಫಜಲ್ (ಜೆಯುಐ-ಎಫ್) ರಾಜಕೀಯ ಪಕ್ಷದ ಸ್ಥಳೀಯ ನಾಯಕ ಅಬ್ದುಲ್ಲಾ ನದೀಮ್ ಅವರನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆದಿರುವಂತೆ ಕಂಡುಬಂದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಗಾಯಗೊಂಡ ಇತರ ಮೂವರು ಮಕ್ಕಳನ್ನು ರೆಹಮಾನಲ್ಲಾ, ಮುಲ್ಲಾ ನೂರ್ ಮತ್ತು ಶಾ ಬೆಹ್ರಾನ್ ಎಂದು ಗುರುತಿಸಲಾಗಿದೆ. ಗಾಯಗೊಂಡ ಎಲ್ಲರನ್ನು ತಕ್ಷಣ ಜಿಲ್ಲಾ ಕೇಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಡಿಪಿಒ ಹೇಳಿದ್ದಾರೆ.

ಸ್ಫೋಟದ ಸ್ಥಳದಲ್ಲಿ ತನಿಖೆ ಆರಂಭಿಸಲಾಗಿದ್ದು ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಈ ಘಟನೆಯ ಹಿಂದಿನ ಸಂಭಾವ್ಯ ದಾಳಿಕೋರರಿಗಾಗಿ ಭದ್ರತಾ ಸಂಸ್ಥೆಗಳು ಹುಡುಕಾಟದಲ್ಲಿ ನಿರತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಫೋಟದ ಹೊಣೆಯನ್ನು ಇದುವರೆಗೆ ಯಾವುದೇ ಗುಂಪು ಹೊತ್ತುಕೊಂಡಿಲ್ಲ.(ಏಜೆನ್ಸೀಸ್​​)