ನ್ಯೂಸ್

VIDEO| ಅರಣ್ಯ ಇಲಾಖೆ ಕರೆದೊಯ್ದಿದ್ದ ಕೊಕ್ಕರೆ-ಆರಿಫ್​ ಒಂದಾಗಬೇಕು: ಬಿಜೆಪಿ ಸಂಸದ

ಅಮೇಥಿ: ಉತ್ತರಪ್ರದೇಶದ ಕಾನ್ಪುರ ಪ್ರಾಣಿ ಸಂಗ್ರಹಾಲಯದಲ್ಲಿ ಇರಿಸಲಾಗಿರುವ ಸರಸ್​ ಕ್ರೇನ್​ ಹೆಸರಿನ ಕೊಕ್ಕರೆ ತಳಿಯನ್ನು ಬಿಡುಗಡೆ ಮಾಡುವಂತೆ ಬಿಜೆಪಿ ಸಂಸದ ವರುಣ್​ ಗಾಂಧಿ ಹೇಳಿದ್ದಾರೆ.

ಈ ಕುರಿತು ಟ್ವೀಟ್​ ಮಾಡಿರುವ ಅವರು ಪ್ರಾಣಿ ಸಂಗ್ರಹಾಲಯದಿಂದ ಬಿಡುಗಡೆ ಮಾಡಿದ ನಂತರ ಅದನ್ನು ವಾಪಸ್​ ಸಾಕಿದವರ ಮಡಿಲಿಗೆ ಸೇರಿಸಬೇಕು ಎಂದು ಆಗ್ರಹಿಸಿದ್ಧಾರೆ.

ಅಳಿವಿನಂಚಿನಲ್ಲಿರುವ ಪಕ್ಷಿ ರಕ್ಷಣೆ

ಆರಿಫ್​ ಎಂಬ ವ್ಯಕ್ತಿಯೂ ಮಂಗಳವಾರ ಕಾನ್ಪುರ ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಇವರನ್ನು ನೋಡಿದ ಸರಸ್​ ಕ್ರೇನ್​ ಪಕ್ಷಿಯೂ ಸಂತೋಷದಿಂದ ರೆಕ್ಕೆ ಬಿಚ್ಚಿ ಕುಣಿದು ಕುಪ್ಪಳಿಸುತ್ತಿರುವುದು ಕಂಡು ಬರುತ್ತದೆ.

ಅಳಿವಿನಂಚಿನಲ್ಲಿರುವ ಸರಸ್​ ಕ್ರೇನ್​ ತಳಿಯ ಪಕ್ಷಿಯನ್ನು ಆರಿಫ್​ ರಕ್ಷಿಸಿದ್ದರು ಮತ್ತು ಅದರ ಹಾರೈಕೆಯನ್ನು ಮಾಡಿದ್ದರು. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದವು ಮತ್ತು ಮನುಷ್ಯ ಹಾಗು ಪಕ್ಷಿಗಳ ನಡುವಿನ ಸಂಬಂಧದ ಸೂಚ್ಯಂಕ ಎಂದು ನೆಟ್ಟಿಗರು ಬಣ್ಣಿಸಿದ್ದರು.

ಸರಿಯಾಗಿ ಊಟ ಮಾಡುತ್ತಿರಲಿಲ್ಲ

ಉತ್ತರಪ್ರದೇಶ ಸರ್ಕಾರದ ಅರಣ್ಯ ಇಲಾಖೆ ಅಧಿಕಾರಿಗಳು ಆರಿಫ್​ರಿಂದ ಪಕ್ಷಿಯನ್ನು ಬೇರ್ಪಡಿಸಿ ಕಾನ್ಪುರ ಪ್ರಾಣಿ ಸಂಗ್ರಹಾಲಯದಲ್ಲಿ ಇರಿಸಿದ್ದರು. ಮಾಲೀಕನಿಂದ ದೂರಾಗಿದ್ದಕ್ಕೆ ಕೊರಗುತ್ತಿದ್ದ ಪಕ್ಷಿಯೂ ಸರಿಯಾಗಿ ಊಟ ಮಾಡುತ್ತಿರಲಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಅಳಿವಿನಂಚಿನಲ್ಲಿರುವ ವಿಶೇಷ ತಳಿಯ ಪಕ್ಷಿಯನ್ನು ಮೊದಲು ನಾವು ರಕ್ಷಿಸಿ ನಂತರ ಇಲ್ಲಿಗೆ ಕರೆ ತಂದೆವು. ಆದರೆ, ಅದು ಸರಿಯಾಗಿ ಊಟ ಮಾಡುತ್ತಿರಲಿಲ್ಲ ನಂತರ ಆರಿಫ್​ನನ್ನು ಕರೆಸಿದಾಗ ಅದು ಸಂತೋಷ ವ್ಯಕ್ತಪಡಿಸಿದ ರೀತಿ ಬೇರೆಯದೆ ರೀತಿ ಇತ್ತು ಎಂದು ಪ್ರಾಣಿ ಸಂಗ್ರಹಾಲಯದ ಅಧಿಕಾರಿ ತಿಳಿಸಿದ್ದಾರೆ.

ಬಿಜೆಪಿ ವಿರುದ್ದ ವಾಗ್ದಾಳಿ

ಇನ್ನು ಆರಿಫ್​ರಿಂದ ಪಕ್ಷಿಯನ್ನು ಬೇರ್ಪಡಿಸಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಸಂಸದ ವರುಣ್​ ಗಾಂಧಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್​ ಉತ್ತರಪ್ರದೇಶ ಸರ್ಕಾರದ ವಿರುದ್ಧ ವಾಗ್ಧಾಳಿಯನ್ನು ನಡೆಸಿದ್ದಾರೆ.

ಆರಿಫ್​ ಹಾಗೂ ಸರಸ್​ ನಡುವಿನ ಕಥೆಯೇ ಬೇರಯಾಗಿದೆ. ಇಬ್ಬರು ಒಬ್ಬರನ್ನೊಬ್ಬರು ನೋಡಿದ ಖುಷಿಗೆ ವ್ಯಕ್ತಪಡಿಸಿದ ಪ್ರೀತಿ ಪರಿಶುದ್ದವಾದದ್ದು. ಈ ಪಕ್ಷಿಯನ್ನು ಹಾರಲು ಬಿಡುವ ಬದಲು ಪಂಜರದಲ್ಲಿ ಇರಿಸಲಾಗಿದೆ. ಕೂಡಲೇ ಅವರಿಬ್ಬರನ್ನು ಒಂದು ಮಾಡಿ ಎಂದು ಟ್ವೀಟ್​ ಮಾಡಿದ್ಧಾರೆ.

ಇನ್ನು ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್​ ಯಾದವ್ ಬಿಜೆಪಿಯವರು ಬೇರೆಯವರಿಗೆ ದುಃಖವನ್ನು ನೀಡಿ ತಾವು ಸಂತೋಷವನ್ನು ಹುಡುಕಿಕೊಳ್ಳುತ್ತಾರೆ. ಪರಿಸರ ಮೇಲೆ ಪ್ರೀತಿ ಅಥವಾ ಕಾಳಜಿ ಇಲ್ಲದಿರುವವರು ಎಂದಿಗೂ ಸಂತೋಷದಿಂದ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.