ಚೆನ್ನೈ: ಸನಾತನ ಧರ್ಮವನ್ನು ಮಲೇರಿಯಾ ಮತ್ತು ಡೆಂಘೆಗೆ ಹೋಲಿಕೆ ಮಾಡುವ ಮೂಲಕ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ವಿವಾದದ ಸುಳಿಗೆ ಸಿಲುಕಿದ್ದಾರೆ. ಉದಯನಿಧಿ ವಿರುದ್ಧ ಅಮಿತ್ ಶಾ ಸೇರಿದಂತೆ ಘಟಾನುಘಟಿ ಬಿಜೆಪಿ ನಾಯಕರು ಮತ್ತು ಹಾಗೂ ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿದ್ದು, ಉದಯನಿಧಿ ಅವರನ್ನು ಸಚಿವ ಸ್ಥಾನದಿಂದ ತೆಗೆದುಹಾಕಬೇಕೆಂದು ಪಟ್ಟು ಹಿಡಿದಿವೆ. ಇದೀಗ ಸಿಎಂ ಸ್ಟಾಲಿನ್, ತಮ್ಮ ಪುತ್ರನ ವಿರುದ್ಧ ಮುಗಿಬಿದ್ದಿರುವ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ಈ ವಿವಾದದ ಬಗ್ಗೆ ಸ್ಟಾಲಿನ್ ಅವರು ತಮ್ಮ ಪಾಡ್‌ಕಾಸ್ಟ್ ಸರಣಿ 'ಸ್ಪೀಕಿಂಗ್ ಫಾರ್ ಇಂಡಿಯಾ'ದಲ್ಲಿ ಮೊದಲ ಬಾರಿಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಯು ತನ್ನ ನ್ಯೂನತೆಗಳನ್ನು ಮರೆಮಾಚಲು ಧರ್ಮವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಅಲ್ಲದೆ, ಜನರಲ್ಲಿ ಧಾರ್ಮಿಕ ಭಾವನೆಗಳ ಬೆಂಕಿ ಹೊತ್ತಿಸಿ, ಆ ಜ್ವಾಲೆಯಲ್ಲಿ ತನ್ನ ಬೇಳೆ ಬೇಯಿಸಿಕೊಳ್ಳುತ್ತಿದೆ. ಬಿಜೆಪಿಯು ಭಾರತದ ರಚನೆ ಮತ್ತು ಏಕತೆಯನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ. ಇಡೀ ಭಾರತ ಮಣಿಪುರ ಹಾಗೂ ಹರಿಯಾಣದ ರೀತಿ ಬದಲಾಗದಂತೆ ತಡೆಯಲು ವಿಪಕ್ಷಗಳ ಒಕ್ಕೂಟ ಇಂಡಿಯಾ ಗೆಲ್ಲಲೇಬೇಕಾಗಿದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಸಾಮಾಜಿಕ ನ್ಯಾಯ, ಸಾಮಾಜಿಕ ಸಾಮರಸ್ಯ, ಒಕ್ಕೂಟ ವ್ಯವಸ್ಥೆ, ಜಾತ್ಯತೀತ ರಾಜಕೀಯ ಮತ್ತು ಸಮಾಜವಾದವನ್ನು ಮರುಸ್ಥಾಪಿಸಲು ಇಂಡಿಯಾ ಒಕ್ಕೂಟವನ್ನು ರಚಿಸಲಾಗಿದೆ. ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಂದಾಗಲೆಲ್ಲ ಡಿಎಂಕೆ ಮುಂಚೂಣಿಯಲ್ಲಿರುತ್ತದೆ ಎಂದು ಸ್ಟಾಲಿನ್ ಹೇಳಿದ್ದಾರೆ.
ಶನಿವಾರ ಚೆನ್ನೈನಲ್ಲಿ ನಡೆದ ಸನಾತನ ನಿರ್ಮೂಲನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಉದಯನಿಧಿ ಸ್ಟಾಲಿನ್, ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಕೆಲವೊಂದು ವಿಚಾರಗಳನ್ನು ಕೇವಲ ವಿರೋಧಿಸಿದರೆ ಸಾಲದು, ಅವುಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ನಾವು ಡೆಂಘೆ, ಮಲೇರಿಯಾ ಅಥವಾ ಕರೊನಾವನ್ನು ಎದುರಿಸಬಾರದು ಅವುಗಳನ್ನು ಶಾಶ್ವತವಾಗಿ ತೊಡೆದುಹಾಕಬೇಕು. ಅದರಂತೆ ಸನಾತನವನ್ನು ನಿರ್ಮೂಲನೆ ಮಾಡಬೇಕು ಎಂದು ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವ ಉದಯನಿಧಿ ಸ್ಟಾಲಿನ್ ಹೇಳಿದರು.
ಈ ಹೇಳಿಕೆ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ ಮತ್ತು ಬಿಜೆಪಿ ಹಾಗೂ ಹಿಂದು ಸಂಘಟನೆಗಳು ಆಕ್ರೋಶ ಹೊರಹಾಕಿವೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಸೇರಿಂದತೆ ರಾಷ್ಟ್ರ ಮತ್ತು ರಾಜ್ಯ ಬಿಜೆಪಿ ನಾಯಕರು ಹಾಗೂ ಹಿಂದು ಪರ ಸಂಘಟನೆಗಳು ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಖಂಡಿಸಿವೆ. ಆದರೆ, ಉದಯನಿಧಿ ಸ್ಟಾಲಿನ್ ಮಾತ್ರ ನನ್ನ ಹೇಳಿಕೆಗೆ ನಾನು ಬದ್ಧವಾಗಿದ್ದೇನೆ. ಯಾವುದೇ ಕಾರಣಕ್ಕೂ ಹೇಳಿಕೆಯಿಂದ ಹಿಂದೆ ಸರಿಯುವುದಿಲ್ಲ. ಯಾವುದೇ ಕಾನೂನು ಹೋರಾಟಕ್ಕೆ ಸಿದ್ಧನಿದ್ದೇನೆ. ಇಂತಹ ಸಾಮಾನ್ಯ ಕೇಸರಿ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ಪೆರಿಯಾರ್, ಅಣ್ಣಾ ಮತ್ತು ಕಲೈಂಜರ್ ಅವರ ಅನುಯಾಯಿಗಳಾದ ನಾವು, ನಮ್ಮ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಸಮರ್ಥ ಮಾರ್ಗದರ್ಶನದಲ್ಲಿ ಸಾಮಾಜಿಕ ನ್ಯಾಯವನ್ನು ಎತ್ತಿಹಿಡಿಯಲು ಮತ್ತು ಸಮಾನತೆಯ ಸಮಾಜವನ್ನು ಸ್ಥಾಪಿಸಲು ಶಾಶ್ವತವಾಗಿ ಹೋರಾಡುತ್ತೇವೆ ಎಂದಿದ್ದಾರೆ. (ಏಜೆನ್ಸೀಸ್)