ಬೆಂಗಳೂರು: ವಿಧಾನಸೌಧದ ಕೊಠಡಿಯಲ್ಲಿ ಅಳವಡಿಸಲಾಗಿದ್ದ ಡಾ| ಶಿವಕುಮಾರ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಹಾಗೂ ಎಚ್.ಡಿ.ಕುಮಾರಸ್ವಾಮಿ ಅವರ ಭಾವಚಿತ್ರವನ್ನು ತೆರವುಗೊಳಿಸಿ, ಪಡಸಾಲೆಯಲ್ಲಿ ರಾಶಿ ಹಾಕಿರುವುದನ್ನು ರಾಜ್ಯ ಬಿಜೆಪಿ ಟ್ವೀಟ್ ಮಾಡಿ ಖಂಡಿಸಿದೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಟ್ವೀಟ್ ಮಾಡಿ, 'ಇದು ಅಹಂಕಾರದ ಅಹಂಕಾರದ ಪರಮಾವಧಿ' ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಆಡಳಿತ ಪಕ್ಷ ಕಾಂಗ್ರೆಸ್ ಸರಕಾರಕ್ಕೆ ಕೇಸರಿ ಎಂದರೆ ದ್ವೇಷ ಮತ್ತು ಶತ್ರುಭಾವ. ಇಂದು ನಡೆದಾಡುವ ದೇವರು, ಕಾಯಕಯೋಗಿ, ತ್ರಿವಿಧದಾಸೋಹಿ ಪರಮ ಪೂಜನೀಯ ಡಾ। ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ವಿಧಾನಸೌಧದ ಕೊಠಡಿಯಿಂದ ತೆರವುಗೊಳಿಸಿ ಪಡಸಾಲೆಯಲ್ಲಿ ಉರುಳಾಡುವಂತೆ ಮಾಡಿ ಅಪಮಾನಿಸಿರುವುದು ಅಕ್ಷಮ್ಯ ಅಪರಾಧ ಎಂದು ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ರಾಜ್ಯದ ಜನತೆಯ ಕ್ಷಮೆ ಕೋರಬೇಕು. ಜತೆಗೆ ಡಾ। ಶಿವಕುಮಾರ ಮಹಾಸ್ವಾಮೀಜಿಯವರ ಭಾವಚಿತ್ರವನ್ನು ಸಕಲ ಗೌರವಗಳೊಂದಿಗೆ ಪುನಃ ಕೊಠಡಿಯೊಳಗೆ ಲಗತ್ತಿಸಬೇಕು ಎಂದು ರಾಜ್ಯ ಬಿಜೆಪಿ ಆಗ್ರಹಿಸಿದೆ.