ರಾಂಚಿ: ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಕೆಳಗಿಳಿಸುವ ಪ್ರಯತ್ನದಲ್ಲಿ ಒಂದಷ್ಟು ಹಿನ್ನಡೆಗೆ ಒಳಗಾಗಿದ್ದರೂ ಬಿಜೆಪಿ ಮತ್ತೊಂದು ರಾಜ್ಯ ಸರ್ಕಾರವನ್ನು ಉರುಳಿಸುವ ನಿಟ್ಟಿನಲ್ಲಿ ಪ್ರಯತ್ನಗಳನ್ನು ಆರಂಭಿಸಿದೆಯೇ? ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ನಂಬುವುದಾದರೆ ಹೌದು ಎಂಬ ಉತ್ತರ ದೊರೆಯುತ್ತದೆ.
ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದೆ. ಈ ಸರ್ಕಾರವನ್ನು ಕೆಳಗಿಳಿಸಿ, ತನ್ನ ಸರ್ಕಾರವನ್ನು ಸ್ಥಾಪಿಸಲು ಬಿಜೆಪಿ ರಾಜಕೀಯ ಆಟ ಶುರುವಿಟ್ಟಿದೆ ಎಂದು ಜಾರ್ಖಂಡ್ ಕಾಂಗ್ರೆಸ್ ಅಧ್ಯಕ್ಷ ರಾಮೇಶ್ವರ್ ಒರಾನ್ ಆರೋಪಿಸಿದ್ದಾರೆ.
ಕಾಂಗ್ರೆಸ್ನ ಶಾಸಕರ ಪಕ್ಷನಿಷ್ಠೆ ಪ್ರಶ್ನಾತೀತವಾಗಿದೆ. ಆದ್ದರಿಂದ, ಸೊರೇನ್ ಸರ್ಕಾರವನ್ನು ಕೆಳಗಿಳಿಸುವ ಬಿಜೆಪಿಯ ಆಟ ಜಾರ್ಖಂಡ್ನಲ್ಲಿ ನಡೆಯುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ ಎಂಬುದನ್ನು ಪದೇಪದೆ ಸಾಬೀತುಪಡಿಸುತ್ತಿದೆ. ಮೊದಲಿಗೆ ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಉರುಳಿಸಿದರು. ನಂತರ ಮಧ್ಯಪ್ರದೇಶ ಆಯಿತು. ರಾಜಸ್ಥಾನದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿ ರಾಜಕೀಯ ಅಸ್ಥಿರತೆ ಉಂಟು ಮಾಡಿದ್ದಾರೆ. ಇದೀಗ ಜಾರ್ಖಂಡ್ನ ಮೇಲೆ ಅವರ ಕಣ್ಣು ಬಿದ್ದಿದೆ. ಇಲ್ಲಿನ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ನಂಬಲರ್ಹ ಮೂಲಗಳು ನಮಗೆ ಮಾಹಿತಿ ನೀಡಿವೆ ಎಂದು ಒರಾನ್ ಹೇಳಿದ್ದಾರೆ.
ಕಾಂಗ್ರೆಸ್ನ ಅಪಪ್ರಚಾರ: ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರವನ್ನು ಉರುಳಿಸಲು ಬಿಜೆಪಿ ಯಾವುದೇ ಪ್ರಯತ್ನಗಳನ್ನು ಮಾಡುತ್ತಿಲ್ಲ. ಬಿಜೆಪಿಯ ಹೆಸರಿಗೆ ಮಸಿ ಬಳಿಯಲು ಕಾಂಗ್ರೆಸ್ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದೆ ಎಂದು ಜಾರ್ಖಂಡ್ ಬಿಜೆಪಿಯ ಅಧ್ಯಕ್ಷ ದೀಪಕ್ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಕರೊನಾ ಸೋಂಕು ನಿಯಂತ್ರಿಸುವಲ್ಲಿ ಸೊರೇನ್ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿ ಅದು ರಾಜ್ಯದ ಜನರ ಕೆಂಗಣ್ಣಿಗೆ ಗುರಿಯಾಗಿದೆ. ಇದರಿಂದ ಪಾರಾಗಲು ಕಾಂಗ್ರೆಸ್ ಅಡ್ಡಮಾರ್ಗ ತುಳಿಯುತ್ತಿದೆ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಜಾರ್ಖಂಡ್ ಕಾಂಗ್ರೆಸ್ಗೆ ತನ್ನ ಶಾಸಕರ ಪಕ್ಷನಿಷ್ಠೆಯ ಬಗ್ಗೆ ಶಂಕೆ ಮೂಡಿದೆ. ಅವರು ಪಕ್ಷಾಂತರ ಮಾಡುವ ಭೀತಿಗೆ ಒಳಗಾಗಿ, ಬಿಜೆಪಿಯ ಮೇಲೆ ಗೂಬೆ ಕೂರಿಸಲು ಯತ್ನಿಸುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.