ನವದೆಹಲಿ: ಚುನಾವಣೆ ಎದುರಿಸಿದ ಈಶಾನ್ಯದ ಮೂರು ರಾಜ್ಯಗಳ ಪೈಕಿ ತ್ರಿಪುರಾ ಮತ್ತು ನಾಗಾಲ್ಯಾಂಡ್ನಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮೇಘಾಲಯದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ.
ಮೇಘಾಲಯದಲ್ಲಿ ಕಾನ್ರಾಡ್ ಸಂಗ್ಮಾ ಅವರ ಎನ್ಪಿಪಿ ಏಕೈಕ ದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸಾಧ್ಯತೆ ಇದೆ ಕೆಲ ಸಮೀಕ್ಷೆಗಳು ಹೇಳಿವೆ.
ನಾಗಾಲ್ಯಾಂಡ್ ಮತ್ತು ಮೇಘಾಲಯ ವಿಧಾನಸಭೆ ಚುನಾವಣೆಯ ಮತದಾನವು ಸೋಮವಾರ ಶಾಂತಿಯುತವಾಗಿ ನಡೆದಿದ್ದು, ಪ್ರಾಥಮಿಕ ವರದಿಗಳ ಪ್ರಕಾರ, ನಾಗಾಲ್ಯಾಂಡ್ನಲ್ಲಿ ಶೇ.84 ಮತ್ತು ಮೇಘಾಲಯದಲ್ಲಿ ಶೇ. 77 ಮತದಾನ ಆಗಿದೆ.
ತ್ರಿಪುರಾ ವಿಧಾನಸಭೆ ಚುನಾವಣೆಗೆ ಫೆ.16ರಂದು ಮತದಾನ ನಡೆದಿತ್ತು. ಮೂರೂ ರಾಜ್ಯಗಳ ಫಲಿತಾಂಶ ಮಾ.2ಕ್ಕೆ ಹೊರಬೀಳಲಿದೆ. ಈ ರಾಜ್ಯಗಳ ವಿಧಾನಸಭೆಯ ಬಲ ತಲಾ 60 ಇದೆ.